
ಗೆಬೆರ್ಹಾ(ಡಿ.13): ದಕ್ಷಿಣ ಆಫ್ರಿಕಾ ಪ್ರವಾಸವನ್ನು ಟೀಂ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಭಾರತವನ್ನು ಮಂಗಳವಾರ 2ನೇ ಪಂದ್ಯದಲ್ಲಿ ದ.ಆಫ್ರಿಕಾ ಸುಲಭವಾಗಿ ಬಗ್ಗುಬಡಿದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು.
ಸಂಜೆವರೆಗೂ ಮಳೆ ಸುರಿದರೂ, ಪಂದ್ಯ ನಿಗದಿತ ಸಮಯಕ್ಕೆ ಶುರುವಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ ರಿಂಕು ಸಿಂಗ್ ಹಾಗೂ ಸೂರ್ಯಕುಮಾರ್ ಯಾದವ್‌ರ ಅರ್ಧಶತಕಗಳ ನೆರವಿನಿಂದ ದೊಡ್ಡ ಮೊತ್ತದತ್ತ ಸಾಗುತ್ತಿದ್ದಾಗ, ಇನ್ನಿಂಗ್ಸಲ್ಲಿ 19.3 ಓವರ್ ಪೂರ್ಣಗೊಂಡಿದ್ದ ವೇಳೆ ಮತ್ತೆ ಮಳೆ ಆರಂಭಗೊಂಡ ಕಾರಣ ಆಟ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಬಳಿಕ ದ.ಆಫ್ರಿಕಾಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ 15 ಓವರಲ್ಲಿ 152 ರನ್ ಗುರಿ ನಿಗದಿಪಡಿಸಲಾಯಿತು.
SAvIND T20 ಭಾರತ ವಿರುದ್ದ ಟಾಸ್ ಗೆದ್ದ ಸೌತ್ ಆಫ್ರಿಕಾ, 2ನೇ ಪಂದ್ಯಕ್ಕೂ ಮಳೆ ಭೀತಿ!
ದೊಡ್ಡ ಗುರಿಯನ್ನು ಬೆನ್ನತ್ತಲು ಇಳಿದ ದ.ಆಫ್ರಿಕಾ ಮೊದಲ ಓವರ್‌ನಿಂದಲೇ ಆರ್ಭಟಿಸಿತು. 5 ಓವರ್‌ಗಳ ಪವರ್-ಪ್ಲೇನಲ್ಲಿ ಸಾಧ್ಯವಾದಷ್ಟು ರನ್ ಕಲೆಹಾಕಿ, ಪಂದ್ಯದಲ್ಲಿ ಉಳಿಯುವ ಹರಿಣಗಳ ಯೋಜನೆ ಫಲ ನೀಡಿತು. 3.4 ಓವರಲ್ಲೇ 50 ರನ್ ಪೂರೈಸಿದ ದ. ಆಫ್ರಿಕಾ, 5 ಓವರಲ್ಲಿ 1 ವಿಕೆಟ್‌ಗೆ 67 ರನ್ ಚಚ್ಚಿತು. ರೀಜಾ ಹೆಂಡ್ರಿಕ್‌ಸ್ 27 ಎಸೆತದಲ್ಲಿ 49 ರನ್ ಸಿಡಿಸಿದರೆ, ನಾಯಕ ಏಡನ್ ಮಾರ್ಕ್‌ರಮ್ 17 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 30 ರನ್ ಚಚ್ಚಿದರು. ಕ್ಲಾಸೆನ್(07) ಹಾಗೂ ಮಿಲ್ಲರ್ (17) ಕೊನೆವರೆಗೂ ಕ್ರೀಸ್‌ನಲ್ಲಿ ನಿಲ್ಲದಿದ್ದರೂ, ಸ್ಟಬ್‌ಸ್ (14) ಹಾಗೂ ಫೆಲುಕ್ವಾಯೋ (10) ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ದಡ ಸೇರಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತ ತನ್ನ ಆರಂಭಿಕರಿಬ್ಬರನ್ನೂ ಬೇಗ ಕಳೆದುಕೊಂಡಿತು. ಜೈಸ್ವಾಲ್ ಹಾಗೂ ಗಿಲ್ ಇಬ್ಬರೂ ಖಾತೆ ತೆರೆಯಲಿಲ್ಲ. 3ನೇ ವಿಕೆಟ್‌ಗೆ ತಿಲಕ್ (29) ಹಾಗೂ ಸೂರ್ಯ 49 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಸೂರ್ಯ ಹಾಗೂ ರಿಂಕು ಸಿಂಗ್ ನಡುವೆ 8 ಓವರಲ್ಲಿ 70 ರನ್ ಜೊತೆಯಾಟ ಮೂಡಿಬಂತು. 17ನೇ ಅಂ.ರಾ.ಟಿ20 ಅರ್ಧಶತಕ ಪೂರೈಸಿದ ಸೂರ್ಯ 36 ಎಸೆತದಲ್ಲಿ 56 ರನ್ ಸಿಡಿಸಿದರೆ, ರಿಂಕು 39 ಎಸೆತದಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು. ಜಡೇಜಾ 19 ರನ್ ಕೊಡುಗೆ ನೀಡಿದರು.
ಸರಣಿಯ ಮೊದಲ ಪಂದ್ಯ ಮಳೆಗೆ ಬಲಿಯಾಗಿತ್ತು. 3ನೇ ಹಾಗೂ ಕೊನೆಯ ಪಂದ್ಯ ಗುರುವಾರ (ಡಿ.14) ಜೋಹಾನ್‌ಸ್ಬರ್ಗ್‌ನಲ್ಲಿನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.