
ದುಬೈ(ನ.10) ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಡೆದಿರುವ ಪಾಕಿಸ್ತಾನ ಸದ್ಯ ಕ್ರೀಡಾಂಗಣಗಳನ್ನು ನವೀಕರಣ ಮಾಡುತ್ತಿದೆ. ಕೈಯಲ್ಲಿದ್ದ ದುಡ್ಡು, ಇತರ ದುಡ್ಡನ್ನೆಲ್ಲಾ ಹಾಕಿ ಸೊರಗಿರುವ ಕ್ರೀಡಾಂಗಣವನ್ನು ನವೀಕರಣ ಮಾಡುತ್ತಿದೆ. ಇದರ ಜೊತೆಗೆ ಭಾರಿ ತಯಾರಿಗಳು ನಡೆಯುತ್ತದೆ. ಆದರೆ ಐಸಿಸಿಯ ನಿರ್ಧಾರದಿಂದ ಪಾಕಿಸ್ತಾನ ಕಂಗಾಲಾಗಿದೆ. ನವೆಂಬರ್ 11 ರಂದು ಐಸಿಸಿ ಅಧಿಕಾರಿಗಳು ಸಭೆ ಸೇರಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಘೋಷಣೆ ಮಾಡಲು ನಿರ್ಧರಿಸಿತ್ತು. ಆದರೆ ಭಾರತ ತಂಡ ಪಾಕಿಸ್ತಾನ ಪ್ರವಾಸ ನಿರಾಕರಿಸುವ ಕಾರಣ ಇದೀಗ ವೇಳಾಪಟ್ಟಿ ಘೋಷಣೆ ಸಭೆಯನ್ನೇ ಐಸಿಸಿ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದಿಂದ ಚಾಂಪಿಯನ್ಸ್ ಟ್ರೋಫಿ ಎತ್ತಂಗಡಿಯುವ ಸಾಧ್ಯತೆಗಳು ಕಾಣಿಸುತ್ತಿದೆ. ಈ ಬೆಳವಣಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕಂಗಾಲಾಗಿಸಿದೆ.
ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿ ನ.11ರಂದು ಐಸಿಸಿ ಸಭೆ ಬಳಿಕ ಘೋಷಿಸುವುದಾಗಿ ಹೇಳಿತ್ತು. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಟೀಂ ಇಂಡಿಯಾ ನಿರಾಕರಿಸಿದೆ. ಕೇಂದ್ರ ಸರ್ಕಾರ ಪಾಕ್ ಪ್ರವಾಸಕ್ಕೆ ಅನುಮತಿ ನೀಡಿಲ್ಲ. ಈ ಅಧಿಕೃತ ಮಾಹಿತಿಯನ್ನು ಬಿಸಿಸಿಐ, ನೇರವಾಗಿ ಐಸಿಸಿಗೆ ರವಾನಿಸಿದೆ. ಭಾರತ ತಂಡ ಪ್ರವಾಸ ನಿರಾಕರಣೆ ಖಚಿತವಾಗುತ್ತದ್ದಂತೆ ಐಸಿಸಿ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ಈ ಕುರಿತು ಮಾಹಿತಿ ನೀಡಿದೆ.
ಹಠ ಕೈಬಿಟ್ಟ ಪಿಸಿಬಿ: ಹೈಬ್ರಿಡ್ ಮಾದರಿ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಒಪ್ಪಿಗೆ?
ಭಾರತ ತಂಡ ಪ್ರವಾಸ ಮಾಡದಿದ್ದರೆ ಟೂರ್ನಿ ಆಯೋಜನೆ ಕಷ್ಟವಾಗಲಿದೆ. ಭಾರತದ ಪಂದ್ಯಗಳು ಎಲ್ಲಿ ನಡೆಸಬೇಕು? ಪಾಕಿಸ್ತಾನದಿಂದ ಬೇರೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜನೆ ಕುರಿತು ಪಿಸಿಬಿ ಹಾಗೂ ಐಸಿಸಿ ಚರ್ಚಿಸಬೇಕಿದೆ. ಹೀಗಾಗಿ ನಾಳೆ(ನವೆಂಬರ್ 11) ರಂದು ನಡೆಯಬೇಕಿದ್ದ ವೇಳಾಪಟ್ಟಿ ಸಭೆ ಹಾಗೂ ಘೋಷಣೆಯನ್ನು ಐಸಿಸಿ ರದ್ದುಗೊಳಿಸಿದೆ. ಐಸಿಸಿ ಸಭೆ ರದ್ದು ಘೋಷಣೆ ಮಾಡುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ರೋಶಗೊಂಡಿದೆ. ನಿಯಮದ ಪ್ರಕಾರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ ಆಯೋಜಿಸಬೇಕು. ಇದಕ್ಕೆ ಭಾರತ ಪ್ರವಾಸ ಮಾಡುತ್ತಿಲ್ಲ ಎಂದಾದರೆ ಟೂರ್ನಿ ಬೇರೆಡೆಗೆ ಸ್ಥಳಾಂತರ ಮಾಡಲು ಪಾಕಿಸ್ತಾನ ಅನುಮತಿಸುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಇತ್ತ ಭಾರತ ಪ್ರವಾಸ ನಿರಾಕರಿಸಿದೆ, ಲಿಖಿತ ರೂಪದಲ್ಲಿ ಹೇಳಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು. ಆದರೆ ಭಾರತ ನೇರವಾಗಿ ಐಸಿಸಿ ಮಾಹಿತಿ ನೀಡಿದೆ. ಇದೀಗ ಐಸಿಸಿ ಸಂಕಷ್ಟಕ್ಕೆ ಸಿಲುಕಿದೆ. ಭಾರತ ಪಂದ್ಯಗಳನ್ನು ಬೇರೆ ದೇಶದಲ್ಲಿ, ಇತರ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಿದರೆ ಆದಾಯ ಹಂಚಿಕೆಯಾಗಿ ಐಸಿಸಿಗೆ ಬರವು ಆದಾಯ ಕುಸಿಯಲಿದೆ ಅನ್ನೋ ಚಿಂತೆ ಶುರುವಾಗಿದೆ.
ಭಾರತದ ನಿರ್ಧಾರ ಖಚಿತವಾಗುತ್ತಿದ್ದಂತೆ ಪಾಕಿಸ್ತಾನ ಕಂಗಲಾಗಿದೆ. ಇತ್ತ ಐಸಿಸಿ ವೇಳಾಪಟ್ಟಿ ಘೋಷಣೆ ಸಭೆ ರದ್ದು ಮಾಡಿರುವುದು ಪಾಕಿಸ್ತಾನದ ಆತಂಕ ಹೆಚ್ಚಿದೆ. ಇದೀಗ ಪಾಕಿಸ್ತಾನ ಹೈಬ್ರಿಡ್ ಮಾಡೆಲ್ ಕುರಿತು ಚರ್ಚಿಸಲು ಸಿದ್ಧವಿದೆ ಎಂದಿದೆ. ಪಾಕಿಸ್ತಾನದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೈತಪ್ಪದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.