
ನವದೆಹಲಿ(ಜೂ.26): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಐಪಿಎಲ್ ಫೈನಲ್ ಪಂದ್ಯ ಮುಗಿದ ಕೆಲವೇ ದಿನಗಳಲ್ಲಿ ವಿಶ್ವಕಪ್ ಆರಂಭಗೊಳ್ಳಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 14ಕ್ಕೆ ನಡೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಬಳಿಕ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಇನ್ನೂ ಐಸಿಸಿಗೆ ಅಧಿಕೃತವಾಗಿ ಪತ್ರ ಬರೆದು ತಿಳಿಸಿಲ್ಲ. ಆದರೆ ಈಗಾಗಲೇ ಸ್ಥಳಾಂತರಕ್ಕೆ ಸಿದ್ಧತೆ ಆರಂಭವಾಗಿದೆ ಎನ್ನಲಾಗಿದೆ. ಮೊದಲ ಸುತ್ತಿನ ಪಂದ್ಯಗಳನ್ನು ಯುಎಇ ಹಾಗೂ ಒಮಾನ್‌ನಲ್ಲಿ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಅಕ್ಟೋಬರ್ 10ರೊಳಗೆ ಐಪಿಎಲ್ ಮುಗಿಸಲು ಐಸಿಸಿ ಒತ್ತಡ?
2021ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯದ ಹಕ್ಕನ್ನು ಬಿಸಿಸಿಐ ಪಡೆದುಕೊಂಡಿದೆ. ಭಾರತದಲ್ಲೇ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಕೋವಿಡ್ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಟೂರ್ನಿ ಬೇರೆಡೆಗೆ ಸ್ಥಳಾಂತರವಾದರೂ ಆತಿಥ್ಯದ ಹಕ್ಕನ್ನು ಬಿಸಿಸಿಐ ಬಿಟ್ಟುಕೊಡದಿರಲು ತೀರ್ಮಾನಿಸಿದೆ.
ಐಸಿಸಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಬಿಸಿಸಿಐ, ಐಸಿಸಿ ಬಳಿ ಕಾಲಾವಕಾಶವನ್ನು ಕೇಳಿದೆ. ಅದರಂತೆ ಐಸಿಸಿ ಇದೇ ಜೂನ್ 28ರೊಳಗಾಗಿ ತನ್ನ ತೀರ್ಮಾನ ತಿಳಿಸಲು ಬಿಸಿಸಿಐಗೆ ಸಮಯಾವಕಾಶವನ್ನು ನೀಡಿದೆ. ಸದ್ಯದಲ್ಲೇ ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.