ಸಮರವಿಕ್ರಮ ಔಟಾಗಿ ಹೊರನಡೆದ ಬಳಿಕ ಕ್ರೀಸ್‌ಗಿಳಿದ ಮ್ಯಾಥ್ಯೂಸ್ ಮೊದಲ ಎಸೆತವನ್ನು ಎದುರಿಸುವ ಮುನ್ನ ಹೆಲ್ಮೆಟ್‌ನ ಪಟ್ಟಿಯನ್ನು ಸರಿಮಾಡಿಕೊಳ್ಳಲು ಹೋದಾಗ ಅದು ಹರಿದು ಕೈಗೆ ಬಂತು. ಆಗ ಬೇರೆ ಹೆಲ್ಮೆಟ್ ತರುವಂತೆ ಡಗೌಟ್‌ನಲ್ಲಿದ್ದ ಸಹ ಆಟಗಾರರಿಗೆ ಮ್ಯಾಥ್ಯೂಸ್ ಸೂಚಿಸಿದರು. ಬೇರೆ ಹೆಲ್ಮೆಟ್ ತರಲು ಸಾಕಷ್ಟು ಸಮಯ ಹಿಡಿದಾಗ, ಬಾಂಗ್ಲಾ ನಾಯಕ ಶಕೀಬ್ ಅಲ್-ಹಸನ್ ಟೈಮ್ಡ್ ಔಟ್‌ಗೆ ಅಂಪೈರ್ ಬಳಿ ಮನವಿ ಸಲ್ಲಿಸಿದರು.
ನವದೆಹಲಿ(ನ.07): ಕ್ರೀಸ್‌ಗಿಳಿದು 2 ನಿಮಿಷಗಳೊಳಗೆ ಬ್ಯಾಟಿಂಗ್ ಆರಂಭಿಸದ್ದಕ್ಕೆ ಶ್ರೀಲಂಕಾದ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆದ ಅಪರೂಪದ ಪ್ರಸಂಗ ಸೋಮವಾರ ನಡೆಯಿತು. 146 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟರ್ ಒಬ್ಬ ಟೈಮ್ಡ್ ಔಟ್ ಆಗಿದ್ದು ಇದೇ ಮೊದಲು.
ಆಗಿದ್ದೇನು?: ಸಮರವಿಕ್ರಮ ಔಟಾಗಿ ಹೊರನಡೆದ ಬಳಿಕ ಕ್ರೀಸ್‌ಗಿಳಿದ ಮ್ಯಾಥ್ಯೂಸ್ ಮೊದಲ ಎಸೆತವನ್ನು ಎದುರಿಸುವ ಮುನ್ನ ಹೆಲ್ಮೆಟ್‌ನ ಪಟ್ಟಿಯನ್ನು ಸರಿಮಾಡಿಕೊಳ್ಳಲು ಹೋದಾಗ ಅದು ಹರಿದು ಕೈಗೆ ಬಂತು. ಆಗ ಬೇರೆ ಹೆಲ್ಮೆಟ್ ತರುವಂತೆ ಡಗೌಟ್‌ನಲ್ಲಿದ್ದ ಸಹ ಆಟಗಾರರಿಗೆ ಮ್ಯಾಥ್ಯೂಸ್ ಸೂಚಿಸಿದರು. ಬೇರೆ ಹೆಲ್ಮೆಟ್ ತರಲು ಸಾಕಷ್ಟು ಸಮಯ ಹಿಡಿದಾಗ, ಬಾಂಗ್ಲಾ ನಾಯಕ ಶಕೀಬ್ ಅಲ್-ಹಸನ್ ಟೈಮ್ಡ್ ಔಟ್‌ಗೆ ಅಂಪೈರ್ ಬಳಿ ಮನವಿ ಸಲ್ಲಿಸಿದರು. ಆಗ ಅಂಪೈರ್ ಔಟ್ ಎಂದು ತೀರ್ಪು ನೀಡಿ ಮ್ಯಾಥ್ಯೂಸ್‌ಗೆ ಮೈದಾನ ತೊರೆಯುವಂತೆ ಸೂಚಿಸಿದರು.
ಟೈಮ್ ಔಟ್ ವಿವಾದದ ಬಳಿಕ ಇತಿಹಾಸ ನಿರ್ಮಿಸಿದ ಬಾಂಗ್ಲಾ, ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಗೆಲುವು!
ನಿಯಮ ಏನು?
ಐಸಿಸಿ ನಿಯಮಗಳ ಪ್ರಕಾರ ಹೊಸದಾಗಿ ಕ್ರೀಸ್‌ಗಿಳಿಯುವ ಬ್ಯಾಟರ್ 2 ನಿಮಿಷಗಳೊಳಗೆ ಮೊದಲ ಎಸೆತವನ್ನು ಎದುರಿಸಬೇಕು. ಒಂದು ವೇಳೆ 3 ನಿಮಿಷ ಮೀರಿದರೆ ಫೀಲ್ಡಿಂಗ್ ಮಾಡುತ್ತಿರುವ ತಂಡದ ನಾಯಕ ಟೈಮ್ಡ್ ಔಟ್‌ಗೆ ಮನವಿ ಸಲ್ಲಿಸಬಹುದು.
ಕ್ರೀಸ್‌ಗಿಳಿಯುವಾಗಲೇ ಸಮಯ ಮೀರಿತ್ತು!
