ಗ್ಯಾಸ್‌ ಡೆಲಿವರಿ ಮ್ಯಾನ್‌ ಪುತ್ರ ರಿಂಕು ಸಿಂಗ್ ಐಪಿಎಲ್‌ ಸ್ಟಾರ್‌ ಆಗಿದ್ದು ಹೀಗೆ..

Published : Apr 11, 2023, 09:09 AM IST
ಗ್ಯಾಸ್‌ ಡೆಲಿವರಿ ಮ್ಯಾನ್‌ ಪುತ್ರ ರಿಂಕು ಸಿಂಗ್ ಐಪಿಎಲ್‌ ಸ್ಟಾರ್‌ ಆಗಿದ್ದು ಹೀಗೆ..

ಸಾರಾಂಶ

5 ಬಾಲ್‌ಗೆ 5 ಸಿಕ್ಸರ್‌ ಸಿಡಿಸಿದ ಕೆಕೆಆರ್‌ ಆಟಗಾರ ರಿಂಕು ಸಿಂಗ್‌ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ. ಗ್ಯಾಸ್‌ ಡೆಲಿವರಿಯಲ್ಲಿ ರಿಂಕು ತಂದೆಗೆ ನೆರವಾಗುತ್ತಿದ್ದರು ಹಾಗೂ ಟ್ಯೂಷನೊಂದರಲ್ಲಿ ಕಸ ಗುಡಿಸುವ ಕೆಲಸಕ್ಕೂ ಸೇರಿದ್ದರು ಎಂದು ತಿಳಿದುಬಂದಿದೆ. 

ನವದೆಹಲಿ (ಏಪ್ರಿಲ್ 11, 2023): ಐಪಿಎಲ್‌ನಿಂದ ಎಷ್ಟೋ ಆಟಗಾರರ ಜೀವನ ಬದಲಾಗಿದೆ. ಅವರ ಕಷ್ಟಗಳು ದೂರಾಗಿವೆ. ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದ ಅಲಿಗಢದಲ್ಲಿ ತಂದೆಗೆ ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಮಾಡಲು ನೆರವಾಗುತ್ತಾ, ವೃತ್ತಿಪರ ಕ್ರಿಕೆಟಿಗನಾಗಬೇಕು ಎನ್ನುವ ಕನಸು ಕಾಣುತ್ತಿದ್ದ ರಿಂಕು ಸಿಂಗ್‌, ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದ ಕೊನೆ ಓವರಲ್ಲಿ 5 ಬಾಲ್‌ಗೆ 5 ಸಿಕ್ಸರ್‌ ಸಿಡಿಸಿ ಕೋಲ್ಕತಾ ನೈಟ್‌ರೈಡ​ರ್ಸ್‌ಗೆ ಅವಿಸ್ಮರಣೀಯ ಗೆಲುವು ತಂದುಕೊಟ್ಟು ‘ಐಪಿಎಲ್‌ ಸ್ಟಾರ್‌’ ಆಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷವೂ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ರಿಂಕು ಇಂತದ್ದೇ ಪವಾಡ ಸದೃಶ ಇನ್ನಿಂಗ್ಸ್‌ ಆಡಿದ್ದರು. ಆದರೆ ಕೆಕೆಆರ್‌ ಗೆದ್ದಿರಲಿಲ್ಲ. ಈ ಸಲ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ರಿಂಕು ಹಿಂದೆ ಬೀಳಲಿಲ್ಲ.

ಇದನ್ನು ಓದಿ: ನೆಲ ಒರೆಸುವ ಕೆಲಸ ಬಿಟ್ಟು ಓಡಿ ಹೋಗಿದ್ದ ರಿಂಕು ಸಿಂಗ್‌ ಈಗ ಐಪಿಎಲ್ ಸೂಪರ್‌ ಸ್ಟಾರ್‌..!

7 ಸದಸ್ಯರ ಕುಟುಂಬ:
ರಿಂಕು ಅವರದ್ದು 7 ಸದಸ್ಯರ ಕುಟುಂಬ. ತಂದೆ, ತಾಯಿ ಜತೆ ರಿಂಕುಗೆ ನಾಲ್ವರು ಸಹೋದರರಿದ್ದಾರೆ. ತಂದೆ ಖಾನ್‌ಚಾಂದ್‌ ಗೃಹಬಳಕೆ ಗ್ಯಾಸ್‌ ಸಿಲಿಂಡರ್‌ಗಳ ಡೆಲಿವರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ರಿಂಕು ಹಾಗೂ ಕುಟುಂಬಕ್ಕೆ ಜೀವನ ಸಾಗಿಸುವುದು ಕಷ್ಟವಾಗಿತ್ತು. ಆದರೆ ಛಲ ಬಿಡದ ರಿಂಕು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲ ಕುಟುಂಬದವರ ಜೀವನವನ್ನೂ ಬದಲಿಸಿದ್ದಾರೆ.

