ಜಸ್ಟ್‌ 18 ಎಸೆತದಲ್ಲಿ ದ್ರಾವಿಡ್‌ ಪುತ್ರ ಅನ್ವಯ್‌ ಮಿಂಚಿನ ಬ್ಯಾಟಿಂಗ್‌, ಥ್ರಿಲ್ಲರ್‌ ಮ್ಯಾಚ್‌ ಗೆದ್ದ ಭಾರತ ಅಂಡರ್‌-19 ಟೀಮ್‌

Published : Sep 18, 2026, 07:20 PM IST
anvay Dravid

ಸಾರಾಂಶ

ರಾಜ್‌ಕೋಟ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಂಡರ್-19 ಏಕದಿನ ಪಂದ್ಯದಲ್ಲಿ ಭಾರತ ಜೂನಿಯರ್ ತಂಡ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರೇಂದ್ರ ಸೆಹ್ವಾಗ್ ಅವರ ಪುತ್ರರು ತಮ್ಮ ತಂದೆಯರ ಬ್ಯಾಟಿಂಗ್ ಶೈಲಿಯನ್ನು ಅದಲು-ಬದಲು ಮಾಡಿಕೊಂಡು ಆಡಿ ಗಮನ ಸೆಳೆದರು.

ರಾಜ್‌ಕೋಟ್‌ (ಸೆ.18): ಭಾರತ ಹಾಗೂ ಆಸ್ಟ್ರೇಲಿಯಾ 19 ವರ್ಷದೊಳಗಿನ (India U19 vs Australia U19) ಕ್ರಿಕೆಟ್ ತಂಡಗಳ ನಡುವೆ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಭಾರತ ಜೂನಿಯರ್ ಪಡೆ ರೋಚಕ ಗೆಲುವು ಸಾಧಿಸಿದೆ. ಭಾರತದ ಮಾಜಿ ದಿಗ್ಗಜ ಆಟಗಾರರಾದ ರಾಹುಲ್ ದ್ರಾವಿಡ್ ಹಾಗೂ ವಿರೇಂದರ್ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ದ್ರಾವಿಡ್ (Anvay Dravid) ಮತ್ತು ಆರ್ಯವೀರ್ ಸೆಹ್ವಾಗ್ (Aaryavir Sehwag) ಪರಸ್ಪರ ತಮ್ಮ ತಂದೆಯರ ಶೈಲಿಯನ್ನು ಅದಲಿ-ಬದಲಿ ಮಾಡಿಕೊಂಡು ಆಡಿದಂತೆ ಬ್ಯಾಟ್ ಬೀಸಿ ಗಮನ ಸೆಳೆದರು. ಮಳೆ ಬಾಧಿತ ಪಂದ್ಯದಲ್ಲಿ ಭಾರತ ಯು-19 ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆಲ್‌ರೌಂಡರ್ ಯಶ್‌ವರ್ಧನ್ ಚೌಹಾಣ್ (Yashbardhan Chauhan). ಭರ್ಜರಿ ಅರ್ಧಶತಕ ಬಾರಿಸುವುದರ ಜೊತೆಗೆ ಪ್ರಮುಖ 2 ವಿಕೆಟ್ ಕಬಳಿಸಿ ಭಾರತದ ಗೆಲುವಿನ ರೂವಾರಿಯಾದರು.

ತಂದೆಯಂದಿರ ಶೈಲಿ ಬದಲಿಸಿಕೊಂಡು ಅಬ್ಬರಿಸಿದ ಜೂನಿಯರ್ಸ್

ಶುಕ್ರವಾರ ನಡೆದ ಈ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗರ ಪುತ್ರರ ಆಟವೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್, ತಂದೆಯ ರಕ್ಷಣಾತ್ಮಕ ಶೈಲಿಗೆ ತದ್ವಿರುದ್ಧವಾಗಿ ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೇವಲ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 211.11 ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 38 ರನ್ ಚಚ್ಚಿದರು. ಇನ್ನು ತಮ್ಮ ತಂದೆಯಂತೆಯೇ ಇನಿಂಗ್ಸ್ ಆರಂಭಿಸಿದ (Opener) ಆರ್ಯವೀರ್ ಸೆಹ್ವಾಗ್, 26 ಎಸೆತಗಳನ್ನು ಎದುರಿಸಿ 5 ಬೌಂಡರಿಗಳೊಂದಿಗೆ ನಿಧಾನವಾಗಿ ಆದರೆ ಜವಾಬ್ದಾರಿಯುತವಾಗಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಭಾರತ ಯು-19 ಇನಿಂಗ್ಸ್ – 182 ರನ್‌ಗಳ ಸವಾಲಿನ ಮೊತ್ತ

