Timed Out controversy : ‘ನಾವು ಯುದ್ಧದಲ್ಲಿದ್ದೆವು. ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ’

By Kannadaprabha NewsFirst Published Nov 7, 2023, 11:47 AM IST
Highlights

‘ನಾನು ಮಾಡಿದ್ದು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ಹೌದು, ಮ್ಯಾಥ್ಯೂಸ್‌ರನ್ನು ಔಟ್‌ ಮಾಡಿದ್ದರಿಂದ ನಮಗೆ ಲಾಭವಾಯಿತು ನಿಜ. ಅದರ ಬಗ್ಗೆ ಯಾರು ಬೇಕಿದ್ದರೂ ಚರ್ಚೆ ಮಾಡಿಕೊಳ್ಳಲಿ. ನಾವು ಯುದ್ಧದ್ದಲ್ಲಿದ್ದೆವು ಎಂದು ನನಗೆ ಅನಿಸಿತು. ಹೀಗಾಗಿ ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ ಅಷ್ಟೇ’ ಎಂದು ಶಕೀಬ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನವದೆಹಲಿ(ನ.07): ಶ್ರೀಲಂಕಾದ ಬ್ಯಾಟರ್‌ ಏಂಜೆಲೋ ಮ್ಯಾಥ್ಯೂಸ್‌ರನ್ನು ಟೈಮ್ಡ್‌ ಔಟ್‌ ಮಾಡಿ ಕ್ರಿಕೆಟ್ ಲೋಕದ ಕೆಂಗಣ್ಣಿಗೆ ಗುರಿಯಾಗಿರುವ ಶಕೀಬ್‌ ಅಲ್‌-ಹಸನ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಾವು ಯುದ್ಧದಲ್ಲಿದ್ದೆವು. ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ’ ಎಂದು ಶಕೀಬ್‌ ಪಂದ್ಯ ಮುಗಿದ ಬಳಿಕ ಹೇಳಿದರು.

ಮ್ಯಾಥ್ಯೂಸ್ ಕ್ರೀಸ್‌ಗಿಳಿದು ಹೆಲ್ಮೆಟ್‌ ಬದಲಿಸಲು ಸಮಯ ತೆಗೆದುಕೊಳ್ಳುತ್ತಿದ್ದಾಗ ನಡೆದ ಸನ್ನಿವೇಶವನ್ನು ಶಕೀಬ್‌ ಪಂದ್ಯದ ಬಳಿಕ ವಿವರಿಸಿದರು. ‘ನಮ್ಮ ತಂಡದ ಫೀಲ್ಡರ್‌ ಒಬ್ಬರು ನನ್ನ ಬಳಿ ಬಂದು ಈಗ ನಾವು ಔಟ್‌ಗೆ ಮನವಿ ಸಲ್ಲಿಸಿದರೆ ಮ್ಯಾಥ್ಯೂಸ್‌ ಹೊರನಡೆಯಬೇಕಾಗುತ್ತದೆ ಎಂದು ಸಲಹೆ ನೀಡಿದರು. ನನಗೆ ಅದು ಸರಿ ಅನಿಸಿತು. ನಾವು ನಿಯಮದಲ್ಲಿ ಏನಿದೆಯೋ ಅದನ್ನು ಕೇಳಬಹುದು ಎಂದು ನಿರ್ಧರಿಸಿ ಮನವಿ ಸಲ್ಲಿಸಿದೆ. ಅಂಪೈರ್‌ಗಳು ನಿಜಕ್ಕೂ ಔಟ್‌ಗೆ ಮನವಿ ಸಲ್ಲಿಸುತ್ತಿದ್ದೀರಾ ಎಂದು ಕೇಳಿದಾಗ ನಾನು ಹೌದು ಎಂದು ಹೇಳಿದೆ’ ಎಂದು ಶಕೀಬ್‌ ಹೇಳಿದರು.

ಏಂಜಲೋ ಮ್ಯಾಥ್ಯೂಸ್ ಟೈಮ್ಡ್‌ ಔಟ್ ವಿವಾದ..! ರೂಲ್ಸ್ ಏನು? ಮ್ಯಾಥ್ಯೂಸ್ ಮಾಡಿದ ಎಡವಟ್ಟೇನು?

‘ನಾನು ಮಾಡಿದ್ದು ಸರಿಯೋ, ತಪ್ಪೋ ನನಗೆ ಗೊತ್ತಿಲ್ಲ. ಹೌದು, ಮ್ಯಾಥ್ಯೂಸ್‌ರನ್ನು ಔಟ್‌ ಮಾಡಿದ್ದರಿಂದ ನಮಗೆ ಲಾಭವಾಯಿತು ನಿಜ. ಅದರ ಬಗ್ಗೆ ಯಾರು ಬೇಕಿದ್ದರೂ ಚರ್ಚೆ ಮಾಡಿಕೊಳ್ಳಲಿ. ನಾವು ಯುದ್ಧದ್ದಲ್ಲಿದ್ದೆವು ಎಂದು ನನಗೆ ಅನಿಸಿತು. ಹೀಗಾಗಿ ಏನು ಮಾಡಬೇಕಿತ್ತೋ ಅದನ್ನು ನಾನು ಮಾಡಿದೆ ಅಷ್ಟೇ’ ಎಂದು ಶಕೀಬ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಂಪೈರ್‌ಗಳು ಮಧ್ಯ ಪ್ರವೇಶ ಮಾಡಬೇಕಿತ್ತು: ಕುಸಾಲ್‌!

