ಅಹಮದಾಬಾದ್‌ನಲ್ಲಿಂದು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನಾಯಕ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದು, ಶುಭ್‌ಮನ್ ಗಿಲ್ ಗುಜರಾತ್ ತಂಡದ ನಾಯಕತ್ವ ವಹಿಸಲಿದ್ದಾರೆ.
ಅಹಮದಾಬಾದ್: ಕಳೆದ ಬಾರಿ ಕೆಕೆಆರ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಈ ವರ್ಷ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದು, ಮಂಗಳವಾರ ಗುಜರಾತ್ ಟೈಟಾನ್ಸ್ ವಿರುದ್ಧ ತಂಡಕ್ಕೆ ಗೆಲುವು ತಂದುಕೊಡುವ ಕಾತರದಲ್ಲಿದ್ದಾರೆ. ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಡೆಲ್ಲಿ, ಕೆಕೆಆರ್ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶ್ರೇಯಸ್, ಪಂಜಾಬ್‌ನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಪಡೆಯಲಿದ್ದಾರೆ ಎಂಬ ಕುತೂಹಲವಿದೆ. ಬ್ಯಾಟಿಂಗ್‌ನಲ್ಲೂ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿದೆ. ತಂಡದ ವಿದೇಶಿ ತಾರೆಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಮ್ಯಾಕ್ಸ್‌ವೆಲ್, ಸ್ಟೋಯ್ನಿಸ್, ಜೋಶ್ ಇಂಗ್ಲಿಸ್, ಮಾರ್ಕೊ ಯಾನ್ಸನ್ ತಂಡದ ಆಧಾರಸ್ತಂಭ. ನೇಹಲ್ ವಧೇರಾ, ಪ್ರಭ್‌ಸಿಮ್ರನ್ ಸಿಂಗ್, ಶಶಾಂಕ್ ಸಿಂಗ್ ಸೇರಿ ದೇಸಿ ಯುವ ಪ್ರತಿಭೆಗಳೂ ತಂಡದಲ್ಲಿದ್ದಾರೆ. ಅರ್ಶ್‌ದೀಪ್ ಸಿಂಗ್ ಹಾಗೂ ಯುಜುವೇಂದ್ರ ಚಹಲ್ ಜೊತೆ ಕರ್ನಾಟಕದ ವಿ.ವೈಶಾಖ್ ಬೌಲಿಂಗ್ ವಿಭಾಗಕ್ಕೆ ಶಕ್ತ ತುಂಬಲಿದ್ದಾರೆ.
ಇದನ್ನೂ ಓದಿ: ಸಿಎಸ್‌ಕೆಯನ್ನು ತಬ್ಬಿಬ್ಬು ಮಾಡಿದ ವಿಘ್ನೇಶ್ ಆಟೋ ಚಾಲಕನ ಮಗ! ಕೇರಳದ ಮುತ್ತು ಈಗ ಮುಂಬೈ ಸ್ವತ್ತು!
ಮತ್ತೊಂದೆಡೆ, ಭಾರತದ ಉಪನಾಯಕ ಶುಭ್‌ಮನ್ ಗಿಲ್ ಕಳೆದ ಬಾರಿಯ ಕಹಿ ಮರೆತು ಈ ಬಾರಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಜೋಸ್ ಬಟ್ಲರ್, ಗ್ಲೆನ್ ಫಿಲಿಪ್ಸ್, ಸಾಯ್ ಸುದರ್ಶನ್, ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್‌ರಂಹತ ಟಿ20 ತಜ್ಞ ಆಟಗಾರರಿದ್ದಾರೆ. ಆರ್‌ಸಿಬಿಯಿಂದ ಗುಜರಾತ್‌ಗೆ ಬಂದಿರುವ ಮೊಹಮ್ಮದ್ ಸಿರಾಜ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದ್ದಾರೆ ಎಂಬ ಕುತೂಹಲವಿದೆ. ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ ಕೂಡಾ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.
ಮುಖಾಮುಖಿ: 5
ಪಂಜಾಬ್: 2
ಗುಜರಾತ್: 3
ಇದನ್ನೂ ಓದಿ: IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್ ಶರ್ಮಾ ಸಾಹಸ!
ಸಂಭಾವ್ಯ ಆಟಗಾರರು
ಪಂಜಾಬ್: ಪ್ರಭ್‌ಸಿಮ್ರನ್, ಇಂಗ್ಲಿಸ್, ಶ್ರೇಯಸ್(ನಾಯಕ), ಮ್ಯಾಕ್ಸ್‌ವೆಲ್, ವಧೇರಾ, ಸ್ಟೋಯ್ನಿಸ್, ಶಶಾಕ್, ಯಾನ್ಸನ್, ಹರ್‌ಪ್ರೀತ್, ವೈಶಾಖ್, ಅರ್ಶ್‌ದೀಪ್, ಚಹಲ್.
ಗುಜರಾತ್: ಗಿಲ್(ನಾಯಕ), ಬಟ್ಲರ್, ಸುದರ್ಶನ್, ಫಿಲಿಪ್ಸ್, ಶಾರುಖ್, ವಾಷಿಂಗ್ಟನ್, ತೆವಾಟಿಯಾ, ರಶೀದ್, ಕಿಶೋರ್, ರಬಾಡ, ಸಿರಾಜ್, ಪ್ರಸಿದ್ಧ್ ಕೃಷ್ಣ.
ಪಂದ್ಯ: ಸಂಜೆ 7.30ಕ್ಕೆ
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಹೇಗೆ ವರ್ತಿಸಲಿದೆ ಎಂಬುದು ಊಹಿಸುವುದು ಕಷ್ಟ. ಕಳೆದ ವರ್ಷ ಟೈಟಾನ್ಸ್ 89ಕ್ಕೆ ಆಲೌಟಾಗಿತ್ತು. ಸನ್‌ರೈಸರ್ಸ್ 2 ಪಂದ್ಯಗಳಲ್ಲಿ ಕ್ರಮವಾಗಿ 159, 162 ರನ್ ಗಳಿಸಿತ್ತು. ಆದರೆ ಗುಜರಾತ್ 3 ಬಾರಿ 199+ ರನ್ ಕಲೆಹಾಕಿತ್ತು. ಇಲ್ಲಿ 2024ರಲ್ಲಿ 8ರಲ್ಲಿ 6 ಪಂದ್ಯದಲ್ಲಿ ಚೇಸಿಂಗ್ ತಂಡ ಗೆದ್ದಿದೆ.