ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

By Suvarna NewsFirst Published Jul 5, 2021, 11:28 AM IST
Highlights

* ವೆಸ್ಟ್ ಇಂಡೀಸ್‌ ಎದುರು ಟಿ20 ಸರಣಿ ಗೆದ್ದ ದಕ್ಷಿಣ ಆಫ್ರಿಕಾ

* ಬ್ಯಾಟಿಂಗ್‌ನಲ್ಲಿ ಮಿಂಚಿದ್ದ  ಡಿ ಕಾಕ್‌-ಮಾರ್ಕ್‌ರಮ್‌

* 3-2 ಅಂತರದಲ್ಲಿ ಟಿ20 ಸರಣಿ ಹರಿಣಗಳ ಪಾಲು

ಸೇಂಟ್‌ ಜಾರ್ಜಸ್(ಜು.05): ವೆಸ್ಟ್‌ಇಂಡೀಸ್‌ ವಿರುದ್ಧ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 25 ರನ್‌ಗಳ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, 3-2ರಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. 

ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ವಿಕೆಟ್‌ಗೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್‌ ಹಾಗೂ ಏಯ್ಡನ್‌ ಮಾರ್ಕ್‌ರಮ್‌ 128 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಾರ್ಕ್ರಮ್‌ 70 ಹಾಗೂ ಡಿ ಕಾಕ್‌ 60 ರನ್‌ ಗಳಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 4 ವಿಕೆಟ್ ಕಳೆದುಕೊಂಡು 168 ರನ್‌ಗಳನ್ನು ಕಲೆಹಾಕಿತ್ತು.

South Africa win the T20I series 3-2! ✅

Recording 168/4 in the first innings, the Proteas successfully restricted West Indies to 143/9, claiming a 25-run victory at Grenada. | https://t.co/QKIY1kZV2x pic.twitter.com/VTweXNsH3k

— ICC (@ICC)

ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ವೆಸ್ಟ್‌ ಇಂಡಿಸ್‌ ಕ್ರಿಕೆಟ್ ತಂಡ ಕೂಡಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸಿಮೊನ್ಸ್‌ 3 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಎವಿನ್ ಲೆವಿಸ್(52) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶಿಮ್ರೊನ್‌ ಹೆಟ್ಮೇಯರ್(33) ಉತ್ತಮ ಬ್ಯಾಟಿಂಗ್ ನಡೆಸಿದಾದರೂ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರ ಚಾಣಾಕ್ಷ ಬೌಲಿಂಗ್ ನಡೆಸಿದ ತಬ್ರೀಜ್ ಸಂಶಿ ಕೇವಲ 11 ರನ್‌ ನೀಡಿ 1 ವಿಕೆಟ್ ಪಡೆಯುವ ಮೂಲಕ ವಿಂಡೀಸ್‌ ರನ್‌ ವೇಗಕ್ಕೆ ಕಡಿವಾಡ ಹಾಕಿದರು. ಇನ್ನು ಲುಂಗಿ ಎಂಗಿಡಿ 3 ಹಾಗೂ ಕಗಿಸೋ ರಬಾಡ 2 ವಿಕೆಟ್ ಪಡೆಯುವ ಮೂಲಕ ಕೆರಿಬಿಯನ್ನರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ವಿಂಡೀಸ್ 9 ವಿಕೆಟ್ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸ್ಕೋರ್‌: 
ದಕ್ಷಿಣ ಆಫ್ರಿಕಾ 168/4 
ವಿಂಡೀಸ್‌ 143/9
 

click me!