ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡದ ಭವಿಷ್ಯದ ಬಗ್ಗೆ ಮೈಕ್ ಹೆಸನ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದಾರೆ.
ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಇನ್ನು ಟೂರ್ನಿ ಆರಂಭಕ್ಕೂ ಮೊದಲೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ನಾಲ್ಕು ತಂಡಗಳು ಯಾವುವು ಎನ್ನುವ ಚರ್ಚೆ ಜೋರಾಗಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡದ ಮಾಜಿ ಕೋಚ್ ಮೈಕ್ ಹೆಸನ್, 2025ರ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡಗಳ ಪ್ಲೇ ಆಫ್‌ಗೇರಲಿವೆ? ಆರ್‌ಸಿಬಿ ಯಾವ ಸ್ಥಾನ ಪಡೆಯಲಿದೆ ಎನ್ನುವುದರ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಶತಾಯಗತಾಯ ಕಪ್ ಗೆಲ್ಲಲು ಎದುರು ನೋಡುತ್ತಿದೆ. ಈ ಕಾರಣಕ್ಕಾಗಿಯೇ ಮಧ್ಯಪ್ರದೇಶ ಮೂಲದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್‌ಗೆ ಆರ್‌ಸಿಬಿ ತಂಡದ ನಾಯಕತ್ವ ಪಟ್ಟ ಕಟ್ಟಿದೆ. ಆದರೆ ಆರ್‌ಸಿಬಿ ಮಾಜಿ ಕೋಚ್ ಮೈಕ್ ಹೆಸನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಪ್ಲೇ ಆಫ್ ಗೇರುವುದಿಲ್ಲ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಐಪಿಎಲ್ 2025: ಉದ್ಘಾಟನಾ ಪಂದ್ಯಕ್ಕೆ ಕಿಚ್ಚು ಹಚ್ಚಲು ರೆಡಿಯಾದ ಸಲ್ಮಾನ್, ದಿಶಾ, ಶಾರುಖ್!
ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ಮೂಲಕ ಆರ್‌ಸಿಬಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಆರ್‌ಸಿಬಿ ತಂಡವು ಟೂರ್ನಿಯಲ್ಲಿ 9ನೇ ಸ್ಥಾನ ಪಡೆಯಲಿದೆ ಎಂದು ಮೈಕ್ ಹೆಸನ್ ಭವಿಷ್ಯ ನುಡಿದಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಮೈಕ್ ಹೆಸನ್ ಪ್ರಕಾರ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: IPL 2025 ಆರ್‌ಸಿಬಿ-ಕೆಕೆಆರ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯೋದೇ ಡೌಟ್!
ಇನ್ನುಳಿದಂತೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ 5ನೇ ಸ್ಥಾನ, ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಆರನೇ ಸ್ಥಾನ ಹಾಗೂ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು 7ನೇ ಸ್ಥಾನ ಪಡೆಯಲಿವೆ ಎಂದು ಮೈಕ್ ಹೆಸನ್ ಭವಿಷ್ಯ ನುಡಿದಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 10ನೇ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮೈಕ್ ಹೆಸನ್ ಅವರ ಭವಿಷ್ಯ ನಿಜವಾಗುತ್ತಾ ಅಥವಾ ಆರ್‌ಸಿಬಿ ಸೇರಿದಂತೆ ಬೇರೆ ತಂಡಗಳು ಪ್ಲೇ ಆಫ್ ಪ್ರವೇಶಿಸುತ್ತಾ ಎನ್ನುವುದನ್ನು ನಾವು ಕಾದು ನೋಡಬೇಕಿದೆ.