IPL 2023: ಚಿನ್ನಸ್ವಾಮಿಯಲ್ಲಿ ಪೂರನ್‌ ವೈಲೆಂಟ್‌, ಆರ್‌ಸಿಬಿ ಫುಲ್‌ ಸೈಲೆಂಟ್‌!

By Santosh NaikFirst Published Apr 10, 2023, 11:31 PM IST
Highlights

ವೆಸ್ಟ್‌ ಇಂಡೀಸ್‌ನ ವಿಧ್ವಂಸಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಬಾರಿಸಿದ ಕೇವಲ 15 ಎಸೆತಗಳ ಆಕರ್ಷಕ ಅರ್ಧಶತಕದ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡಸ ಐಪಿಎಎಲ್‌ 2023ಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 1 ವಿಕೆಟ್‌ಗಳಿಂದ ಸೋಲಿಸಿದೆ.
 

ಬೆಂಗಳೂರು (ಏ.10): ದಾಖಲೆಯ 200 ಪ್ಲಸ್‌ ಮೊತ್ತ, 100 ರನ್‌ ಬಾರಿಸುವ ಒಳಗಾಗಿಯೇ ಎದುರಾಳಿ ತಂಡದ ನಾಲ್ಕು ವಿಕೆಟ್‌ ಉರುಳಿಸಿದ್ದ ಹೊರತಾಗಿಯೂ ಆರ್‌ಸಿಬಿ ತಂಡ ಲಖನೌ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ 1 ವಿಕೆಟ್‌ಗಳ ಸೋಲು ಕಂಡಿದೆ. ಇದಕ್ಕೆ ಕಾರಣವಾಗಿದ್ದು ವೆಸ್ಟ್‌ ಇಂಡೀಸ್‌ನ ವಿಧ್ವಂಸಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಅವರ ಬಿರುಗಾಳಿಯಂಥ ಇನ್ನಿಂಗ್ಸ್‌. ಇದುವೇ ಲಖನೌ ರೋಚಕ ಗೆಲುವಿಗೆ ಕಾರಣವಾಯಿತು. ಸ್ಟೋಯಿನಿಸ್‌ ಅಬ್ಬರದ ಆಟ ಮುಗಿಸಿ 11ನೇ ಓವರ್‌ನಲ್ಲಿ ಡಗ್‌ಔಟ್‌ ಸೇರಿದಾಗ ನಿಕೋಲಸ್‌ ಪೂರನ್‌ ಕ್ರೀಸ್‌ಗೆ ಇಳಿದಿದ್ದರು. 11ನೇ ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ಗೆ 105 ರನ್‌ ಬಾರಿಸಿದ್ದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಗೆಲುವಿಗೆ ಕೊನೆಯ 54 ಎಸೆತಗಳಲ್ಲಿ 108 ರನ್‌ ಬಾರಿಸುವ ಸವಾಲಿತ್ತು. ಆದರೆ, ಆರ್‌ಸಿಬಿಯ ಅಗ್ರಮಾನ್ಯ ಬೌಲರ್‌ಗಳನ್ನೆಲ್ಲಾ, ಲೋಕಲ್‌ ಟೂರ್ನಿಯಲ್ಲಿ ಎದುರಿಸುವ ಬೌಲರ್‌ಗಳಂತೆ ನಿಕೋಲಸ್‌ ಪೂರನ್‌ ಚೆಂಡಾಡಿದರು. ಇದರಿಂದಾಗಿ ಬರೀ 15 ಎಸೆತಗಳಲ್ಲಿ ಪೂರನ್‌ ಅರ್ಧಶತಕ ಬಾರಿಸಿದರು. ಪೂರನ್‌ ಅರ್ಧಶತಕ ಬಾರಿಸಿ ಬ್ಯಾಟ್‌ ಏರಿಸುವ ವೇಳೆಗಾಗಲೇ ಆರ್‌ಸಿಬಿ ಪ್ಲೇಯರ್‌ಗಳ ಮುಖದಲ್ಲಿ ಪಂದ್ಯ ಗೆಲ್ಲುವ ಯಾವ ಉತ್ಸಾಹವೂ ಇದ್ದಂತಿರಲಿಲ್ಲ. ಪೂರನ್‌ ಅಷ್ಟು ವೈಲೆಂಟ್‌ ಆಗಿ ಬ್ಯಾಟಿಂಗ್‌ ಮಾಡಿದ್ದರು. 17ನೇ ಓವರ್‌ನಲ್ಲಿ ಪೂರನ್‌ ಔಟಾಗುವ ವೇಳೆ 19 ಎಸೆತಗಳಲ್ಲಿ4 ಬೌಂಡರಿ ಹಾಗೂ 7 ಮನಮೋಹಕ ಸಿಕ್ಸರ್‌ ಮೂಲಕ 62 ರನ್‌ ಚಚ್ಚಿದ್ದರೆ, ತಂಡದ ಗೆಲುವಿಗೆ 18 ಎಸೆತಗಳಲ್ಲಿ 24 ರನ್‌ ಬೇಕಿತ್ತು.

