ಐಪಿಎಲ್ ಭಾಗ -2 ಯಶಸ್ವಿ ಮುಕ್ತಾಯ: ಹೊಸ ತಾರೆಯರ ಉದಯ..!

By Kannadaprabha NewsFirst Published Oct 16, 2021, 1:36 PM IST
Highlights

* ಯಾವುದೇ ಅಡಚಣೆಯಿಲ್ಲದೇ ಅತ್ಯಂತ ಯಶಸ್ವಿಯಾಗಿ ಐಪಿಎಲ್ 2021 ಮುಕ್ತಾಯ

* ಯುಎಇನ ಮೂರು ಕ್ರೀಡಾಂಗಣಗಳಲ್ಲಿ ಅತ್ಯಂತ ಸುರಕ್ಷಿತವಾಗಿ ನಡೆದ ಐಪಿಎಲ್ ಟೂರ್ನಿ

* 14ನೇ ಆವೃತ್ತಿಯ ಐಪಿಎಲ್‌ನಲ್ಲೂ ಹೊಸ ತಾರೆಗಳ ಉದಯ

ದುಬೈ(ಅ.16): ಐಪಿಎಲ್‌ (IPL 2021) 14ನೇ ಆವೃತ್ತಿ ಪೂರ್ಣಗೊಳ್ಳಲು ಬರೋಬ್ಬರಿ 6 ತಿಂಗಳ ಸಮಯ ಹಿಡಿಯಿತು. ಕೊರೋನಾ ಸೋಂಕಿನಿಂದಾಗಿ ಮೊದಲ 29 ಪಂದ್ಯಗಳ ಬಳಿಕ ಸ್ಥಗಿತಗೊಂಡಿದ್ದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿ, ಟಿ20 ವಿಶ್ವಕಪ್‌ಗೂ (T20 World Cup) ಮೊದಲೇ ಸಮಯ ಹೊಂದಿಸಿ ಯಶಸ್ವಿಯಾಗಿ ಆಯೋಜಿಸುವಲ್ಲಿ ಬಿಸಿಸಿಐ ಸಂಪೂರ್ಣ ಯಶಸ್ಸು ಕಂಡಿತು. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್‌ 27 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಧೋನಿ ಪಡೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬಾಕಿ ಇದ್ದ 31 ಪಂದ್ಯಗಳನ್ನು ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಯಾವುದೇ ಅಡ್ಡಿ, ಆತಂಕ, ಕೊರೋನಾ ಸೋಂಕಿನ (Coronavirus) ಸಮಸ್ಯೆಯಿಲ್ಲದೆ ನಡೆಸಿದ ಬಿಸಿಸಿಐ ಭಾರೀ ನಷ್ಟವನ್ನು ತಪ್ಪಿಸಿಕೊಂಡಿತು. ಐಪಿಎಲ್‌ ಟೂರ್ನಿ ನಡೆಯದಿದ್ದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಬರೋಬ್ಬರಿ 3000 ಕೋಟಿ ರುಪಾಯಿ ನಷ್ಟವಾಗುತ್ತಿತ್ತು. ಆ ಆತಂಕ ದೂರವಾಯಿತು.

IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

‘ಬಾಸ್‌’ ಬಿಸಿಸಿಐ : ಐಪಿಎಲ್‌ಗೆ ವೇಳಾಪಟ್ಟಿ ಸಿದ್ಧಪಡಿಸುವ ಮೊದಲು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌) ಟೂರ್ನಿಯನ್ನು ಮುಂಚಿತವಾಗಿ ಮುಕ್ತಾಯಗೊಳಿಸುವಂತೆ ವಿಂಡೀಸ್‌ ಕ್ರಿಕೆಟ್‌ ಮಂಡಳಿಯ ಮನವೊಲಿಸಿದ ಬಿಸಿಸಿಐ (BCCI), ಟಿ20 ವಿಶ್ವಕಪ್‌ ಮುಂದಿದ್ದರೂ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗಳು ತಮ್ಮ ತಾರಾ ಆಟಗಾರರನ್ನು ಐಪಿಎಲ್‌ಗೆ ಕಳುಹಿಸಿಕೊಡುವಂತೆ ನೋಡಿಕೊಂಡಿತು. ಜೊತೆಗೆ ಕ್ರೀಡಾಂಗಣಕ್ಕೆ ಪ್ರೇಕ್ಷಕರನ್ನು ಬಿಡಲು ಯುಎಇ ಆಡಳಿತವನ್ನು ಒಪ್ಪಿಸುವಲ್ಲಿಯೂ ಸೈ ಎನಿಸಿಕೊಂಡಿತು. ತಾನೇಕೆ ವಿಶ್ವ ಕ್ರಿಕೆಟ್‌ನ ‘ಬಾಸ್‌’ ಎನ್ನುವುದನ್ನು ಬಿಸಿಸಿಐ ಮತ್ತೊಮ್ಮೆ ಸಾಬೀತು ಪಡಿಸಿತು.

IPL 2021: ರುತುರಾಜ್‌ಗೆ ಆರೇಂಜ್, ಹರ್ಷಲ್ ಪಟೇಲ್‌ಗೆ ಪರ್ಪಲ್ ಕ್ಯಾಪ್, ಯಾರ‍್ಯಾರಿಗೆ ಪ್ರಶಸ್ತಿ?

