
ಗುವಾಹಟಿ: ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಈ ಬಾರಿ ಐಪಿಎಲ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ಸ್ 8 ವಿಕೆಟ್‌ನಿಂದ ಜಯಭೇರಿ ಬಾರಿಸಿತು. ಮಾರಕ ಬೌಲಿಂಗ್ ದಾಳಿ ಬಳಿಕ ವೈಭವ್ ಸೂರ್ಯವಂಶಿಯ ಅಮೋಘ ಬ್ಯಾಟಿಂಗ್‌ನಿಂದಾಗಿ ರಾಯಲ್ಸ್ ತನ್ನ ಮೊದಲ ಪಂದ್ಯದಲ್ಲೇ ನೆಟ್ ರನ್‌ರೇಟ್ ಭರ್ಜರಿಯಾಗಿ ಏರಿಸಿತು.
ರಾಜಸ್ಥಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಸರಿಯಾಗಿಯೇ ಇತ್ತು. ಚೆನ್ನೈಯನ್ನು ಸುಲಭದಲ್ಲಿ ಕಟ್ಟಿಹಾಕುವ ತನ್ನ ಯೋಜನೆ ಆರಂಭದಲ್ಲೇ ಫಲಕೊಟ್ಟಿತು. ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ 19.4 ಓವರ್‌ಗಳಲ್ಲಿ 127 ರನ್‌ಗೆ ಸರ್ವಪತನ ಕಂಡಿತು. ಸುಲಭ ಗುರಿ ಪಡೆದ ರಾಜಸ್ಥಾನ ಮೊದಲ ಓವರ್‌ನಲ್ಲೇ ಅಬ್ಬರಿಸಲು ಶುರುವಿಟ್ಟಿತು. ತಂಡ ಕೇವಲ 12.1 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.
ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳದೇ ಇದ್ದಿದ್ದೇ ಚೆನ್ನೈನ ಸಾಧನೆ. ಬಳಿಕ ಜೋಫ್ರಾ ಆರ್ಚರ್, ನಂಡ್ರೆ ಬರ್ಗರ್ ದಾಳಿಗೆ ಚೆನ್ನೈ ಅಕ್ಷರಶಃ ತತ್ತರಿಸಿತು. 2ನೇ ಓವರ್‌ನಲ್ಲೇ ಸಂಜು ಸ್ಯಾಮ್ಸನ್(6) ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಋತುರಾಜ್ 9, ಆಯುಶ್ ಮ್ಹಾತ್ರೆ 0, ಮ್ಯಾಥ್ಯೂ ಶಾರ್ಟ್ 2 ರನ್‌ಗೆ ಔಟಾದರು. ಆರಂಭಿಕ ನಾಲ್ವರಲ್ಲಿ ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಸರ್ಫರಾಜ್ ಖಾನ್(17), ಕಾರ್ತಿಕ್ ಶರ್ಮಾ(18) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯಲ್ಲಿ ಜೆಮೀ ಓವರ್ಟನ್ 36 ಎಸೆತಕ್ಕೆ 43 ರನ್ ಗಳಿಸಿ ಚೆನ್ನೈನ ಮಾನ ಉಳಿಸಿದರು.
ಮೊದಲ ಓವರ್‌ನಲ್ಲೇ 18 ರನ್ ದೋಚಿದ ರಾಜಸ್ಥಾನ ಬಳಿಕ ಹಿಂದಿರುಗಿ ನೋಡಲಿಲ್ಲ. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ 15 ವರ್ಷದ ವೈಭವ್ ಕೇವಲ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಅವರು 17 ಎಸೆತಕ್ಕೆ 52 ರನ್ ಗಳಿಸಿ 7ನೇ ಓವರ್‌ನಲ್ಲಿ ಔಟಾದರು. ಬಳಿಕ ಯಶಸ್ವಿ ಜೈಸ್ವಾಲ್(ಔಟಾಗದೆ 38), ಧ್ರುವ್ ಜುರೆಲ್(18) ತಂಡವನ್ನು ಗೆಲುವಿನ ದಡ ಸೇರಿಸಿದರು.
ಸ್ಕೋರ್: ಸಿಎಸ್‌ಕೆ 19.4 ಓವರ್‌ನಲ್ಲಿ 127/10 (ಓವರ್ಟನ್ 43, ಕಾರ್ತಿಕ್ 18, ಆರ್ಚರ್ 2-19, ಜಡೇಜಾ 2-18, ಬರ್ಗರ್ 2-26), ರಾಜಸ್ಥಾನ 12.1 ಓವರ್‌ಗಳಲ್ಲಿ 128/2 (ವೈಭವ್ 52, ಜೈಸ್ವಾಲ್ ಔಟಾಗದೆ 38, ಅನ್ಶುಲ್ 2-27).
ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲೇ 50 ರನ್ ಪೂರೈಸಿದರು. ಇದು ಐಪಿಎಲ್‌ನಲ್ಲಿ ಜಂಟಿ 3ನೇ ಅತಿವೇಗದ ಅರ್ಧಶತಕ. 2023ರಲ್ಲಿ ಕೋಲ್ಕತಾ ವಿರುದ್ಧ ರಾಜಸ್ಥಾನದ ಯಶಸ್ವಿ ಜೈಸ್ವಾಲ್ 13 ಎಸೆತಕ್ಕೆ 50 ರನ್ ಗಳಿಸಿದ್ದು ದಾಖಲೆ. ಕೆ.ಎಲ್.ರಾಹುಲ್, ಪ್ಯಾಟ್ ಕಮಿನ್ಸ್, ಶೆಫರ್ಡ್ ತಲಾ 14 ಎಸೆತ, ಯೂಸುಫ್ ಪಠಾಣ್, ನರೈನ್, ಪೂರನ್, ಜೇಕ್ ಫ್ರೇಸರ್(2 ಬಾರಿ), ವೈಭವ್ ತಲಾ 15 ಎಸೆತಕ್ಕೆ ಅರ್ಧಶತಕ ಸಿಡಿಸಿದ್ದಾರೆ.
ಚೆನ್ನೈನ ಬ್ಯಾಟಿಂಗ್ ವೈಫಲ್ಯವೇ ಈ ಪಂದ್ಯದ ಸೋಲಿಗೆ ಪ್ರಮುಖ ಕಾರಣ. ಅಗ್ರ-4 ಬ್ಯಾಟರ್‌ಗಳನ್ನು ಪವರ್-ಪ್ಲೇ ಓವರ್‌ಗಳಲ್ಲೇ ಕಳೆದುಕೊಂಡಿದ್ದು ತಂಡಕ್ಕೆ ಮುಳುವಾಯಿತು. ಯುವ ಆಟಗಾರರನ್ನೇ ಒಳಗೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ವೈಭವ್‌ರ ಆರ್ಭಟ ಸಿಎಸ್‌ಕೆಗೆ ಗಾಯದ ಮೇಲೆ ಬರೆ ಎಳೆದಂತಾಯಿತು.
43 ರನ್: ಓವರ್ಟನ್ ಗಳಿಸಿದ 43 ರನ್, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ರನ್. 2024ರಲ್ಲಿ ಡೆಲ್ಲಿ ವಿರುದ್ಧ ಧೋನಿ 37 ರನ್ ಸಿಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.