ಸಮರವಿಕ್ರಮ ಔಟಾಗಿ ಹೊರನಡೆದ ಬಳಿಕ ಮ್ಯಾಥ್ಯೂಸ್ ಕ್ರೀಸ್‌ಗಿಳಿದು ಗಾರ್ಡ್ ತೆಗೆದುಕೊಳ್ಳುವಷ್ಟರಲ್ಲೇ 2 ನಿಮಿಷ ದಾಟಿತ್ತು ಎಂದು ಇನಿಂಗ್ಸ್ ಮುಕ್ತಾಯದ ಬಳಿಕ ಮೀಸಲು ಅಂಪೈರ್ ಏಡ್ರಿಯಾನ್ ಹೋಲ್ಡ್‌ಸ್ಟಾಕ್ ಖಚಿತಪಡಿಸಿದರು. 'ಕ್ರೀಸ್‌ಗಿಳಿಯುವ ಮುನ್ನ ಬ್ಯಾಟರ್ ತಮ್ಮೆಲ್ಲಾ ಕ್ರಿಕೆಟಿಂಗ್ ಪರಿಕರಗಳು ಸರಿಯಿವೆಯೇ ಎನ್ನುವುದನ್ನು ಖಾತರಿಪಡಿಸಿಕೊಂಡಿರಬೇಕು. ವಿಕೆಟ್ ಬಿದ್ದ 2 ನಿಮಿಷದಲ್ಲಿ ಕ್ರೀಸ್‌ಗಿಳಿದು ಮೊದಲ ಎಸೆತ ಎದುರಿಸಬೇಕು. ಆದರೆ ಮ್ಯಾಥ್ಯೂಸ್ ಮೈದಾನಕ್ಕೆ ಕಾಲಿಡುವಷ್ಟರಲ್ಲೇ 1 ನಿಮಿಷ 50 ಸೆಕೆಂಡ್ ಕಳೆದಿತ್ತು' ಎಂದು ಹೋಲ್ಡ್‌ಸ್ಟಾಕ್ ಹೇಳಿದ್ದಾರೆ.
ನಾನು ಧೋನಿ ಕ್ಲೋಸ್ ಫ್ರೆಂಡ್ಸ್ ಅಲ್ಲವೇ ಅಲ್ಲ : ಹೊಸ ಬಾಂಬ್ ಸಿಡಿಸಿದ ಯುವಿ..!
ಶಕೀಬ್ ನಡೆ ಕಂಡು ಮ್ಯಾಥ್ಯೂಸ್ ಕೆಂಡ!
ಶಕೀಬ್ ವಿಕೆಟ್‌ಗಾಗಿ ಮನವಿ ಸಲ್ಲಿಸಿದ್ದಕ್ಕೆ ಮ್ಯಾಥ್ಯೂಸ್ ಕೆಂಡಾಮಂಡಲಗೊಂಡರು. ಮೊದಲು ಮೈದಾನದಲ್ಲೇ ವಾಗ್ವಾದ ನಡೆಯಿತು. ಅಂಪೈರ್‌ಗಳು ಶಕೀಬ್‌ರನ್ನು ಮನವಿ ಹಿಂಪಡೆಯುವಂತೆ 2 ಬಾರಿ ಕೇಳಿದರೂ, ಶಕೀಬ್ ಅದಕ್ಕೆ ಒಪ್ಪಲಿಲ್ಲ. ಮ್ಯಾಥ್ಯೂಸ್, ಶಕೀಬ್ ಬಳಿ ವಿವರಣೆ ಕೇಳಲು ಹೋದಾಗ 'ನನಗೆ ಗೊತ್ತಿಲ್ಲ, ಅಂಪೈರ್ ಬಳಿ ಕೇಳಿ' ಎಂದಾಗ ಬೇರೆ ದಾರಿಯಿಲ್ಲದೇ ಮ್ಯಾಥ್ಯೂಸ್ ಹೊರನಡೆಯಬೇಕಾಯಿತು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್, ಗ್ಲೌಸ್‌ಗಳನ್ನು ನೆಲಕ್ಕೆ ಎಸೆದ ಲಂಕಾ ಆಲ್ರೌಂಡರ್, ಸಿಟ್ಟಿನಲ್ಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಮ್ಯಾಥ್ಯೂಸ್ ಮಾಡಿದ ತಪ್ಪುಗಳೇನು?
1. ಕ್ರೀಸ್‌ಗಿಳಿಯುವ ಮುನ್ನ ಹೆಲ್ಮೆಟ್ ಸರಿಯಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳದೆ ಇದ್ದಿದ್ದು.
2. ಬೇರೆ ಹೆಲ್ಮೆಟ್ ತರಿಸಿಕೊಳ್ಳುವ ಮುನ್ನ ಅಂಪೈರ್, ಎದುರಾಳಿ ನಾಯಕನಿಗೆ ವಿಷಯ ತಿಳಿಸಿ ಸಮಯ ಕೋರಿದ್ದರೆ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವುದನ್ನು ತಪ್ಪಿಸಬಹುದಿತ್ತು.
3. ಮ್ಯಾಥ್ಯೂಸ್ ಕ್ರೀಸ್‌ಗಿಳಿದಾಗ ಬೌಲ್ ಮಾಡುತ್ತಿದ್ದಿದ್ದು ಶಕೀಬ್. ಸ್ಪಿನ್ನರನ್ನು ಎದುರಿಸಲು ಹೆಲ್ಮೆಟ್ ಬೇಕೇ ಬೇಕು ಎಂದೇನಿಲ್ಲ. ಶಕೀಬ್‌ರ ಓವರ್ ಮುಗಿದ ಮೇಲೆ ಬೇರೆ ಹೆಲ್ಮೆಟ್ ತರಿಸಿಕೊಳ್ಳಬಹುದಿತ್ತು.