ರನ್‌ಗೆ ಬರ: ಯುಎಇ ಚರಣದಲ್ಲಿ ನಡೆದ ಬಹುತೇಕ ಪಂದ್ಯಗಳಲ್ಲಿ ತಂಡಗಳು ರನ್‌ ಬರ ಎದುರಿಸಿದವು. ಮೂರೂ ಕ್ರೀಡಾಂಗಣಗಳಲ್ಲಿ ಪಿಚ್‌ ರನ್‌ ಹೊಳೆಗೆ ಸಾಕ್ಷಿಯಾಗಲಿಲ್ಲ. ಆದರೂ ರೋಚಕತೆಗೆ ಯಾವುದೇ ಕೊರತೆ ಇರಲಿಲ್ಲ. ಬಹುತೇಕ ಪಂದ್ಯಗಳ ಫಲಿತಾಂಶ ಕೊನೆ ಓವರಲ್ಲಿ ನಿರ್ಧಾರವಾಯಿತು. ಭಾರತ ಚರಣದಲ್ಲಿ ನಡೆದಿದ್ದ 29 ಪಂದ್ಯಗಳಲ್ಲಿ 8 ಬಾರಿ ತಂಡಗಳು 200ಕ್ಕೂ ಹೆಚ್ಚು ಮೊತ್ತ ದಾಖಲಿಸಿದ್ದವು. ಆದರೆ ಯುಎಇ ಚರಣದಲ್ಲಿ 200ಕ್ಕೂ ಹೆಚ್ಚು ರನ್‌ ದಾಖಲಾಗಿದ್ದು ಕೇವಲ ಒಮ್ಮೆ ಮಾತ್ರ. ಮುಂಬೈ ಇಂಡಿಯನ್ಸ್‌ ತನ್ನ ಅಂತಿಮ ಪಂದ್ಯದಲ್ಲಿ ದಾಖಲಿಸಿದ 235 ರನ್‌ ಈ ಆವೃತ್ತಿಯ ಗರಿಷ್ಠ ಮೊತ್ತ.

ಹೊಸ ತಾರೆಯರ ಉದಯ

ಐಪಿಎಲ್‌ ಈ ವರ್ಷವೂ ನಿರಾಸೆ ಮೂಡಿಸಲಿಲ್ಲ. ಹಲವು ಹೊಸ ತಾರೆಯರನ್ನು ಕ್ರಿಕೆಟ್‌ ಲೋಕಕ್ಕೆ ಪರಿಚಯಿಸಿತು. ಪ್ರಮುಖವಾಗಿ ಕೆಕೆಆರ್‌ನ ಆರಂಭಿಕ ಬ್ಯಾಟ್ಸ್‌ಮನ್‌ ವೆಂಕಟೇಶ್‌ ಅಯ್ಯರ್‌ (Venkatesh Iyer) ಅನಿರೀಕ್ಷಿತವಾಗಿ ಅವಕಾಶ ಗಿಟ್ಟಿಸಿ ಅಬ್ಬರಿಸಿದರು. ಅವರ ಸ್ಫೋಟಕ ಆಟ ಎಲ್ಲರ ಗಮನ ಸೆಳೆಯಿತು. ಚೆನ್ನೈ ತಂಡದ ಋುತುರಾಜ್‌ ಗಾಯಕ್ವಾಡ್‌ (Ruturaj Gaikwad) ಕಳೆದ ಆವೃತ್ತಿಯ ಕೊನೆಯಲ್ಲಿ ತಾವೊಬ್ಬ ಭರವಸೆಯ ಆಟಗಾರ ಎನ್ನುವ ಸುಳಿವು ನೀಡಿದ್ದರು. ಅವರ ಪೂರ್ಣ ಸಾಮರ್ಥ್ಯ ಈ ಆವೃತ್ತಿಯಲ್ಲಿ ಅನಾವರಣಗೊಂಡಿತು. ಅತಿಹೆಚ್ಚು ರನ್‌ ಕಲೆಹಾಕಿ ಗಾಯಕ್ವಾಡ್‌ ಮಿಂಚಿದರು.

ಆರ್‌ಸಿಬಿಯ ವೇಗಿ ಹರ್ಷಲ್‌ ಪಟೇಲ್‌ (Harshal Patel) ಈ ಹಿಂದೆ ಹಲವು ಆವೃತ್ತಿಗಳಲ್ಲಿ ಆಡಿದ್ದರೂ, ಅವರಿಂದ ಈ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ತಮ್ಮ ಅತ್ಯುತ್ತಮ ಪ್ರದರ್ಶನದಿಂದಾಗಿ ಟಿ20 ವಿಶ್ವಕಪ್‌ಗೆ ಭಾರತ ತಂಡದ ನೆಟ್‌ ಬೌಲರ್‌ ಆಗಿ ಆಯ್ಕೆಯಾದರು. ಯಶಸ್ವಿ ಜೈಸ್ವಾಲ್‌, ಆವೇಶ್‌ ಖಾನ್‌, ಮಹಿಪಾಲ್‌ ಲೊಮ್ರಾರ್‌, ಉಮ್ರಾನ್‌ ಮಲಿಕ್‌ ಸೇರಿ ಇನ್ನೂ ಅನೇಕರು ಗಮನ ಸೆಳೆದರು.

click me!