ತಿಲಕ್ ವರ್ಮಾ ಭರ್ಜರಿ ಸೆಂಚುರಿ, ಹರಿಣಗಳೆದುರು ಭಾರತ ಜಯಭೇರಿ!

By Naveen Kodase  |  First Published Nov 14, 2024, 8:04 AM IST

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದೆ. ಭರ್ಜರಿ ಶತಕ ಸಿಡಿಸಿದ ತಿಲಕ್ ವರ್ಮಾ ಗೆಲುವಿನ ರೂವಾರಿ ಎನಿಸಿಕೊಂಡರು.


ಸೆಂಚೂರಿಯನ್: ಸೂಪರ್ ಸ್ಪೋರ್ಟ್ ಪಾರ್ಕ್ ರನ್ ಹೊಳೆಗೆ ನಿರೀಕ್ಷೆಯಂತೆಯೇ ಸಾಕ್ಷಿಯಾಯಿತು. ಆಕರ್ಷಕ ಬೌಂಡರಿ, ಸಿಕ್ಸರ್‌ಗಳು ಸ್ಥಳೀಯ ಪ್ರೇಕ್ಷಕರ ಮನಸೆಳೆದವು. ಆದರೆ ಗೆಲುವು ಭಾರತದ ಪಾಲಾಯಿತು. ತಿಲಕ್ ವರ್ಮಾರ ಸ್ಫೋಟಕ ಶತಕ, ಡೆತ್ ಓವರಲ್ಲಿ ಅರ್ಶದೀಪ್‌ ಸಿಂಗ್‌ ಸಮಯೋಚಿತ ಬೌಲಿಂಗ್ ಪ್ರದರ್ಶನ, ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 11 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿತು. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದ್ದು, ಸರಣಿ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತಕ್ಕೆ ತಿಲಕ್ ವರ್ಮಾರ ಸ್ಫೋಟಕ ಶತಕ, ಅಭಿಷೇಕ್ ಶರ್ಮಾರ ಅಮೋಘ ಅರ್ಧಶತಕ ನೆರವಾಯಿತು. 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ ಭಾರತ 219 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಹೈನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸನ್‌ ಹೋರಾಟದ ಹೊರತಾಗಿಯೂ 20 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಸೋಲೊಪಿಕೊಂಡಿತು.

Latest Videos

undefined

ಸೌತ್‌ ಆಫ್ರಿಕಾ ಬೌಲರ್‌ಗಳ ಚೆಂಡಾಡಿ ಸೆಂಚುರಿ ಬಾರಿಸಿದ ತಿಲಕ್‌ ವರ್ಮ, 7 ಸಿಕ್ಸರ್‌ಗಳು ಹೇಗಿದ್ದವು ಗೊತ್ತಾ?

ಸಂಜು 'ಸೊನ್ನೆ', ತಿಲಕ್ ಸೆಂಚುರಿ: ಟಿ20ಯಲ್ಲಿ ಸತತ 2 ಶತಕ ಸಿಡಿಸಿದ್ದ ಸಂಜು ಸ್ಯಾಮನ್, ಸತತ 2ನೇ ಬಾರಿ ಡಕೌಟ್ ಸಹ ಆದರು. 2ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ, ಕೇವಲ 8.4 ಓವರಲ್ಲಿ 107 ರನ್ ಜೊತೆಯಾಟವಾಡಿ ಭಾರತಕ್ಕೆ ಆಸರೆಯಾದರು. ಅಭಿಷೇಕ್ 25 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಆದರೂ, ತಿಲಕ್ ಅಬ್ಬರ ನಿಲ್ಲಲಿಲ್ಲ. 51 ಎಸೆತದಲ್ಲಿ ಶತಕ ಪೂರೈಸಿದ ತಿಲಕ್ 56 ಎಸೆತದಲ್ಲಿ 8 ಬೌಂಡರಿ, 7ಸಿಕರ್‌ಗಳೊಂದಿಗೆ 107 ರನ್ ಗಳಿಸಿ ಔಟಾಗದೆ ಉಳಿದರು. ಹಾರ್ದಿಕ್ (18), ರಮಣ್‌ ದೀಪ್ (15) ರಿಂದ ಉಪಯುಕ್ತ ಕೊಡುಗೆ ಮೂಡಿಬಂತು.

