
ಮುಂಬೈ(ಮೇ.28) ಟೀಂ ಇಂಡಿಯಾ ಕೋಚ್ ಹುದ್ದೆಗೆ ಹುಡುಕಾಟ ತೀವ್ರಗೊಂಡಿದೆ. ಕೋಚ್ ಹುದ್ದೆಗೆ ಬಿಸಿಸಿಐ ಆಹ್ವಾನಿಸಿದ್ದ ಅರ್ಜಿ ದಿನಾಂಕ ಮುಗಿದಿದೆ. ಕೆಕೆಆರ್ ಕೋಚ್ ಗೌತಮ್ ಗಂಭೀರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ವಿದೇಶಿ ಕೋಚ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಗೆ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಅರ್ಜಿಗಳು ಬಿಸಿಸಿಐ ಕೈಸೇರಿದೆ. ಆದರೆ ಈ ಅರ್ಜಿಗಳು ನಕಲಿ. ಖ್ಯಾತ ಕ್ರಿಕೆಟಿಗರು, ರಾಜಕಾರಣಿಗಳು, ಸೆಲೆಬ್ರೆಟಿಗಳ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲಾಗಿದೆ. ಸದ್ಯ 3,00 ಅರ್ಜಿಗಳನ್ನು ಬಿಸಿಸಿಐ ತಂಡ ವಿಲೇವಾರಿ ಮಾಡಿ ಶಾರ್ಟ್ ಲಿಸ್ಟ್ ಮಾಡಲಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಬಿಸಿಸಿಐಗೆ ಹಲವು ನಕಲಿ ಅರ್ಜಿಗಳು ಸಲ್ಲಿಕೆಯಾಗಿದೆ. ಕ್ರಿಕೆಟಿಗರ ಪೈಕಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲೂ ಕೆಲವರು ನಕಲಿ ಅರ್ಜಿ ಸಲ್ಲಿಸಿದ್ದಾರೆ.
ಭಾರತ ತಂಡದ ಕೋಚ್ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ..! ಯಾರಾಗ್ತಾರೆ ಹೊಸ ಕೋಚ್?
ಬಿಸಿಸಿಐ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಕೆಲ ಅಭಿಮಾನಿಗಳು ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಷ್ಟೇ ಅಲ್ಲ ತಾವು ಅರ್ಜಿ ಸಲ್ಲಿಸಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ನನ್ನ ಮಾರ್ಗದರ್ಶನ, ಅನುಭವದಿಂದ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲಲಿದೆ ಎಂದು ಬರೆದುಕೊಂಡಿದ್ದರು.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಕನಿಷ್ಠ ಮಾನದಂಡಗಳು ಇರಬೇಕು. ಟೆಸ್ಟ್, ಏಕದಿನ ಪಂದ್ಯಗಳನ್ನು ಆಡಿರಬೇಕು, ಅಂತಾರಾಷ್ಟ್ರೀಯ ತಂಡಕ್ಕ ಕೋಚಿಂಗ್, ಐಪಿಎಲ್ ಅಥವಾ ಇತರ ಲೀಗ್ ಟೂರ್ನಿಗಳಲ್ಲಿ ತಂಡಕ್ಕೆ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಇರಬೇಕು. ಇದೀಗ ಬಿಸಿಸಿಐ ತಂಡ ಅರ್ಹರ ಅರ್ಜಿಗಳನ್ನು ವಿಲೇವಾರಿ ಮಾಡಿ ಸಂದರ್ಶನಕ್ಕೆ ಕರೆಯಲಿದೆ.
ಸಂದರ್ಶನಕ್ಕೆ ಆಯ್ಕೆಯಾಗುವ ಅರ್ಹರು, ಪಿಪಿಟಿ ಪ್ರೆಸೆಂಟೇಶನ್ ಮೂಲಕ ಟೀಂ ಇಂಡಿಯಾದ ಮಾರ್ಗದರ್ಶನ, ರೂಪುರೇಶೆ, ತಮ್ಮ ಕೋಚಿಂಗ್ ಅನುಭವ, ತಂಡವನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಎಲ್ಲಾ ಸೂತ್ರಗಳನ್ನು ವಿವರಿಸಬೇಕು.
ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಟಿ20 ವಿಶ್ವಕಪ್ ಟೂರ್ನಿ ಬಳಿಕ ಅಂತ್ಯಗೊಳ್ಳಲಿದೆ. ಜೂನ್ 30ರ ಒಳಗೆ ಬಿಸಿಸಿಐ ಹೊಸ ಕೋಚ್ ಆಯ್ಕೆ ಮಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.