
ರಾಜ್‌ಕೋಟ್ (ಸೆ.18): ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aryaveer Sehwag), ಭಾರತ 'ಎ' 19 ವರ್ಷದೊಳಗಿನ (India U19) ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಚೊಚ್ಚಲ ಯೂತ್ ಏಕದಿನ ಪಂದ್ಯದಲ್ಲಿ (Youth ODI) ಆರ್ಯವೀರ್ ತಮ್ಮ ತಂದೆಯ ಶೈಲಿಯಲ್ಲೇ ಬೌಂಡರಿಗಳ ಸುರಿಮಳೆಗರೆದು ಗಮನ ಸೆಳೆದರಾದರೂ, ಸಣ್ಣದೊಂದು ತಪ್ಪಿನಿಂದಾಗಿ ದೊಡ್ಡ ಮೊತ್ತ ಕಲೆಹಾಕುವ ಅವಕಾಶವನ್ನು ಕೈಚೆಲ್ಲಿದರು. ಮಗನ ಈ ಐತಿಹಾಸಿಕ ಚೊಚ್ಚಲ ಇನಿಂಗ್ಸ್ ವೀಕ್ಷಿಸಲು ವೀರೇಂದ್ರ ಸೆಹ್ವಾಗ್ (Virender Sehwag) ಖುದ್ದಾಗಿ ಸ್ಟೇಡಿಯಂನಲ್ಲಿ ಗ್ಯಾಲರಿಯಲ್ಲಿದ್ದರು/.
ತಮ್ಮ ಚೊಚ್ಚಲ ಇನಿಂಗ್ಸ್‌ನ 5 ನೇ ಎಸೆತದಲ್ಲೇ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಆರ್ಯವೀರ್ ರನ್ ಖಾತೆ ತೆರೆದರು. ಆ ನಂತರ ಎರಡನೇ ಮತ್ತು ಮೂರನೇ ಓವರ್‌ಗಳಲ್ಲೂ ತಂದೆಯಂತೆಯೇ ಆಕ್ರಮಣಕಾರಿ ಬೌಂಡರಿಗಳನ್ನು ಬಾರಿಸಿದರು. ಇನಿಂಗ್ಸ್‌ನ 5 ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಲೆಗ್-ಬ್ರೇಕ್ ಬೌಲರ್ ಸ್ಪೆನ್ಸರ್ ಗ್ರೀನ್ ಎಸೆತದಲ್ಲಿ ಮತ್ತೊಂದು ಭರ್ಜರಿ ಬೌಂಡರಿ ಸಿಡಿಸಿದರು.
ಆದರೆ, ಅದೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸುವಾಗ ಮಾಡಿದ ಸಣ್ಣ ಯಡವಟ್ಟಿನಿಂದಾಗಿ ಬೌಲರ್ ಸ್ಪೆನ್ಸರ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಔಟ್ ಆಗುವ ಮುನ್ನ ಆರ್ಯವೀರ್ 26 ಎಸೆತಗಳನ್ನು ಎದುರಿಸಿ 5 ಅತ್ಯುತ್ತಮ ಬೌಂಡರಿಗಳ ನೆರವಿನಿಂದ 28 ರನ್‌ಗಳ ಬಿರುಸಿನ ಇನಿಂಗ್ಸ್ ಕಟ್ಟಿದರು. ಮಗ ಅರ್ಧಶತಕ ಗಳಿಸಲಿ ಎಂಬ ಆಸೆ ವೀರೇಂದ್ರ ಸೆಹ್ವಾಗ್ ಅವರಿಗಿದ್ದರೂ, ಮಗನ ಈ ಬಿರುಸಿನ ಆರಂಭ ಸೆಹ್ವಾಗ್ ಅವರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಮಳೆಯಿಂದಾಗಿ ಈ ಮೊದಲ ಏಕದಿನ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಆರ್ಯವೀರ್ ಔಟ್ ಆದ ನಂತರ, ತಂಡದ ನಾಯಕ ಲಕ್ಷ್ಯ ರಾಯಚಂದಾನಿ 15 ರನ್ ಹಾಗೂ ಕುಶಾಗ್ರ ಓಜಾ 16 ರನ್ ಗಳಿಸಿ ಔಟಾದರು. ತದನಂತರ ಅರ್ಜುನ್ ರಜಪೂತ್ ಕೂಡ 15 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಿಯಮಿತವಾಗಿ ವಿಕೆಟ್ ಬೀಳುತ್ತಿದ್ದಾಗ ಯಶವರ್ಧನ್ ಚೌಹಾಣ್ ಹಾಗೂ ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ (Anvay Dravid) ತಂಡಕ್ಕೆ ಆಸರೆಯಾದರು.
ಈ ಜೋಡಿ ವೇಗದ ಭಾಗಿದಾರಿಕೆಯನ್ನು ನೀಡುವ ಮೂಲಕ ಭಾರತವನ್ನು ಬಲವಾದ ಸ್ಥಿತಿಗೆ ತಲುಪಿಸಿದರು. ಸಾಮಾನ್ಯವಾಗಿ ಸುದೀರ್ಘ ಹಾಗೂ ರಕ್ಷಣಾತ್ಮಕ ಆಟಕ್ಕೆ ಹೆಸರಾಗಿದ್ದ 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್, ಈ ಪಂದ್ಯದಲ್ಲಿ ತಂದೆಗೆ ತದ್ವಿರುದ್ಧವಾಗಿ ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅನ್ವಯ್ ದ್ರಾವಿಡ್ ಎದುರಿಸಿದ ಕೇವಲ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಅಜೇಯ 38 ರನ್ ಬಾರಿಸಿ ಗಮನಸೆಳೆದರು. ಈ ಮೂಲಕ ಭಾರತ ಯು-19 ಪಡೆ ಆಸ್ಟ್ರೇಲಿಯಾ ವಿರುದ್ಧ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
As Aaryavir Sehwag makes his U19 debut for India, his father and former India star Virender Sehwag is in Rajkot to watch the game.
Exclusive pics by @sportstarweb pic.twitter.com/A4twf7w7Cm— Shayan Acharya (@ShayanAcharya) September 18, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.