ಸೆಂಚೂರಿಯನ್ ಟಿ20 ಪಂದ್ಯದಲ್ಲಿಂದು ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ

By Naveen Kodase  |  First Published Nov 13, 2024, 1:40 PM IST

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. 4 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ 61 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹರಿಣಗಳ ಪಡೆ 3 ವಿಕೆಟ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇದೀಗ ಮೂರನೇ ಟಿ20 ಪಂದ್ಯದ ಮೇಳೆ ಎಲ್ಲರ ಚಿತ್ತ ನೆಟ್ಟಿದೆ.

ಹೌದು, ಇಂದು ಸೆಂಚೂರಿಯನ್‌ನಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಈ ಪಂದ್ಯವನ್ನು ಗೆಲ್ಲಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಉಭಯ ತಂಡಗಳು ಬ್ಯಾಟಿಂಗ್ ಸ್ನೇಹಿ ಪಿಚ್ ಎಂದೇ ಗುರುತಿಸಿಕೊಂಡಿರುವ ಸೆಂಚೂರಿಯನ್‌ನಲ್ಲಿ ರನ್ ಮಳೆ ಹರಿಸಲು ಎದುರು ನೋಡುತ್ತಿವೆ. 

Latest Videos

ಬಿಗ್ ಹಿಟ್ಟರ್ ರಿಂಕು ಸಿಂಗ್ ಕೆಕೆಆರ್ ನೂತನ ಕ್ಯಾಪ್ಟನ್? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್

ಹಾಲಿ ಟಿ20 ಚಾಂಪಿಯನ್ ಟೀಂ ಇಂಡಿಯಾ, ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದರೂ ಸಮಸ್ಯೆಗಳಿಂದ ಹೊರತಾಗಿಲ್ಲ. ಅಗ್ರಕ್ರಮಾಂಕದ ಬ್ಯಾಟರ್ ಅಭಿಷೇಕ್ ಶರ್ಮಾ, ಪದೇ ಪದೇ ವೈಫಲ್ಯ ಅನುಭವಿಸುತ್ತಾ ಬಂದಿದ್ದಾರೆ. ಹೀಗಿದ್ದೂ ಟೀಮ್‌ ಮ್ಯಾನೇಜ್‌ಮೆಂಟ್ ಅಭಿಷೇಕ್ ಶರ್ಮಾಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ. ಇಂದೂ ಅಭಿಷೇಕ್ ಶರ್ಮಾ ವಿಫಲವಾದರೆ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಜತೆ ತಿಲಕ್ ವರ್ಮಾ ಆರಂಭಿಕನಾಗಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ರಿಂಕು ಸಿಂಗ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ. ಅದೇ ರೀತಿ ಬೌಲಿಂಗ್ ವಿಭಾಗದಲ್ಲೂ ಆರ್ಶದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಕಳೆದೆರಡು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಈ ಕಾರಣಕ್ಕಾಗಿಯೇ ಟೀಂ ಇಂಡಿಯಾ, ತನ್ನ ಬೌಲಿಂಗ್ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಂದು ಮೊಹಮ್ಮದ್ ಶಮಿ ವಾಪಸ್: ಟೀಂ ಇಂಡಿಯಾ ಪಾಲಿಗೂ ಗುಡ್ ನ್ಯೂಸ್!

ಇಂದಿನ ಪಂದ್ಯದಲ್ಲಿ ಆವೇಶ್ ಖಾನ್‌ಗೆ ವಿಶ್ರಾಂತಿ ನೀಡಿ ಯುವ ವೇಗಿಗಳಾದ ಕನ್ನಡಿಗ ವೈಶಾಖ್ ವಿಜಯ್‌ಕುಮಾರ್ ಇಲ್ಲವೇ ಯಶ್‌ ದಯಾಳ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ. ಇನ್ನುಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಿದೆ. ಯಾಕೆಂದರೆ ಭಾರತದ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ರವಿ ಬಿಷ್ಣೋಯಿ ಅತ್ಯದ್ಭುತ ಲಯದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:

ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್‌ ಪಟೇಲ್, ವೈಶಾಕ್ ವಿಜಯ್‌ಕುಮಾರ್/ಯಶ್ ದಯಾಳ್, ರವಿ ಬಿಷ್ಣೋಯಿ, ಆವೇಶ್‌ ಖಾನ್, ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ರಾತ್ರಿ 8.30, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ
 

click me!