ಮ್ಯಾಥ್ಯೂಸ್‌ರನ್ನು ಟೈಮ್ಡ್‌ ಔಟ್‌ ಮಾಡಿದ್ದಕ್ಕೆ ಲಂಕಾ ನಾಯಕ ಕುಸಾಲ್‌ ಮೆಂಡಿಸ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ‘ಅಂಪೈರ್‌ಗಳು ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿಲ್ಲ ಎನ್ನುವ ಬಗ್ಗೆ ಬಹಳ ಬೇಸರವಿದೆ’ ಎಂದರು.

ಟೈಂ ಆಯ್ತು ಪೆವಿಲಿಯನ್‌ಗೆ ಹೋಗಿ: ಶಕೀಬ್‌ ಹಸನ್‌ಗೆ ಮ್ಯಾಥ್ಯೂಸ್‌ ಬೀಳ್ಕೊಡುಗೆ!

ನವದೆಹಲಿ: ತಮ್ಮನ್ನು ಟೈಮ್ಡ್‌ ಔಟ್‌ ಮಾಡಿದ ಶಕೀಬ್‌ ಅಲ್‌-ಹಸನ್‌ ವಿರುದ್ಧ ಏಂಜೆಲೋ ಮ್ಯಾಥ್ಯೂಸ್‌ ಅದೇ ಪಂದ್ಯದಲ್ಲೇ ಸೇಡು ತೀರಿಸಿಕೊಂಡರು. ಶಕೀಬ್‌ರನ್ನು ಔಟ್‌ ಮಾಡುತ್ತಿದ್ದಂತೆ ತಮ್ಮ ಮೊಣಕೈನತ್ತ ನೋಡುತ್ತಾ, ‘ಸಮಯವಾಯಿತು, ಪೆವಿಲಿಯನ್‌ಗೆ ವಾಪಸ್‌ ಹೋಗಿ’ ಎಂದು ಮ್ಯಾಥ್ಯೂಸ್‌ ಸೂಚಿಸಿದರು. ಈ ದೃಶ್ಯ ಅಭಿಮಾನಿಗಳ ಗಮನ ಸೆಳೆಯಿತು. ಜೊತೆಗೆ ಈ ಸನ್ನಿವೇಶದ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

2 ನಿಮಿಷ ತಡ ಮಾಡಿದ ಮ್ಯಾಥ್ಯೂಸ್ ಟೈಮ್ ಔಟ್, ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

ವಿಶ್ವಕಪ್‌ನಿಂದ ಹೊರಬಿದ್ದ ಶ್ರೀಲಂಕಾ!

ನವದೆಹಲಿ: ವಾಯು ಮಾಲಿನ್ಯದ ಕಾರಣ ನಡೆಯುವುದೇ ಅನುಮಾನವೆನಿಸಿದ್ದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ರೋಚಕವಾಗಿ ಅಂತ್ಯಗೊಂಡಿತು. 3 ವಿಕೆಟ್‌ ಜಯ ಸಾಧಿಸಿದ ಬಾಂಗ್ಲಾದೇಶ, ಶ್ರೀಲಂಕಾವನ್ನು ವಿಶ್ವಕಪ್‌ನಿಂದ ಹೊರಹಾಕುವುದರ ಜೊತೆಗೆ 2025ರ ಚಾಂಪಿಯನ್ಸ್‌ ಟ್ರೋಫಿಗೆ ಪ್ರವೇಶ ಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ, ಮ್ಯಾಥ್ಯೂಸ್‌ರ ಟೈಮ್ಡ್‌ ಔಟ್‌ ವಿವಾದದ ನಡುವೆಯೂ 50 ಓವರಲ್ಲಿ 279 ರನ್‌ ಗಳಿಸಿ ಆಲೌಟ್‌ ಆಯಿತು. ಚರಿತ್‌ ಅಸಲಂಕ ಅವರ ಶತಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು. ಬಾಂಗ್ಲಾದೇಶ ಸಾಧಾರಣ ಆರಂಭ ಪಡೆದರೂ, ನಜ್ಮುಲ್‌ ಶಾಂತೋ, ಶಕೀಬ್‌ ಅಲ್‌ ಹಸನ್‌ರ 169 ರನ್‌ ಜೊತೆಯಾಟದ ಸಹಕಾರದಿಂದ ಗೆಲುವಿನ ಸಂಭ್ರಮ ಆಚರಿಸಿತು.

click me!