
ನವದೆಹಲಿ: ಅಂತಾರಾಷ್ಟ್ರೀಯ ಪ್ರವಾಸ ಸಂದರ್ಭದಲ್ಲಿ ಆಟಗಾರರು ತಮ್ಮ ಕುಟುಂಬಸ್ಥರ ಜೊತೆ ಇರುವಂತಿಲ್ಲ ಎನ್ನುವ ಕಠಿಣ ನಿಯಮ ತಂದಿದ್ದ ಬಿಸಿಸಿಐ ಇದೀಗ ಆ ನಿಯಮಗಳನ್ನು ಐಪಿಎಲ್‌ಗೂ ತರಲು ಮುಂದಾಗಿದೆ. ಐಪಿಎಲ್ ವೇಳೆ ಆಟಗಾರರು ಇವರು ಸ್ಥಳ, ಡ್ರೆಸ್ಸಿಂಗ್ ರೂಮ್‌ಗೆ ಕುಟುಂಬಸ್ಥರು ಬರುವಂತಿಲ್ಲ. ಎಲ್ಲಾ ಆಟಗಾರರು ತಂಡದ ಬಸ್‌ನಲ್ಲೇ ಸಂಚರಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಫೆ.18ರಂದು ನಡೆದ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಫ್ರಾಂಚೈಸಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಹೊಸ ನಿಯಮಗಳು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಅನ್ವಯಿಸಲಿದೆ. ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಭಾರತ-ಆಸೀಸ್ ಸೆಮೀಸ್ ಫೈಟ್!
ಇನ್ನು, ‘ಪಂದ್ಯದ ವೇಳೆ ಆಟಗಾರರು ಕನಿಷ್ಠ 2 ಓವರ್‌ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಷನ್ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ. ಅಲ್ಲದೇ ಯಾವುದೇ ಜೆರ್ಸಿ ಸಂಖ್ಯೆಗಳ ಬದಲಾವಣೆ ಮಾಡುವುದಿದ್ದರೆ 24 ಗಂಟೆಗೂ ಮುಂಚೆ ತಿಳಿಸಬೇಕು’ ಎಂದಿದೆ.
ಬಹುನಿರೀಕ್ಷಿತ 18ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.22ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ.
ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗಾಗಿ ಕಿವೀಸ್ vs ದಕ್ಷಿಣ ಆಫ್ರಿಕಾ ಫೈಟ್!
ಐಪಿಎಲ್: ಡೆಲ್ಲಿ ತಂಡಕ್ಕೆ ಪೀಟರ್‌ಸನ್ ಮೆಂಟರ್
ನವದೆಹಲಿ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಅವರು ಮಾರ್ಚ್ 22ರಿಂದ ಆರಂಭಗೊಳ್ಳಲಿರುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2009ರಿಂದ 2016ರ ವರೆಗೂ ಪೀಟರ್‌ಸನ್ ಐಪಿಎಲ್‌ನಲ್ಲಿ ಆಡಿದ್ದರು. 2014ರಲ್ಲಿ ಡೆಲ್ಲಿ ತಂಡವನ್ನು ಪೀಟರ್‌ಸನ್ ಮುನ್ನಡೆಸಿದ್ದರು.
ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪೀಟರ್‌ಸನ್ ಅವರ ಮೊದಲ ಕೋಚ್ ಹುದ್ದೆಯಾಗಿದ್ದು, ಅವರು 2009ರಿಂದ 2016ರವರೆಗೆ ಐಪಿಎಲ್‌ನಲ್ಲಿ ಆಟಗಾರನಾಗಿದ್ದರು. ಅಲ್ಲದೇ 2014ರಲ್ಲಿ ತಾವು ನಾಯಕತ್ವ ವಹಿಸಿದ್ದ ತಂಡಕ್ಕೆ ಮೆಂಟರ್ ಆಗಿ ಮರಳಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿರುವ ಪೀಟರ್‌ಸನ್, ‘ಡೆಲ್ಲಿ ಮನೆಗೆ ಮರಳಲು ತುಂಬಾ ಉತ್ಸುಕನಾಗಿದ್ದೇನೆ. ಇಲ್ಲಿ ಅತ್ಯಂತ ಪ್ರೀತಿಯ ನೆನಪುಗಳಿವೆ. ನಾನು ಈ ನಗರವನ್ನು ಪ್ರೀತಿಸುತ್ತೇನೆ. ಅಭಿಮಾನಿಗಳನ್ನು ಪ್ರೀತಿಸುತ್ತೇನೆ. 2025ರಲ್ಲಿ ನಮ್ಮ ಪ್ರಾಂಚೈಸಿ ಪ್ರಶಸ್ತಿಯನ್ನು ಗೆಲ್ಲಲ್ಲು ನಾನು ಎಲ್ಲವನ್ನೂ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.