
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಅದ್ಭುತ ಆಟವನ್ನು ಪ್ರದರ್ಶಿಸಿ ಫೈನಲ್ ಪ್ರವೇಶಿಸಿದ್ದರೂ, 'ಟೀಂ ಇಂಡಿಯಾ ಇನ್ನೂ ತನ್ನ ಶ್ರೇಷ್ಠ ಪಂದ್ಯವನ್ನು ಅಡಿಲ್ಲ. ಅದು ಫೈನಲ್‌ನಲ್ಲಿ ಬರಬಹುದು' ಎಂದು ಕೋಚ್ ಗೌತಮ್ ಗಂಭೀರ್ ಎಚ್ಚರಿಕೆ ನೀಡಿದ್ದಾರೆ.
ಭಾರತದ ಗೆಲುವಿನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಗಂಭೀರ್, 'ನಾವು ಇನ್ನೂ ಪರಿಪೂರ್ಣ ಆಟವನ್ನು ಅಡಿಲ್ಲ. ಈ ಪ್ರದರ್ಶನದಿಂದ ತೃಪ್ತನಾಗುವುದಿಲ್ಲ. ಫೈನಲ್‌ನಲ್ಲಿ ಭಾರತ ತನ್ನ ಪರಿಪೂರ್ಣ ಆಟವನ್ನು ಪ್ರದರ್ಶಿಸುತ್ತದೆ. ನಾವು ಸುಧಾರಿಸುತ್ತಲೇ ಇರಲು ಬಯಸುತ್ತೇವೆ. ಕ್ರಿಕೆಟ್ ಮೈದಾನದಲ್ಲಿ ನಾವು ಆಕ್ರಮಣಕಾರಿಯಾಗಿರಲು, ಮೈದಾನದ ಹೊರಗೆ ವಿನಮ್ರರಾಗಿರಲು ಬಯಸುತ್ತೇವೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಎದುರು ಸೋಲುತ್ತಿದ್ದಂತೆಯೇ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ದಿಗ್ಗಜ ಕ್ರಿಕೆಟಿಗ!
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಗೆಲುವುಗಳನ್ನು ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗ್ರೂಪ್ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು ಮಾರ್ಚ್ 04ರಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಮಾರ್ಚ್ 09ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಎದುರು ಕಾದಾಡಲಿದೆ.
ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ಮಿಲ್ಲರ್ ಶತಕದ ಹೋರಾಟ ವ್ಯರ್ಥ: ಮಾ.9ಕ್ಕೆ ದುಬೈನಲ್ಲಿ ಭಾರತ vs ಕಿವೀಸ್ ಫೈನಲ್
ಫೈನಲ್ ಪಂದ್ಯ ಟಿಕೆಟ್‌ಗೆ ಗರಿಷ್ಠ ₹2.84 ಲಕ್ಷ: ಎಲ್ಲಾ ಟಿಕೆಟ್‌ಗಳೂ ಸೋಲ್ಡೌಟ್!
ದುಬೈ: ಮಾ.9ರಂದು ದುಬೈನಲ್ಲಿ ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಕೇವಲ 2 ಗಂಟೆಗಳಲ್ಲೇ ಮಾರಾಟಗೊಂಡಿವೆ. ಮಂಗಳವಾರ ಐಸಿಸಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿತ್ತು.
ಟಿಕೆಟ್‌ಗೆ ಕನಿಷ್ಠ 250 ದಿರ್ಹಮ್(ಸುಮಾರು ₹5,925) ಹಾಗೂ ಗರಿಷ್ಠ 12,000 ದಿರ್ಹಮ್(ಸುಮಾರು 2 ಲಕ್ಷ 84 ಸಾವಿರ) ಬೆಲೆ ನಿಗದಿಪಡಿಸಿತ್ತು. ಆದರೆ ಮಾರಾಟಕ್ಕೆ ಇಟ್ಟ 2 ಗಂಟೆಗಳಲ್ಲೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿರುವುದಾಗಿ ತೋರಿಸುತ್ತಿತ್ತು. ದುಬೈ ಕ್ರೀಡಾಂಗಣ 25,000 ಆಸನ ಸಾಮರ್ಥ್ಯ ಹೊಂದಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತ ತಂಡವು ತನ್ನ ಪಾಲಿನ ಪಂದ್ಯವನ್ನು ದುಬೈ ಮೈದಾನದಲ್ಲಿ ಆಡುತ್ತಿದೆ. ಭಾರತ ಫೈನಲ್ ಪ್ರವೇಶಿಸಿರುವುದರಿಂದಾಗಿ ಫೈನಲ್ ಪಂದ್ಯವು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಿಗದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.