ಮಳೆಯಿಂದಾಗಿ ತಲಾ 20 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್‌ ಕಲೆಹಾಕಿತು. ತಂಡವು 12 ನೇ ಓವರ್‌ನಲ್ಲಿ 88 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈದಾನಕ್ಕಿಳಿದ ಯಶ್‌ವರ್ಧನ್ ಚೌಹಾಣ್ ಹಾಗೂ ಅನ್ವಯ್ ದ್ರಾವಿಡ್ 5 ನೇ ವಿಕೆಟ್‌ಗೆ ಕೆಲವೇ ಎಸೆತಗಳಲ್ಲಿ 69 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಚೌಹಾಣ್ ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ಮಿಂಚಿದರು. ಆಸ್ಟ್ರೇಲಿಯಾ ಪರ ಆಫ್ ಸ್ಪಿನ್ನರ್ ಎಲಿ ಬ್ರೇನ್ (Eli Brain) 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಆಸೀಸ್ ಹೋರಾಟ – ಕೊನೆಯ ಓವರ್‌ನ ರೋಚಕ ಕ್ಷಣಗಳು

183 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಭರ್ಜರಿ ಪ್ರತ್ಯುತ್ತರ ನೀಡಿತು. ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು 40 ಕ್ಕಿಂತ ಹೆಚ್ಚು ರನ್ ಬಾರಿಸಿ ಭಾರತಕ್ಕೆ ಆತಂಕ ತಂದಿಟ್ಟರು. ಆಸ್ಟ್ರೇಲಿಯಾ ನಾಯಕ ಜಾಕ್ ಝೋಸ್ನೆಕ್ (Jack Czosnek) ಕೇವಲ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 55 ರನ್ ಸಿಡಿಸಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದರು. ಆಸೀಸ್ ಗೆಲುವಿಗೆ 11 ಎಸೆತಗಳಲ್ಲಿ 24 ರನ್ ಬೇಕಿದ್ದಾಗ, ಜಾಕ್ ಝೋಸ್ನೆಕ್ ಸತತ 3 ಬೌಂಡರಿಗಳನ್ನು ಬಾರಿಸಿ (ಎರಡನೇ ಬೌಂಡರಿಯೊಂದಿಗೆ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು) ಭಾರತಕ್ಕೆ ತೀವ್ರ ಒತ್ತಡ ಹೇರಿದರು. ಆದರೆ ಮುಂದಿನ ಎಸೆತದಲ್ಲೇ ಅವರು ಔಟಾದರು.

ಚೌಹಾಣ್ ಮಿಂಚು – ಮೊಹಿತ್ ಉಲ್ವಾ ಕರಾರುವಾಕ್ ಬೌಲಿಂಗ್

ಆಸ್ಟ್ರೇಲಿಯಾದ ಗೆಲುವಿಗೆ ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಒತ್ತಡ ಮೀರಿ ಕರಾರುವಾಕ್ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದ ಭಾರತದ ಬಲಗೈ ವೇಗಿ ಮೊಹಿತ್ ಉಲ್ವಾ (Mohit Ulva) ಕೊನೆಯ ಓವರ್‌ನಲ್ಲಿ ಕೇವಲ 3 ರನ್ ನೀಡಿ ಭಾರತಕ್ಕೆ ಅದ್ಭುತ ಗೆಲುವು ತಂದಿತ್ತರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಆಫ್ ಸ್ಪಿನ್ನರ್ ಯಶ್‌ವರ್ಧನ್ ಚೌಹಾಣ್ ಬೌಲಿಂಗ್‌ನಲ್ಲೂ ಜಾದೂ ಮಾಡಿದರು. ಆಸ್ಟ್ರೇಲಿಯಾದ ಅಗ್ರ ಸ್ಕೋರರ್‌ಗಳಾದ ಹೇಡನ್ ಬಾರ್ಬುಲೋವಿಚ್ (24 ಎಸೆತಗಳಲ್ಲಿ 40 ರನ್) ಹಾಗೂ ನೀಲ್ ಪಟೇಲ್ (21 ಎಸೆತಗಳಲ್ಲಿ 45 ರನ್) ಅವರ ವಿಕೆಟ್ ಕಬಳಿಸಿ ಆಸ್ಟ್ರೇಲಿಯಾಕ್ಕೆ ಕಡಿವಾಣ ಹಾಕಿದರು. ಈ ಮೂಲಕ 3 ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್‌-19 ಟೀಮ್‌ ಇಂಡಿಯಾ ಪರವಾಗಿ ಪದಾರ್ಪಣೆ ಮಾಡಿದ ಸೆಹ್ವಾಗ್‌ ಪುತ್ರ, ಗ್ಯಾಲರಿಯಲ್ಲಿ ಕುಳಿತು ಮ್ಯಾಚ್‌ ವೀಕ್ಷಿಸಿದ ಅಪ್ಪ
₹5.65 ಲಕ್ಷಕ್ಕೆ Nissan 7 ಸೀಟರ್‌ ಕಾರು; 6 ಏರ್‌ಬ್ಯಾಗ್‌, 19.6 kmpl ಮೈಲೇಜ್‌, ಫೀಚರ್ಸ್‌ ಸೂಪರ್‌!