ದ.ಆಫ್ರಿಕಾ ಹೋರಾಟ: ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ ಕೊನೆಯವರೆಗೂ ಹೋರಾಟ ಬಿಡಲಿಲ್ಲ. 10 ಓವರಲ್ಲಿ 84 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡ ದ.ಆಫ್ರಿಕಾ ಸಂಕಷ್ಟದಲ್ಲಿತ್ತು. ಆದರೆ ಕ್ಲಾಸೆನ್ ಹಾಗೂ ಯಾನ್ಸನ್ ದ.ಆಫ್ರಿಕಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಕ್ಲಾಸೆನ್‌ 22 ಎಸೆತದಲ್ಲಿ 1 ಬೌಂಡರಿ, 4 ಸಿಕರ್‌ನೊಂದಿಗೆ 41 ರನ್ ಸಿಡಿಸಿದರು. 18ನೇ ಓವರಲ್ಲಿ ಕ್ಲಾಸೆನ್ ಔಟಾದ ಮೇಲೆ ಭಾರತದ ಗೆಲುವಿನ ಹಾದಿ ಸುಗಮವಾಯಿತು ಎನ್ನುವಷ್ಟರಲ್ಲಿ ಯಾನ್ಸನ್ ಅಬ್ಬರ ಶುರುವಾಯಿತು. 4 ಬೌಂಡರಿ, 5 ಸಿಕರ್ ನೊಂದಿಗೆ ಕೇವಲ 16 ಎಸೆತದಲ್ಲಿ ಅರ್ಧಶತಕ ಪೂರೈಸಿದ ಯಾನ್ಸನ್, ಭಾರತೀಯರನ್ನು ತುದಿಗಾಲಲ್ಲಿ ನಿಲ್ಲಿಸಿದರು. ಕೊನೆಯ 2 ಓವರಲ್ಲಿ ಗೆಲ್ಲಲು 51 ರನ್ ಬೇಕಿತ್ತು. 19ನೇ ಓವರಲ್ಲಿ ಹಾರ್ದಿಕ್ 26 ರನ್ ಚಚ್ಚಿಸಿಕೊಂಡರು. ಕೊನೆಯ 6 ಎಸೆತದಲ್ಲಿ 25 ರನ್ ಬೇಕಿತ್ತು. ಆದರೆ, ಅರ್ಶ್‌ದೀಪ್‌ ಆಕರ್ಷಕ ದಾಳಿ ದ. ಆಫ್ರಿಕಾವನ್ನು ಜಯದಿಂದ ದೂರವಿರಿಸಿತು. ಯಾನ್ಸನ್‌ರ ವಿಕೆಟ್ ಪತನಗೊಳ್ಳುತ್ತಲೇ ಭಾರತದ ಗೆಲುವು ಖಚಿತವಾಯಿತು.

ಬಿಗ್ ಹಿಟ್ಟರ್ ರಿಂಕು ಸಿಂಗ್ ಕೆಕೆಆರ್ ನೂತನ ಕ್ಯಾಪ್ಟನ್? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್

ಸ್ಕೋರ್: ಭಾರತ 20 ಓವರಲ್ಲಿ 219/6 (ತಿಲಕ್ 107*, ಅಭಿಷೇಕ್ 50, ಕೇಶವ್ 2-36), ದ.ಆಫ್ರಿಕಾ 20 ಓವರಲ್ಲಿ 208/7 (ಯಾನ್ಸನ್ 54, ಕ್ಲಾಸೆನ್ 41, ಅರ್ಶದೀಪ್ 3-37) 
ಪಂದ್ಯಶ್ರೇಷ್ಠ: ತಿಲಕ್ ವರ್ಮಾ

ಆಟಕ್ಕೆ ಕೀಟಗಳ ಕಾಟ!

