Vijay Hazare Trophy 2021 : ಬರೋಡ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Suvarna News   | Asianet News
Published : Dec 12, 2021, 07:34 PM IST
Vijay Hazare Trophy 2021 : ಬರೋಡ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಸಾರಾಂಶ

ವಿ.ಕೌಶಿಕ್, ಕೆಸಿ ಕಾರ್ಯಪ್ಪ ಸೂಪರ್ ಬೌಲಿಂಗ್ ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಕರ್ನಾಟಕ ವಿಜೆಡಿ ನಿಯಮದನ್ವಯ ಬರೋಡ ವಿರುದ್ಧ 6 ವಿಕೆಟ್ ಜಯ

ತಿರುವನಂತಪುರಂ (ಡಿ. 12): ಪಂದ್ಯದ ಎಲ್ಲಾ ವಿಭಾಗಗಳಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆದ ಕರ್ನಾಟಕ (Karnataka ) ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಕೇದರ್ ದೇವಧರ್ ಸಾರಥ್ಯದ ಬರೋಡ (Baroda) ತಂಡವನ್ನು ವಿಜೆಡಿ ನಿಯಮದನ್ವಯ (VJD Method) 6 ವಿಕೆಟ್ ಗಳಿಂದ ಮಣಿಸಿತು. ಇದರೊಂದಿಗೆ ಬಿ ಗುಂಪಿನಲ್ಲಿ ಆಡಿದ 4 ಪಂದ್ಯಗಳಿಂದ ಮೂರು ಗೆಲುವು ಹಾಗೂ 1 ಸೋಲು ಕಂಡಿರುವ ಕರ್ನಾಟಕ ತಂಡ ಕೇವಲ ರನ್ ರೇಟ್ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ತಮಿಳುನಾಡು (Tamil Nadu) ತಂಡ ಪುದುಚೇರಿ ವಿರುದ್ಧ 1 ರನ್ ಗಳ ಅಘಾತಕಾರಿ ಸೋಲು ಕಂಡಿರುವ ಕಾರಣ ರಾಜ್ಯ ತಂಡಕ್ಕೆ ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಗೇರುವ ಅವಕಾಶವಿದೆ.
ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಮೈದಾನದಲ್ಲಿ (Greenfield International Stadium) ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ (Manish Pandey) ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿದ್ದ ಪಿಚ್ ನಲ್ಲಿ ಬರೋಡ ಬ್ಯಾಟ್ಸ್ ಮನ್ ಗಳ ಮೇಲೆ ಕರ್ನಾಟಕ ಪಾರಮ್ಯ ಸಾಧಿಸಿದ್ದರಿಂದ 48.3 ಓವರ್ ಗಳಲ್ಲಿ 176 ರನ್ ಗೆ ಆಲೌಟ್ ಮಾಡಿತು. ಪ್ರತಿಯಾಗಿ ಕರ್ನಾಟಕ ತಂಡ 38.4 ಓವರ್ ಗಳಲ್ಲಿ4 ವಿಕೆಟ್ ಗೆ 150 ರನ್ ಬಾರಿಸಿದ್ದ ವೇಳೆ ಮಳೆ ಪಂದ್ಯಕ್ಕೆ ಅಡ್ಡಿ ಮಾಡಿದ್ದರಿಂದ ವಿಜೆಡಿ ನಿಯಮದನ್ವಯ ರಾಜ್ಯ ತಂಡಕ್ಕೆ 6 ವಿಕೆಟ್ ಗೆಲುವನ್ನು ಘೋಷಣೆ ಮಾಡಲಾಯಿತು. ಇದಕ್ಕೂ ಮುನ್ನ ಗೆಲುವಿಗೆ 78 ಎಸೆತಗಳಲ್ಲಿ 43 ರನ್ ಬೇಕಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತಾದರೂ, ಕೆಲ ಹೊತ್ತಿನ ಬಳಿಕ ಪಂದ್ಯ ಆರಂಭವಾಗಿತ್ತು.
ಚೇಸಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ (35) ಹಾಗೂ ರೋಹನ್ ಕದಮ್ (44) ಮೊದಲ ವಿಕೆಟ್ ಗೆ 44 ರನ್ ಗಳ ಎಚ್ಚರಿಕೆಯ ಜೊತೆಯಾಟವಾಡಿದ್ದರು. ಈ ವೇಳೆ ದಾಳಿಗಿಳಿದ ಬಲಗೈ ಸ್ಪಿನ್ನರ್ ಕಾರ್ತಿಕ್ ಕಾಕಡೆ, ರೋಹನ್ ಕದಮ್ (Rohan Kadam) ಅವರ ವಿಕೆಟ್ ಉರುಳಿಸಿದರೆ, ತಂಡದ ಮೊತ್ತ 69 ರನ್ ಆಗಿದ್ದ ವೇಳೆ ಅನುಭವಿ ಕೃನಾಲ್ ಪಾಂಡ್ಯ ಎಸೆತದಲ್ಲಿ ರವಿಕುಮಾರ್ ಸಮರ್ಥ್ (Ravikumar Samarth) ಸ್ಟಂಪ್ ಔಟ್ ಆಗಿ ಹೊರನಡೆದರು.
 


