
ಲಾಹೋರ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಗುರುತಿಸಿಕೊಳ್ಳುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಈಗ ಮತ್ತೆ ಸುದ್ದಿಯಲ್ಲಿದೆ. ಲೀಗ್‌ನಲ್ಲಿ ಚೆಂಡು ವಿರೂಪದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಲಾಹೋರ್ ಖಲಂದರ್ಸ್ ತಂಡ ಮತ್ತು ಅದರ ಹಿರಿಯ ಆಟಗಾರ ಫಖರ್ ಜಮಾನ್ ಸಂಕಷ್ಟದಲ್ಲಿದ್ದಾರೆ.
ಭಾನುವಾರ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಕರಾಚಿ ಗೆಲುವಿಗೆ ಕೊನೆ ಓವರ್‌ನಲ್ಲಿ 14 ರನ್ ಬೇಕಿತ್ತು. ಈ ವೇಳೆ ಲಾಹೋರ್ ನಾಯಕ ಶಾಹೀನ್ ಅಫ್ರಿದಿ, ಜಮಾನ್ ಮತ್ತು ಹ್ಯಾರಿಸ್ ರೌಫ್ ಚರ್ಚೆ ನಡೆಸುತ್ತಿದ್ದರು. ಆಗ ಜಮಾನ್ ಚೆಂಡನ್ನು ಕೈಯಿಂದ ಬಲವಾಗಿ ಒತ್ತುವುದು ಕಂಡುಬಂದಿದೆ. ಕೂಡಲೇ ಅಂಪೈರ್ ಫೈಸಲ್ ಅಫ್ರಿದಿ ಚೆಂಡನ್ನು ಪಡೆದು, ಮತ್ತೋರ್ವ ಅಂಪೈರ್ ಶರಫುದ್ದೌಲಾ ಜೊತೆಗೂಡಿ ಪರಿಶೀಲನೆ ನಡೆಸಿದ್ದಾರೆ. ಆಗ ಚೆಂಡು ವಿರೂಪಗೊಳಿಸಿದ್ದು ಅವರ ಗಮನಕ್ಕೆ ಬಂದಿದೆ. ಹೀಗಾಗಿ ಕರಾಚಿಗೆ 5 ರನ್ ಪೆನಾಲ್ಟಿ ನೀಡಿ, ಚೆಂಡನ್ನು ಬದಲಿಸಿದ್ದಾರೆ. 14ರ ಬದಲು 9 ರನ್ ಗುರಿ ಪಡೆದ ಕರಾಚಿ 3 ಎಸೆತಗಳಲ್ಲೇ ಜಯಗಳಿಸಿತು.
ಪಂದ್ಯದ ಬಳಿಕ ಜಮಾನ್‌ರನ್ನು ವಿಚಾರಣೆ ನಡೆಸಲಾಗಿದ್ದು, ತಮ್ಮ ಮೇಲಿನ ಆರೋಪ ನಿರಾಕರಿಸಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಮತ್ತೊಂದು ವಿಚಾರಣೆ ನಡೆಯಲಿದ್ದು, ಚೆಂಡು ವಿರೂಪ ಸಾಬೀತಾದರೆ ಜಮಾನ್ ಹಾಗೂ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಪಾಕ್ ಲೀಗ್‌ನ ಲಾಹೋರ್ ತಂಡದ ಆಟಗಾರರಾದ ಶಾಹೀನ್ ಅಫ್ರಿದಿ ಹಾಗೂ ಸಿಕಂದರ್ ರಝಾ ವಿರುದ್ಧ ಭದ್ರತಾ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಶನಿವಾರ ತಮ್ಮ ಸಂಬಂಧಿಕ 4 ಮಂದಿಯನ್ನು ಭೇಟಿಯಾಗಲು ರಝಾ ಅವರು ಪಿಸಿಬಿ ಬಳಿ ಅನುಮತಿ ಕೇಳಿದ್ದಾರೆ. ಆದರೆ 2 ಬಾರಿಯೂ ಅವರ ಮನವಿ ತಿರಸ್ಕರಿಸಲಾಗಿದೆ. ಇದರ ಹೊರತಾಗಿಯೂ ನಾಲ್ವರನ್ನು ತಮ್ಮ ಹೋಟೆಲ್ ಕೋಣೆಗೆ ರಝಾ ಕರೆಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಪಿಸಿಬಿ, ಭದ್ರತಾ ಸಿಬ್ಬಂದಿ ಎಚ್ಚರಿಕೆ ಹೊರತಾಗಿಯೂ ಹೊರಗಿನವರನ್ನು ಆಟಗಾರರಿದ್ದ ಹೋಟೆಲ್‌ಗೆ ಕರೆಸಿದ್ದಕ್ಕೆ ಶಾಹೀನ್, ರಝಾ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ.
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ವಿರುದ್ಧ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕ್ರಿಕೆಟಿಗ ನಸೀಮ್ ಶಾಗೆ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಬರೋಬ್ಬರಿ 2 ಕೋಟಿ ರು. ದಂಡ ವಿಧಿಸಿದೆ. ಪಿಎಸ್‌ಎಲ್‌ನ ಉದ್ಘಾಟನಾ ಪಂದ್ಯಕ್ಕೆ ಆಗಮಿಸಿದ್ದ ಮರ್ಯಮ್‌ಗೆ ನೀಡಲಾಗಿದ್ದ ವಿಶೇಷ ಆತಿಥ್ಯವನ್ನು ಶಾ ಪ್ರಶ್ನಿಸಿದ್ದರು. ಅವರನ್ನು ಲಾರ್ಡ್ಸ್‌ನ ರಾಣಿ ರೀತಿ ಉಪಚರಿಸಿದ್ದೇಕೆ ಎಂದು ಟ್ವೀಟ್ ಮಾಡಿ, ಬಳಿಕ ಅಳಿಸಿ ಹಾಕಿದ್ದರು. ಈ ಮೂಲಕ ಶಾ ಪಿಸಿಬಿ ಕೇಂದ್ರೀಯ ಗುತ್ತಿಗೆ ನಿಯಮ ಉಲ್ಲಂಘಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾ.27ರಂದು ಶಾಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.