ದ.ಆಫ್ರಿಕಾ ಇನ್ನಿಂಗ್ಸ್ ಆರಂಭಗೊಂಡ ಕೆಲವೇ ನಿಮಿಷ ಬಳಿಕ ಕ್ರೀಡಾಂಗಣಕ್ಕೆ ಕೀಟಗಳು ದಾಳಿ ಮಾಡಿದವು. ಆಟಗಾರರ ಕಣ್ಣಿನೊಳಗೆ ಕೀಟಗಳು ಹೋಗುವ ಅಪಾಯವಿದ್ದ ಕಾರಣ, ಕೆಲ ಹೊತ್ತು ಆಟವನ್ನು ಸ್ಥಗಿತಗೊಳಿಸಲಾಗಿತ್ತು. 20-30 ನಿಮಿಷಗಳ ಬಳಿಕ ಆಟ ಪುನಾರಂಭಗೊಂಡಿತು.

ಸತತ 3ನೇ ವರ್ಷ ಭಾರತ ‘ಶತಕ’ ದಾಖಲೆ!

ಅಂ.ರಾ. ಟಿ20ಯಲ್ಲಿ ಕಳೆದ 3 ವರ್ಷದಿಂದ ಭಾರತೀಯರೇ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ತಿಲಕ್‌ರಿಂದ ದಾಖಲಾದ ಶತಕ ಈ ವರ್ಷ ಭಾರತೀಯರಿಂದ ದಾಖಲಾದ 5ನೇ ಶತಕ ಎನಿಸಿದೆ. 2023ರಲ್ಲೂ ಭಾರತೀಯರು 5 ಶತಕ ಬಾರಿಸಿದ್ದರು. ಇನ್ನು 2022ರಲ್ಲಿ ಭಾರತದಿಂದ 4 ಶತಕ ದಾಖಲಾಗಿತ್ತು.

12 ಆಟಗಾರರು: ಅಂ.ರಾ. ಟಿ20ಯಲ್ಲಿ ಭಾರತದ 12 ಆಟಗಾರರು ಶತಕ ಬಾರಿಸಿದ್ದಾರೆ. ಯಾವುದೇ ತಂಡದ ಪರ ಇದು ಗರಿಷ್ಠ. ಇಂಗ್ಲೆಂಡ್‌, ದ.ಆಫ್ರಿಕಾ ಪರ ತಲಾ 6 ಆಟಗಾರರಿಂದ ಶತಕ ದಾಖಲಾಗಿದ್ದು, ಜಂಟಿ 2ನೇ ಸ್ಥಾನ ಪಡೆದಿವೆ.

ರೋಹಿತ್‌ ಶರ್ಮಾ 5

ಸೂರ್ಯಕುಮಾರ್‌ 4

ಸಂಜು ಸ್ಯಾಮ್ಸನ್‌ 2

ಕೆ.ಎಲ್‌.ರಾಹುಲ್‌ 2

ಶುಭ್‌ಮನ್‌ ಗಿಲ್‌ 1

ಋತುರಾಜ್‌ 1

ವಿರಾಟ್‌ ಕೊಹ್ಲಿ 1

ದೀಪಕ್‌ ಹೂಡಾ 1

ಸುರೇಶ್‌ ರೈನಾ 1

ಯಶಸ್ವಿ ಜೈಸ್ವಾಲ್‌ 1

ಅಭಿಷೇಕ್‌ ಶರ್ಮಾ 1

ತಿಲಕ್‌ ವರ್ಮಾ 1

05 ಶತಕ: 2024ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರಿಂದ ದಾಖಲಾದ 5ನೇ ಶತಕವಿದು.
 

click me!