213ರ ಚೇಸಿಂಗ್ ಆರಂಭಿಸಿದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿಯೇ ಹಿನ್ನಡೆ ಕಂಡಿತ್ತು. 23 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡರೆ, 99 ರನ್‌ ಬಾರಿಸುವ ವೇಳೆಗೆ 4 ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ನಿಕೋಲಸ್‌ ಪೂರನ್‌ ಪಂದ್ಯದ ದಿಕ್ಕನೇ ಬದಲಿಸಿ ತಂಡದ ಗೆಲುವಿಗೆ ಕಾರಣರಾದರು. ಲಖನೌ ಸೂಪರ್‌ ಜೈಂಟ್ಸ್‌ 9 ವಿಕೆಟ್‌ಗೆ 213 ರನ್‌ ಬಾರಿಸಿ ಗೆಲುವು ಕಂಡಿತು.

IPL 2023: ಬ್ಯಾಟಿಂಗ್‌ ಸ್ವರ್ಗದಲ್ಲಿ ಆರ್‌ಸಿಬಿ ತ್ರಿಮೂರ್ತಿಗಳ ರುದ್ರತಾಂಡವ

17ನೇ ಓವರ್‌ನ ಕೊನೆಯ ಎಸೆತದಲ್ಲಿ ಪೂರನ್‌ ಔಟಾದಾಗ, ಲಖನೌ ತಂಡದ ಗೆಲುವಿಗೆ 18 ಎಸೆತಗಳಲ್ಲಿ 24 ರನ್‌ ಬೇಕಿದ್ದವು. ಈ ಹಂತದಲ್ಲಿ ಲಖನೌ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದುಕೊಳ್ಳಲಾಗಿತ್ತು. ಆದರೆ, ಪಂದ್ಯದ ಕೊನೆಯ ಎಸೆತದವರೆಗೂ ಹೋರಾಟ ಉಳಿಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾದರೂ, ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ ಕೊನೆಯ ವಿಕೆಟ್‌ ಇರುವಾಗ ಕೊನೇ ಎಸೆತದಲ್ಲಿ ಗೆಲುವು ಕಂಡ 2ನೇ ದೃಷ್ಟಾಂತ ಇದಾಗಿದೆ. 2018ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇದೇ ರೀತಿಯಲ್ಲಿ ಗೆಲುವು ಕಂಡಿತ್ತು. ಇನ್ನು ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್‌ ಮಾಡಿ 200 ಪ್ಲಸ್‌ ರನ್‌ ಬಾರಿಸಿದರೂ ಸೋಲು ಕಂಡಿದ್ದು ಇದು ಐದನೇ ಬಾರಿ. ಐಪಿಎಲ್‌ನಲ್ಲಿ ಯಾವ ತಂಡ ಕೂಡ ಈ ಕುಖ್ಯಾತಿಯನ್ನು ಹೊಂದಿಲ್ಲ.

ಕೆ ಎಲ್ ರಾಹುಲ್‌ ಬಗ್ಗೆ ಎಚ್ಚರಿಕೆಯಿಂದರಿ: RCB ಪಡೆಗೆ ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ಕಿವಿಮಾತು

ಐಪಿಎಲ್‌ನ ಜಂಟಿ 2ನೇ ಅತಿವೇಗದ ಅರ್ಧಶತಕ: ನಿಕೋಲಸ್‌ ಪೂರನ್‌ ಬಾರಿಸಿದ್ದ ಐಪಿಎಲ್‌ನ ಜಂಟಿ 2ನೇ ಅತಿವೇಗದ ಅರ್ಧಶತಕ. 2018ರಲ್ಲಿ ಕೆಎಲ್‌ ರಾಹುಲ್‌ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಹಾಗೂ 2022ರಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಇಷ್ಟೇ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಜಂಟಿ ಅಗ್ರಸ್ಥಾನಲ್ಲಿದೆ. ಇನ್ನು 2014ರಲ್ಲಿ ಸನ್‌ರೈಸರ್ಸ್‌ ವಿರುದ್ಧ ಯೂಸುಫ್‌ ಪಠಾಣ್‌, 2017ರಲ್ಲಿ ಆರ್‌ಸಿಬಿ ವಿರುದ್ಧ ಸುನೀಲ್‌ ನಾರಾಯಣ್‌ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

 

click me!