ಕಸ ಗುಡಿಸುವ ಕೆಲಸಕ್ಕೆ ಹೋಗ್ಬೇಕಿತ್ತು!:
ರಿಂಕು 8-9 ವರ್ಷಗಳ ಹಿಂದೆ ಉತ್ತರ ಪ್ರದೇಶ ಅಂಡರ್‌-16 ತಂಡದಲ್ಲಿ ಆಡುತ್ತಿದ್ದ ಸಮಯ. ಕುಟುಂಬ ನಿರ್ವಹಣೆಗೆ ಐವರು ಸಹೋದರರು ಸಿಕ್ಕ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಾ ತಂದೆಗೆ ನೆರವಾಗುತ್ತಿದ್ದರು. ಆ ಸಮಯದಲ್ಲಿ ಅವರ ಸಹೋದರನೊಬ್ಬ ರಿಂಕುಗೆ ಕಸ ಗುಡಿಸುವ ಕೆಲಸವೊಂದಕ್ಕೆ ಸೇರಿಸಿದ್ದರಂತೆ. ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಿಂಕು ಈ ವಿಷಯವನ್ನು ಬಹಿರಂಗಪಡಿಸಿದ್ದರು. ‘ಟ್ಯೂಷನ್‌ ಸೆಂಟರ್‌ನಲ್ಲಿ ನೀನು ಕಸ ಗುಡಿಸಿ, ನೆಲ ಒರೆಸುತ್ತೀಯ ಎಂದು ಯಾರ ಬಳಿಯೂ ಹೇಳುವ ಅಗತ್ಯವಿಲ್ಲ. ನಿತ್ಯ ಬೆಳಗ್ಗೆ ನಿನ್ನ ಪಾಡಿಗೆ ಹೋಗಿ ಕೆಲಸ ಮುಗಿಸಿ ಬಂದರಾಯಿತು. ಯಾರಿಗೂ ವಿಷಯ ತಿಳಿಯುವುದಿಲ್ಲ’ ಎಂದು ರಿಂಕು ಸಿಂಗ್‌ರ ತಂದೆ ಅವರಿಗೆ ಹೇಳಿದ್ದರಂತೆ. ಆದರೆ ರಿಂಕುಗೆ ಆ ಕೆಲಸ ಇಷ್ಟವಿರಲಿಲ್ಲ. ಮಗ ಕೆಲಸಕ್ಕೆ ಕೈ ಜೋಡಿಸದೆ ಕ್ರಿಕೆಟ್‌ ಆಡುವುದಕ್ಕೆ ತಂದೆ ಒಪ್ಪುತ್ತಿರಲಿಲ್ಲ.

ಇದನ್ನೂ ಓದಿ: IPL 2023: ವೆಂಕಟೇಶ್ ಅಯ್ಯರ್, ರಿಂಕು ಸಿಕ್ಸರ್ ಆರ್ಭಟಕ್ಕೆ ಶರಣಾದ ಹಾಲಿ ಚಾಂಪಿಯನ್‌ ಗುಜರಾತ್..!

ಕೊನೆಗೆ ಅಲಿಗಢದ ಪ್ರತಿಷ್ಠಿತ ಶಾಲೆಯೊಂದು ಶಾಲಾ ವಿಶ್ವಕಪ್‌ ಆಯೋಜಿಸಿದಾಗ ಅದರಲ್ಲಿ ಪಾಲ್ಗೊಂಡಿದ್ದ ರಿಂಕು, ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿ ಬೈಕ್‌ವೊಂದನ್ನು ಬಹುಮಾನವಾಗಿ ಪಡೆದರು. ಆ ಟೂರ್ನಿಯಲ್ಲಿ ರಿಂಕು ಆಟವನ್ನು ನೋಡಿದ್ದ ಖಾನ್‌ಚಾಂದ್‌ಗೆ ತಮ್ಮ ಮಗನ ಪ್ರತಿಭೆಯ ಅರಿವಾಗಿದ್ದೇ ಆಗ. ಆ ನಂತರ ರಿಂಕು ಅವರ ಕನಸಿಗೆ ಖಾನ್‌ಚಾಂದ್‌ ಅಡ್ಡಿಯಾಗಲಿಲ್ಲ.

