ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ತಮೀಮ್ ಇಕ್ಬಾಲ್‌ಗೆ ಹೃದಯಾಘಾತವಾಗಿದ್ದು, ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ.
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಕ್‌ಗೆ ಹೃದಯಾಘಾತವಾಗಿದೆ. ಇಂದು ಮುಂಜಾನೆ ರಾಷ್ಟ್ರ ರಾಜಧಾನಿ ಢಾಕಾದ ಹೊರವಲಯದ ಸವಾರ್ ಎಂಬಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತಮೀಮ್ ಇಕ್ಬಾಲ್ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಮೊಹಮಡೆನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಶಿನೆಪುಕುರ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯವು ಸವಾರ್ ಎಂಬಲ್ಲಿ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಪಾಲ್ಗೊಂಡಿದ್ದ ತಮೀಮ್ ಇಕ್ಬಾಲ್‌ಗೆ ಇದ್ದಕ್ಕಿದ್ದಂತೆಯೇ ಎದೆನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಅವರನ್ನು ಹೆಲಿಕಾಪ್ಟರ್ ಮೂಲಕ ಢಾಕಾಗೆ ಏರ್‌ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು, ಆದರೆ ಅವರನ್ನು ಬಿಕೆಎಸ್‌ಪಿ ಮೈದಾನದಿಂದ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಾಗಲಿಲ್ಲ. ನಂತರ ಅವರನ್ನು ಚಿಕಿತ್ಸೆಗಾಗಿ ಫಜಿಲತುನ್ನೆಸ ಆಸ್ಪತ್ರೆಗೆ ಕರೆದೊಯ್ಯಲಾಯಿತು.
"ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಆರಂಭಿಕ ತಪಾಸಣೆಗೆ ಒಳಪಡಿಸಲಾಯಿತು, ಆಗ ಅವರಿಗೆ ಮೈಲ್ಡ್ ಹೃದಯ ಸಮಸ್ಯೆ ಆಗಿರಬಹುದು ಎಂದು ಶಂಕಿಸಲಾಗಿತ್ತು. ಅವರನ್ನು ಢಾಕಾಗೆ ಸಾಗಿಸಲು ಪ್ರಯತ್ನಿಸಲಾಯಿತು, ಆದರೆ ಹೆಲಿಪ್ಯಾಡ್‌ಗೆ ಕರೆದೊಯ್ಯುವ ದಾರಿಯಲ್ಲಿ ಅವರಿಗೆ ಮತ್ತೆ ತೀವ್ರ ಎದೆ ನೋವು ಕಾಣಿಸಿಕೊಂಡಿತು ಮತ್ತು ಅವರನ್ನು ಬೇಗನೆ ಹಿಂತಿರುಗಿಸಬೇಕಾಯಿತು. ವೈದ್ಯಕೀಯ ವರದಿಗಳು ನಂತರ ಅವರಿಗೆ ತೀವ್ರ ಹೃದಯಾಘಾತ ವಾಗಿರುವುದು ದೃಢಪಟ್ಟಿದೆ, ”ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯ ಡಾ. ದೇಬಾಶಿಶ್ ಚೌಧರಿ ಹೇಳಿದ್ದಾರೆ.
"ಇದು ನಮಗೆಲ್ಲರಿಗೂ ಕಷ್ಟದ ಸಮಯ. ಅವರು ಪ್ರಸ್ತುತ ವೈದ್ಯಕೀಯ ನಿಗಾದಲ್ಲಿದ್ದಾರೆ ಮತ್ತು ವೈದ್ಯಕೀಯ ತಂಡವು ಅವರ ಚೇತರಿಕೆಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ" ಎಂದು ಚೌಧರಿ ಹೇಳಿದ್ದಾರೆ.
50 ಓವರ್‌ಗಳ ಪಂದ್ಯದ ಟಾಸ್ ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ಸಂಭವಿಸಿದೆ. ತಮೀಮ್ ಅವರ ಕುಟುಂಬ ಸದಸ್ಯರು ಸವಾರ್‌ಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.
ತಮಿಮ್ ಇಕ್ಬಾಲ್ ಇದೇ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಚಾಂಪಿಯನ್ಸ್ ಟ್ರೋಫಿಗೆ ತೆರಳುವ ಮುನ್ನ ತಮೀಮ್ ಇಕ್ಬಾಲ್ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 2007ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಬಾಂಗ್ಲಾದೇಶ ಪರ ಪಾದಾರ್ಪಣೆ ಮಾಡಿದ ತಮೀಮ್ ಇಕ್ಬಾಲ್ ಹಲವಾರು ಪಂದ್ಯಗಳಲ್ಲಿ ಬಾಂಗ್ಲಾದೇಶಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ. ತಮೀಮ್ ಇಕ್ಬಾಲ್ ಬಾಂಗ್ಲಾದೇಶ ಪರ 243 ಏಕದಿನ, 70 ಟೆಸ್ಟ್ ಹಾಗೂ 78 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 15 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಿಂದ ತಮೀಮ್ ಇಕ್ಬಾಲ್ ಬರೋಬ್ಬರಿ 25 ಶತಕ ಸಿಡಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪರ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ತಮೀಮ್ ಪಾತ್ರರಾಗಿದ್ದಾರೆ.