ಈ ಹಂತದಲ್ಲಿ ಜೊತೆಯಾದ ಕೆವಿ ಸಿದ್ಧಾರ್ಥ್ (KV Siddharth) ಹಾಗೂ ನಾಯಕ ಮನೀಷ್ ಪಾಂಡೆ  ತಂಡದ ಮೊತ್ತವನ್ನು 100 ರ ಗಡಿ ದಾಟಿಸಿ ನಿರ್ಗಮಿಸಿದರು. ಕಳಪೆ ಫಾರ್ಮ್ ನಲ್ಲಿರುವ ಕರುಣ್ ನಾಯರ್ 11 ಎಸೆತಗಳಲ್ಲಿ ಶೂನ್ಯ ರನ್ ಗೆ ಔಟ್ ಆದಾಗ ರಾಜ್ಯ ತಂಡ ಆತಂಕದ ಸ್ಥಿತಿಯಲ್ಲಿತ್ತು. ಆಗ ಕೆವಿ ಸಿದ್ಧಾರ್ಥ್ ಗೆ ಜೊತೆಯಾದ ಶರತ್ ಶ್ರೀನಿವಾಸ್ (Sharath Srinivas ) ಮುರಿಯದ 5ನೇ ವಿಕೆಟ್ ಗೆ 47 ರನ್ ಜೊತೆಯಾಟವಾಡಿ ತಂಡದ ಜಯವನ್ನು ಖಚಿತ ಮಾಡಿದ್ದರು.

Vijay Hazare Trophy 2021 : ಮುಂಬೈ ತಂಡವನ್ನು ಬಗ್ಗುಬಡಿದ ಕರ್ನಾಟಕ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬರೋಡ ತಂಡಕ್ಕೆ ಕೇದರ್ ದೇವಧರ್ ಹಾಗೂ ಆದಿತ್ಯ ವಾಘ್ಮೋಂಡೆ ಮೊದಲ ವಿಕೆಟ್ ಗೆ 59 ರನ್ ಗಳ ಉತ್ತಮ ಆರಂಭ ನೀಡಿದ್ದರು. ಆದರೆ, ಆರಂಭಿಕರಿಬ್ಬರ ವಿಕೆಟ್ ಗಳನ್ನು ವಿ.ಕೌಶಿಕ್ ಉರುಳಿಸಿದ ಬಳಿಕ ಬರೋಡ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅನುಭವಿ ಕೃನಾಲ್ ಪಾಂಡ್ಯ (Krunal Pandya) 24 ರನ್ ಬಾರಿಸಿದರೆ, ಭಾನು ಪನಿಯಾ ಇನ್ನಿಂಗ್ಸ್ ನ ಗರಿಷ್ಠ 40 ರನ್ ಸಿಡಿಸಿದರು.

Vijay Hazare Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಸೋಲು
ಪ್ರವೀಣ್ ದುಬೇ (31ಕ್ಕೆ 2) ಹಾಗೂ ಕೆಸಿ ಕಾರ್ಯಪ್ಪ (28ಕ್ಕೆ 3) ಮಧ್ಯಮ ಕ್ರಮಾಂಕದಲ್ಲಿ ಬರೋಡ ತಂಡಕ್ಕೆ ಘಾತಕ ಪೆಟ್ಟು ನೀಡಿದರು. ದೊಡ್ಡ ಜೊತೆಯಾಟವಾಡಲು ಬರೋಡ ತಂಡ ವಿಫಲವಾಗಿದ್ದು ತಂಡದ ಅಲ್ಪ ಮೊತ್ತಕ್ಕೆ ಕಾರಣವಾಯಿತು. 

ಬಂಗಾಳ ವಿರುದ್ಧ ಕೊನೆಯ ಪಂದ್ಯ
ಬಿ ಗುಂಪಿನ ಅಗ್ರಸ್ಥಾನಕ್ಕಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪೈಪೋಟಿ ಇದ್ದರೆ, ಬಂಗಾಳ ತಂಡ ಮುಂದಿನ ಹಂತಕ್ಕೇರುವ ಆಸೆಯಲ್ಲಿದೆ. ಕರ್ನಾಟಕ ತಂಡ ಕೊನೆಯ ಪಂದ್ಯದಲ್ಲಿ ಮಂಗಳವಾರ ಬಂಗಾಳ (Bengal) ತಂಡವನ್ನು ಎದುರಿಸಲಿದೆ. ಅದೇ ದಿನ ತಮಿಳುನಾಡು ತಂಡ ಬರೋಡವನ್ನು ಎದುರಿಸಲಿದೆ. ಬಂಗಾಳ ವಿರುದ್ಧ ಕರ್ನಾಟಕ ದೊಡ್ಡ ಅಂತರದಿಂದ ಗೆದ್ದು, ಬರೋಡ ವಿರುದ್ಧ ತಮಿಳುನಾಡು ಸೋಲು ಕಂಡಲ್ಲಿ ಗುಂಪಿನ ಅಗ್ರಸ್ಥಾನಿಯಾಗಿ ರಾಜ್ಯ ತಂಡ ಕ್ವಾರ್ಟರ್ ಫೈನಲ್ ಗೆ ಏರಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?