ಕ್ರಿಕೆಟ್‌ ಹಾದಿ ಸುಗಮವಾಗಿರಲಿಲ್ಲ:
2 ಬಾರಿ ಉತ್ತರ ಪ್ರದೇಶ ಅಂಡರ್‌-16 ಟ್ರಯಲ್ಸ್‌ನಲ್ಲಿ ಕಡೆಗಣಿಸಲ್ಪಟ್ಟಿದ್ದ ರಿಂಕು, ಕ್ರಿಕೆಟ್‌ ಬಿಟ್ಟುಬಿಡುವ ಬಗ್ಗೆಯೂ ಚಿಂತಿಸಿದ್ದರಂತೆ. ಆದರೆ 2012ರ ವಿಜಯ್‌ ಮರ್ಚೆಂಟ್‌ ಟ್ರೋಫಿಯ ಪಂದ್ಯವೊಂದರಲ್ಲಿ 154 ರನ್‌ ಸಿಡಿಸಿದ ಬಳಿಕ ರಿಂಕು ಆತ್ಮವಿಶ್ವಾಸ ವೃದ್ಧಿಸಿತು.

ಕೆಲವೇ ವರ್ಷಗಳಲ್ಲಿ ಅವರು ಯು.ಪಿ. ಅಂಡರ್‌-19 ತಂಡಕ್ಕೆ ಕಾಲಿಟ್ಟು ಆ ಬಳಿಕ ನೇರವಾಗಿ ಯು.ಪಿ. ಏಕದಿನ ತಂಡಕ್ಕೆ ಆಯ್ಕೆಯಾದರು. ಅಲ್ಲಿಂದಾಚೆಗೆ ಹಿಂದಿರುಗಿ ನೋಡಿಲ್ಲ.

ಇದನ್ನೂ ಓದಿ: IPL 2023: ಕೆಕೆಆರ್ ಸಿಕ್ಸರ್ ಕಿಂಗ್ ರಿಂಕು ಸಿಂಗ್‌ ಜತೆ ಯಶ್ ದಯಾಳ್‌ ಹಳೆ ಚಾಟ್‌ ವೈರಲ್..! ಅಂಥದ್ದೇನಿದೆ?

ಸಾಲವೂ ತೀರಿದೆ, ಬದುಕೂ ಬದಲಾಗಿದೆ:
2018ರಲ್ಲಿ ಕೆಕೆಆರ್‌ ಪರ ಪಾದಾರ್ಪಣೆ ಮಾಡಿದ ರಿಂಕು ಮೊದಲ 3 ವರ್ಷ ಆಡಿದ್ದು 10 ಪಂದ್ಯ ಮಾತ್ರ. ಕಳೆದ ಆವೃತ್ತಿಯಲ್ಲಿ ತಮ್ಮ ಅಸಲಿ ಸಾಮರ್ಥ್ಯ ಪ್ರದರ್ಶಿಸಿದ ರಿಂಕು ಈಗ ಕೆಕೆಆರ್‌ನ ಫಿನಿಶರ್‌. 80 ಲಕ್ಷ ರು.ಗೆ ಬಿಕರಿಯಾಗಿದ್ದ ರಿಂಕು ಕಳೆದ 3 ವರ್ಷದಲ್ಲಿ ತಮ್ಮ ಐಪಿಎಲ್‌ ವೇತನದಿಂದ ಕುಟುಂಬದ ಸಾಲಗಳನ್ನು ತೀರಿಸಿದ್ದು, ಹೊಸ ಮನೆಯನ್ನೂ ಖರೀದಿಸಿದ್ದಾರೆ.
ರಿಂಕು ಅವರಲ್ಲಿ ಪ್ರತಿಭೆ, ಸಾಮರ್ಥ್ಯ ಎರಡೂ ಇದೆ. ಆದರೆ ಭಾನುವಾರದ ಆಟ ಅವರಲ್ಲಿ ದೊಡ್ಡ ವೇದಿಕೆಯಲ್ಲಿ ಬೃಹತ್‌ ಕ್ಷಣಗಳನ್ನು ಸೃಷ್ಟಿಸುವ, ಕ್ರಿಕೆಟ್‌ ಜಗತ್ತಿನ ಮನಸನ್ನು ಗೆಲ್ಲುವ ತಾಕತ್ತೂ ಇದೆ ಎನ್ನುವುದನ್ನು ತೋರಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