Ind vs Pak: ಭಾರತದ ಆರ್ಭಟಕ್ಕೆ ಪಾಕ್ ದೂಳಿಪಟ; ಗೆಲುವಿನ ಬೆನ್ನಲ್ಲೇ ಬಯಲಾಯ್ತು ಟೀಮ್ ಇಂಡಿಯಾದ ಆ 'ಮಾಸ್ಟರ್ ಪ್ಲಾನ್'!

Published : Sep 06, 2026, 05:18 PM IST
Ind Vs Pak Win

ಸಾರಾಂಶ

ಮಹಿಳಾ ಏಷ್ಯಾ ಕಪ್ ಟಿ20ಯಲ್ಲಿ, ಭಾರತೀಯ ಸ್ಪಿನ್ನರ್‌ಗಳ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನವು ತನ್ನ ಟಿ20 ಇತಿಹಾಸದ ಕನಿಷ್ಠ ಮೊತ್ತ 55 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ, 3 ವಿಕೆಟ್ ನಷ್ಟಕ್ಕೆ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ ಆ ಒಂದು ಮಾಸ್ಟರ್‌ ಪ್ಲಾನ್‌ ಏನು? ಎನ್ನುವುದನ್ನು ನೋಡೋಣ ಬನ್ನಿ.

ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ಭರ್ಜರಿ ಹಾಗೂ ಏಕಪಕ್ಷೀಯ ಗೆಲುವು ಸಾಧಿಸಿದೆ. ಭಾರತೀಯ ಸ್ಪಿನ್ ಪಡೆ ಹೆಣೆದ ಕಟ್ಟುನಿಟ್ಟಿನ ತಂತ್ರ ಹಾಗೂ ನಿಖರ ಬೌಲಿಂಗ್ ದಾಳಿಗೆ ನಲುಗಿದ ಪಾಕಿಸ್ತಾನ ತಂಡವು, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ತನ್ನ ಅತ್ಯಂತ ಕನಿಷ್ಠ ಸ್ಕೋರ್ ಆದ 55 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಸವಾಲನ್ನು ಬೆನ್ನಟ್ಟಿದ ಭಾರತೀಯ ತಂಡವು ಇನ್ನು 68 ಎಸೆತಗಳು (11.2 ಓವರ್‌ಗಳು) ಬಾಕಿ ಇರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ದಂಡಯಾತ್ರೆ ಪೂರ್ಣಗೊಳಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಗ್ರೂಪ್ 'ಎ' ಹಂತದ ಮೂರೂ ಪಂದ್ಯಗಳನ್ನು ಗೆದ್ದು, ಒಟ್ಟು 6 ಅಂಕಗಳೊಂದಿಗೆ ಪ್ರಬಲವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ತಂಡದ ಸ್ಪಿನ್ನರ್‌ಗಳ ಮಾಸ್ಟರ್ ಪ್ಲಾನ್!

ಈ ಸ್ಮರಣೀಯ ಗೆಲುವಿನ ರೂವಾರಿ, ಸ್ಪಿನ್ನರ್ ಶ್ರೀ ಚರಣಿ ಪಂದ್ಯದ ನಂತರ ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಮೈದಾನಕ್ಕಿಳಿಯುವ ಮುನ್ನವೇ ಸ್ಪಿನ್ ಬಳಗವು ಒಂದೆಡೆ ಕುಳಿತು ಪಕ್ಕಾ ಯೋಜನೆ ರೂಪಿಸಿತ್ತು. "ನಾವೆಲ್ಲರೂ ತಂಡದ ಸಭೆಗಳಲ್ಲಿ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಪ್ರೇಮಾ, ನಾನು, ದೀಪ್ತಿ ದೀದಿ ಹಾಗೂ ರಾಧಾ ಯಾದವ್ ದೀದಿ ಸೇರಿ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ತಂತ್ರ ಹೆಣೆಯುತ್ತೇವೆ. ಅನುಭವಿಗಳಾದ ದೀಪ್ತಿ ಮತ್ತು ರಾಧಾ ನೀಡುವ ಸಲಹೆಗಳನ್ನು ನಾವು ಮೈದಾನದಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ" ಎಂದು ಚರಣಿ ತಿಳಿಸಿದ್ದಾರೆ.

ಭಾರತೀಯ ಸ್ಪಿನ್ ಪಡೆಯ ಘಾತಕ ಪ್ರದರ್ಶನ!

ಆರಂಭದಲ್ಲಿ ಪಾಕಿಸ್ತಾನ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ, ನಂತರ ಆರಂಭವಾದ ಭಾರತದ ಸ್ಪಿನ್ ದಾಳಿ ಎದುರಾಳಿಗಳನ್ನು ಸಂಪೂರ್ಣವಾಗಿ ಹವಾಲ ಮಾಡಿತು.

ಶ್ರೀ ಚರಣಿ; ಅತ್ಯಂತ ಕಟ್ಟುನಿಟ್ಟಿನ ದಾಳಿ ನಡೆಸಿ ಕೇವಲ 7 ರನ್‌ಗಳಿಗೆ 3 ಪ್ರಮುಖ ವಿಕೆಟ್ (ಶಾವಲ್ ಜುಲ್ಫಿಕರ್, ಗುಲ್ ಫಿರೋಜಾ ಮತ್ತು ಆಯೇಷಾ ಜಾಫರ್) ಕಬಳಿಸಿದರು.

