ಟೈಮ್‌ ಔಟ್‌ ವಿವಾದದ ಬಳಿಕ ಇತಿಹಾಸ ನಿರ್ಮಿಸಿದ ಬಾಂಗ್ಲಾ, ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಗೆಲುವು!

By Santosh Naik  |  First Published Nov 6, 2023, 11:40 PM IST

Bangladesh vs Sri Lanka World Cup 2023: ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಇತಿಹಾಸ ನಿರ್ಮಿಸಿದೆ. ಸೋಲಿನ ಸರಮಾಲೆಯನ್ನು ಮುರಿದು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಶ್ರೀಲಂಕಾವನ್ನು ಸೋಲಿಸಿದೆ. ಸೋಮವಾರ (ನವೆಂಬರ್ 6) ದೆಹಲಿಯಲ್ಲಿ ನಡೆದ ಈ ಪಂದ್ಯವನ್ನು ಬಾಂಗ್ಲಾದೇಶ 3 ವಿಕೆಟ್‌ಗಳಿಂದ ಗೆದ್ದುಕೊಂಡಿತು.


ನವದೆಹಲಿ (ನ.6): ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಇತಿಹಾಸ ನಿರ್ಮಾಣ ಮಾಡಿದೆ. ಸತತ ಸೋಲುಗಳ ಮಾಲೆಯನ್ನು ಮುರಿದ ಬಾಂಗ್ಲಾದೇಶ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡದ ವಿರುದ್ಧ ಗೆಲುವು ಕಂಡಿದೆ. ಸೋಮವಾರ ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.  ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 279 ರನ್ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 7 ವಿಕೆಟ್ ಕಳೆದುಕೊಂಡು 282 ರನ್‌ ಪೇರಿಸಿ ಗೆಲುವು ಸಾಧಿಸಿತು. ಬಾಂಗ್ಲಾದೇಶ ತಂಡದ ಪರ ನಜ್ಮುಲ್ ಹುಸೇನ್ ಶಾಂಟೊ 90 ರನ್ ಗಳ ಇನಿಂಗ್ಸ್ ಆಡಿದರು. ನಾಯಕ ಶಕೀಬ್ ಅಲ್ ಹಸನ್ 82 ರನ್ ಗಳಿಸಿದರು. ಶಾಕಿಬ್ ಮತ್ತು ಶಾಂಟೊ ಮೂರನೇ ವಿಕೆಟ್‌ಗೆ 149 ಎಸೆತಗಳಲ್ಲಿ 169 ರನ್‌ಗಳ ಜೊತೆಯಾಟವಾಡಿದರು.

ಈ ಜೊತೆಯಾಟವೇ ಪಂದ್ಯದ ನಿಜವಾದ ತಿರುವು ಎನಿಸಿತ್ತು. ಈ ಜೊತೆಯಾಟ ಬೇರ್ಪಡಿಸಿದ ಬಳಿಕ ಶ್ರೀಲಂಕಾ ಪುನರಾಗಮನ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿತು, ಆದರೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಇದುವರೆಗೆ 4 ಪಂದ್ಯಗಳು ನಡೆದಿದ್ದು, ಇದರಲ್ಲಿ ಬಾಂಗ್ಲಾದೇಶ ತಂಡದ ಮೊದಲ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಪರ ವೇಗಿ ದಿಲ್ಶಾನ್ ಮಧುಶಂಕ 3 ವಿಕೆಟ್ ಪಡೆದರು. ಮಹೇಶ್‌ ತೀಕ್ಷಣ ಮತ್ತು ಏಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್‌ ಉರುಳಿಸಿದರು.

Tap to resize

Latest Videos

ಈ ಪಂದ್ಯದಲ್ಲಿ, ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಏಂಜೆಲೊ ಮ್ಯಾಥ್ಯೂಸ್‌ಗೆ ಟೈಮ್ಡ್‌ ಔಟ್‌ ತೀರ್ಪು ನೀಡಲಾಯಿತು. 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ಯಾಟ್ಸ್‌ಮನ್‌ಗೆ ಟೈಮ್ಡ್‌ ಔಟ್ ನೀಡಲಾಗಿದೆ. 25ನೇ ಓವರ್‌ನ ಎರಡನೇ ಎಸೆತದಲ್ಲಿ ಸದಿರಾ ಔಟಾದ ನಂತರ, ಮ್ಯಾಥ್ಯೂಸ್ ಮೈದಾನಕ್ಕೆ ಬಂದರು, ಆದರೆ ಅವರು ಪಿಚ್ ತಲುಪಿದ ತಕ್ಷಣ ಅವರ ಹೆಲ್ಮೆಟ್‌ನ ಪಟ್ಟಿಯು ಮುರಿದುಹೋಯಿತು. ಈ ವೇಳೆ ಮ್ಯಾಥ್ಯೂಸ್‌ ಮತ್ತೊಂದು ಹೆಲ್ಮೆಟ್‌ ಹೇಳಿದರು. ಈ ವೇಳೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಔಟ್‌ಗೆ ಮನವಿ ಮಾಡಿದರು. ಈ ವೇಳೆ ಮೈದಾನದ ಅಂಪೈರ್‌ಗಳು ಕೂಡ ಮ್ಯಾಥ್ಯೂಸ್‌ ಟೈಮ್ಡ್‌ ಔಟ್‌ ತೀರ್ಪು ನೀಡಿದರು. ಇದರಿಂದಾಗಿ ಬಾಂಗ್ಲಾದೇಶ ತಂಡ  ಒಂದೇ ಎಸೆತಕ್ಕೆ ಎರಡು ವಿಕೆಟ್‌ ಕಳೆದುಕೊಂಡಿತು.

ಟೀಮ್‌ ಇಂಡಿಯಾ ಪ್ಲೇಯರ್‌ಗಳ ಹೆಸರಲ್ಲೂ ಜಾತಿ ಕಂಡ ಚಿದಂಬರಂ ಪುತ್ರ, ಬಿಸಿಸಿಐಗೆ ಮಾಡಿದ್ರು ಈ ರಿಕ್ವೆಸ್ಟ್‌!

ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಪ್ರದರ್ಶನ ಟೂರ್ನಿಯಲ್ಲಿ ಕಳಪೆಯಾಗಿದೆ. ಬಾಂಗ್ಲಾದೇಶ ಸೆಮಿಫೈನಲ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದು, ಈ ಸೋಲಿನ ನಂತರ ಶ್ರೀಲಂಕಾ ತಂಡದ ಭರವಸೆಯೂ ಕೊನೆಗೊಂಡಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಆಡಿದ 8 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ ಬಾಂಗ್ಲಾದೇಶ ಕೂಡ 8 ಪಂದ್ಯಗಳಲ್ಲಿ 2 ಗೆದ್ದಿದೆ.

ಚರಿತ್ ಅಸಲಂಕಾ ಶತಕ; ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದ ಶ್ರೀಲಂಕಾ

click me!