
ಮುಂಬೈ (ಅ.11): ಬೆಂಗಳೂರಿನಲ್ಲಿ ಬುಧವಾರ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ 15 ಸದಸ್ಯರ ತಂಡದ ಉಪನಾಯಕನಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ನೇಮಿಸಲಾಗಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಬುಮ್ರಾ ಅವರನ್ನು ಸಜ್ಜುಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಸಿಸಿಐ ಈ ಪ್ರಮುಖ ನಿರ್ಧಾರ ಮಾಡಿದೆ. ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಯಾವುದೇ ನಿಯೋಜಿತ ಉಪನಾಯಕನನ್ನು ಹೊಂದಿರಲಿಲ್ಲ. ಭವಿಷ್ಯದಲ್ಲಿ ಜಸ್‌ಪ್ರೀತ್ ಬುಮ್ರಾಗೆ ಟೀಮ್ ಇಂಡಿಯಾ ನಾಯಕತ್ವ ಸಿಗಬಹುದು ಎನ್ನುವ ಸೂಚನೆಯೂ ಇದಾಗಿದೆ. ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿದಿರುವ ನಡುವೆಯೇ ಈ ನಿರ್ಧಾರ ಬಂದಿದ್ದು, ಬುಮ್ರಾ ಹೆಚ್ಚು ಮಹತ್ವದ ನಾಯಕತ್ವದ ಪಾತ್ರವನ್ನು ವಹಿಸಲಿದ್ದಾರೆ.
ನ್ಯೂಜಿಲೆಂಡ್ ಸರಣಿಗೆ ತಂಡವನ್ನು 15 ಆಟಗಾರರಿಗೆ ಇಳಿಸಲಾಗಿದೆ. ಬಾಂಗ್ಲಾದೇಶ ಸರಣಿಯ ಭಾಗವಾಗಿದ್ದ ಎಡಗೈ ವೇಗಿ ಯಶ್ ದಯಾಳ್, ಲಕ್ನೋದಲ್ಲಿ ಬಂಗಾಳದ ವಿರುದ್ಧದ ಉತ್ತರ ಪ್ರದೇಶದ ರಣಜಿ ಟ್ರೋಫಿ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದು, ಟೀಮ್‌ನಿಂದ ಹೊರಬಿದ್ದಿದ್ದಾರೆ.
ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್‌ನಂತಹ ಉದಯೋನ್ಮುಖ ತಾರೆಗಳು ಹಾಗೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್‌ನಂತಹ ಅನುಭವಿ ಆಟಗಾರರನ್ನು ಒಳಗೊಂಡ ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ತಂಡ ಹೊಂದಿದೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ನಿರ್ವಹಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ಭಾರತವು ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಸೇರಿದಂತೆ ಅದ್ಭುತ ಸ್ಪಿನ್ನರ್‌ಗಳನ್ನು ಹೊಂದಿದೆ. ವೇಗದ ದಾಳಿಯನ್ನು ಬುಮ್ರಾ ಮುನ್ನಡೆಸಲಿದ್ದು, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಬೆಂಬಲ ನೀಡಲಿದ್ದಾರೆ.
ಸೆಹ್ವಾಗ್-ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕ ಸಿಡಿಸಿದ ಬ್ಯಾಟರ್‌ಗಳಿವರು!
ಭಾರತದ ನ್ಯೂಜಿಲೆಂಡ್ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ತೆಲಂಗಾಣದ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.