ಪ್ರೇಮಾ ರಾವತ್; ತಮ್ಮ ಮೋಡಿ ಮಾಡುವ ಲೆಗ್ ಸ್ಪಿನ್ ಮೂಲಕ ಕೇವಲ 9 ರನ್‌ ನೀಡಿ 3 ವಿಕೆಟ್ ಪಡೆದರು.

ದೀಪ್ತಿ ಶರ್ಮಾ; ಅನುಭವದ ಸಂಪೂರ್ಣ ಲಾಭ ಪಡೆದು 5 ರನ್‌ಗಳಿಗೆ 2 ವಿಕೆಟ್ ಪಡೆದು ಸಾಥ್ ನೀಡಿದರು.

ಶಫಾಲಿ ವರ್ಮಾ; ಬೌಲಿಂಗ್‌ನಲ್ಲೂ ಮಿಂಚಿ, ಮುನೀಬಾ ಅಲಿ ಅವರ ಮೊದಲ ವಿಕೆಟ್ ಕಬಳಿಸಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು (10 ರನ್‌ಗೆ 1 ವಿಕೆಟ್).

ಶ್ರೀ ಚರಣಿ ಯಶಸ್ಸಿನ ಮಂತ್ರ!

ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಕೇವಲ 1 ವಿಕೆಟ್ ಬಾಕಿ ಉಳಿಸಿಕೊಂಡಿರುವ 22 ವರ್ಷದ ಚರಣಿ, ತಮ್ಮ ಸರಳ ಪ್ರಕ್ರಿಯೆಯೇ ಯಶಸ್ಸಿಗೆ ಕಾರಣ ಎಂದಿದ್ದಾರೆ. ನಾನು ಯಾವುದೇ ಹೆಚ್ಚಿನ ಒತ್ತಡ ತಗೊಳ್ಲಿಲ್ಲ, ಮೂಲಭೂತ ವಿಷಯಗಳ ಮೇಲೆ ಮಾತ್ರ ಗಮನ ಹರಿಸಿದೆ. ಪಿಚ್ ಪರಿಶೀಲಿಸಿದಾಗ ಚೆಂಡು ತಿರುಗುತ್ತದೆ (ಟರ್ನ್) ಎಂದು ತಿಳಿದುಬಂತು. ಆದ್ದರಿಂದ ಹೆಚ್ಚು ವೈವಿಧ್ಯತೆಗೆ ಹೋಗದೆ, ಕೇವಲ ಸ್ಟಂಪ್‌ಗಳ ಮೇಲೆಯೇ ನಿಖರವಾಗಿ ಬೌಲಿಂಗ್ ಮಾಡಿದೆ. ಉಳಿದ ಕೆಲಸವನ್ನು ಪಿಚ್ ನೋಡಿಕೊಂಡಿತು" ಎಂದು ಅವರು ವಿವರಿಸಿದ್ದಾರೆ.

ಸಹ ಆಟಗಾರ್ತಿ ಪ್ರೇಮಾ ರಾವತ್‌ಗೆ ಶ್ಲಾಘನೆ!

ತಮ್ಮೊಂದಿಗೆ ಅದ್ಭುತ ಬೌಲಿಂಗ್ ನಡೆಸಿದ ಪ್ರೇಮಾ ರಾವತ್ ಅವರನ್ನು ಚರಣಿ ಮನಸಾರೆ ಹೊಗಳಿದ್ದಾರೆ. "ಪ್ರೇಮಾ ಸ್ವಾಭಾವಿಕವಾಗಿ ಪ್ರತಿಭಾನ್ವಿತ ಆಟಗಾರ್ತಿ. ಅವರ ಬಳಿ ಎಲ್ಲ ಕೌಶಲ್ಯಗಳೂ ಇವೆ. ಅವರು ಅದ್ಭುತ ಲೆಗ್ ಸ್ಪಿನ್ನರ್ ಮಾತ್ರವಲ್ಲದೆ, ಅತ್ಯುತ್ತಮ ಫೀಲ್ಡರ್ ಮತ್ತು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ" ಎಂದರು.

ಭವಿಷ್ಯದ ಹಾದಿ!

ಈ ಮಂದಗತಿಯ ಪಿಚ್‌ನಲ್ಲಿ ಸುಮಾರು 120 ರನ್ ಗಳಿಸುವುದು ಸವಾಲಿನ ಮೊತ್ತವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟ ಚರಣಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಅವರನ್ನು ಮೇಲಕ್ಕೆ ಕಳುಹಿಸಿದ್ದು ತಂಡದ ಪಕ್ಕಾ ಯೋಜನೆಯ ಭಾಗವಾಗಿತ್ತು ಎಂದಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ 'ಒಂದೊಂದೇ ಪಂದ್ಯದ ಮೇಲಿನ ಗಮನ' ಎಂಬ ತಂತ್ರದೊಂದಿಗೆ ಮುನ್ನಡೆಯುವುದಾಗಿ ಭಾರತೀಯ ಪಡೆ ಸ್ಪಷ್ಟಪಡಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಾಕ್‌ಗೆ ಮತ್ತೆ ಮಣ್ಣು ಮುಕ್ಕಿಸಿದ ಭಾರತ; ಪಠಾಣ್ ವ್ಯಂಗ್ಯದ ಟ್ವೀಟ್ ಭಾರೀ ವೈರಲ್
Vaibhav Sooryavanshi: ಆನ್‌ಫೀಲ್ಡ್‌ನಲ್ಲಿಯೇ ವೈಭವ್ ಸೂರ್ಯವಂಶಿ ಮೇಲೆ ಕೈ ಮಾಡಿದ ತಿಲಕ್ ವರ್ಮಾ, ವಿಡಿಯೋ ನೋಡಿ!