
ಬೆಂಗಳೂರು(ನ.28): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಪ್ರಮುಖ ವೇಗಿ ಹರ್ಷಲ್ ಪಟೇಲ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದೀಗ 33 ವರ್ಷದ ವೇಗಿ ಹರ್ಷಲ್ ಪಟೇಲ್. ಆರ್‌ಸಿಬಿ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದು, ಬೆಂಗಳೂರು ಫ್ರಾಂಚೈಸಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಹೌದು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಂತೆ ಬರೆದುಕೊಂಡಿರುವ ಹರ್ಷಲ್ ಪಟೇಲ್, ಕಳೆದ ಮೂರು ವರ್ಷಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ಜತೆಗಿನ ಪಯಣವನ್ನು ಸ್ಮರಿಸಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತನ್ನ ಜತೆಗೆ ನಿಂತ ಎಲ್ಲರಿಗೂ ಪಟೇಲ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
IPL Retention: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB
"ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗೆ ನನಗಾದ ಕೆಲವೊಂದು ವಿಶೇಷ ಅನುಭವಗಳನ್ನು ಸ್ಮರಿಸಿಕೊಳ್ಳಲು ಬಯಸುತ್ತೇನೆ. ಕಳೆದ ಮೂರು ವರ್ಷಗಳ ಕಾಲ ಆರ್‌ಸಿಬಿ ಜತೆಗಿನ ನನ್ನ ಪಯಣ ಅವಿಸ್ಮರಣೀಯವಾಗಿತ್ತು. ನನ್ನ ಸಂಕಷ್ಟ ಹಾಗೂ ಸಂತಸದ ಸಮಯದಲ್ಲಿ ಜತೆಗೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನೀಗ ಹೊರಬಂದ ಹಿನ್ನಲೆಯಲ್ಲಿ, ಆರ್‌ಸಿಬಿ ಬಗೆಗಿನ ಅಭಿಮಾನ ನನ್ನ ಹೃದಯದಲ್ಲಿದೆ" ಎಂದು ಹರ್ಷಲ್ ಪಟೇಲ್ ಬರೆದುಕೊಂಡಿದ್ದಾರೆ.
2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ 9.66ರ ಎಕಾನಮಿಯಲ್ಲಿ ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಹೀಗಿದ್ದೂ 14 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 2021ರ ಐಪಿಎಲ್ ಹರ್ಷಲ್ ಪಟೇಲ್ ಪಾಲಿಗೆ ಅವಿಸ್ಮರಣೀಯವಾಗಿತ್ತು. 2021ರ ಐಪಿಎಲ್‌ನಲ್ಲಿ ಹರ್ಷಲ್ ಪಟೇಲ್ ಆರ್‌ಸಿಬಿ ಪರ 15 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿ IPL ಫ್ರಾಂಚೈಸಿ 20 ಕೋಟಿ ಆಫರ್ ತಿರಸ್ಕರಿಸಿದ RCB ಹುಲಿ ವಿರಾಟ್ ಕೊಹ್ಲಿ..!
2024ರ ಐಪಿಎಲ್ ಆಟಗಾರರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಹರ್ಷಲ್ ಪಟೇಲ್ ಮಾತ್ರವಲ್ಲದೇ ಜೋಶ್ ಹೇಜಲ್‌ವುಡ್, ವನಿಂದು ಹಸರಂಗ, ಫಿನ್ ಅಲೆನ್ ಸೇರಿದಂತೆ 11 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ.
ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರಿವರು:
ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್
ಹರಾಜಿಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರರಿವರು:
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್, ರೀಸ್ ಟಾಪ್ಲೆ, ವಿಲ್ ಜೇಕ್ಸ್, ಸುಯಾಶ್ ಪ್ರಭುದೇಸಾಯಿ, ಅನುಜ್ ರಾವತ್, ಮಹಿಪಾಲ್ ಲೋಮ್ರರ್, ಮನೋಜ್ ಭಾಂಡ್ಗೆ, ಕರ್ಣ್ ಶರ್ಮಾ, ಮಯಾಂಕ್ ಡಾಗರ್, ವೈಶಾಖ್ ವಿಜಯ್‌ಕುಮಾರ್, ಆಕಾಶ್ ದೀಪ್, ರಜನ್ ಕುಮಾರ್, ಹಿಮಾಂಶು ಶರ್ಮಾ.
ಇನ್ನು ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಮುಂಬೈನಿಂದ ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದೀಗ ಮುಂಬರುವ ಐಪಿಎಲ್ ಆಟಗಾರರ ಹರಾಜಿಗೆ ಆರ್‌ಸಿಬಿ ಪರ್ಸ್‌ನಲ್ಲಿ 23.25 ಕೋಟಿ ರುಪಾಯಿ ಉಳಿದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.