ಧೋನಿಯಿಲ್ಲದೇ ದಿಕ್ಕಾಪಾಲಾದ ಚೆನ್ನೈ ಸೂಪರ್ ಕಿಂಗ್ಸ್! ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಂಡಿಯೂರಿದ ಸಿಎಸ್‌ಕೆ

Published : Mar 30, 2026, 10:49 PM IST
Vaibhav Suryavanshi

ಸಾರಾಂಶ

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಗುವಾಹಟಿ: ಮಹೇಂದ್ರ ಸಿಂಗ್ ಧೋನಿಯಿಲ್ಲದೇ ಹೋದರೇ ಚೆನ್ನೈ ಸೂಪರ್ ಕಿಂಗ್ಸ್ ನಾವಿಕನಿಲ್ಲದ ದೋಣಿಯಂತಾಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಧೋನಿಯಿಲ್ಲದೇ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಾನಾಡಿದ ಮೊದಲ ಪಂದ್ಯದಲ್ಲೇ 08 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಬಾರಿಸಿದ ಸ್ಪೋಟಕ ಅರ್ಧಶತಕದಾಟಕ್ಕೆ ಸಿಎಸ್‌ಕೆ ತಂಡ ಮಂಡಿಯೂರಿದೆ. ಈ ಗೆಲುವಿನೊಂದಿಗೆ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ಗೆ ಸಿಎಸ್‌ಕೆ ತಬ್ಬಿಬ್ಬು

ಇಲ್ಲಿನ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ 128 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಸ್ಪೋಟಕ ಆರಂಭ ಪಡೆಯಿತು. ರಾಜಸ್ಥಾನ ರಾಯಲ್ಸ್ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ಪವರ್‌ಪ್ಲೇನಲ್ಲೇ 74 ರನ್‌ಗಳ ಜತೆಯಾಟವಾಡುವ ಮೂಲಕ ರಾಯಲ್ಸ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ವೃತ್ತಿಜೀವನದ ರೆಡ್‌ ಹಾಟ್ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೊದಲ ಓವರ್‌ನಲ್ಲೇ ಸಿಕ್ಕ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡು ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಎರಡನೇ ಅತಿವೇಗದ ಅರ್ಧಶತಕ ಸಿಡಿಸಿ ಮಿಂಚಿದರು. 2023ರಲ್ಲಿ ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅಂತಿಮವಾಗಿ ಸೂರ್ಯವಂಶಿ ಕೇವಲ 17 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಸಿಡಿಸಿ ಅನ್ಸೂಲ್ ಕಂಬೋಜ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 38 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಧ್ರುವ್ ಜುರೆಲ್ 18 ಹಾಗೂ ನಾಯಕ ರಿಯಾನ್ ಪರಾಗ್ ಅಜೇಯ 14 ರನ್ ಬಾರಿಸಿದರು.

ಸಿಎಸ್‌ಕೆ ಬ್ಯಾಟರ್‌ಗಳ ದಯನೀಯ ವೈಫಲ್ಯ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆರಂಭಿಕರಾದ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಚೆನ್ನೈ ಪರ ಮೊದಲ ಪಂದ್ಯವನ್ನಾಡಿದ ಸಂಜು ಸ್ಯಾಮ್ಸನ್ ತಲಾ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅಂಡರ್-19 ತಂಡದ ನಾಯಕ ಆಯುಷ್ ಮಾಥ್ರೆ ಖಾತೆ ತೆರೆಯುವ ಮುನ್ನವೇ ನಂದ್ರೆ ಬರ್ಗರ್‌ಗೆ ಎರಡನೇ ಬಲಿಯಾದರು. ಇನ್ನು ಮ್ಯಾಥ್ಯೂ ಶಾರ್ಟ್ ಬ್ಯಾಟಿಂಗ್ ಕೇವಲ 2 ರನ್‌ಗೆ ಸೀಮಿತವಾಯಿತು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್(17) ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದರೂ, ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 14 ಕೋಟಿ ವೀರ 19 ವರ್ಷದ ಕಾರ್ತಿಕ್ ಶರ್ಮಾ ಬ್ಯಾಟಿಂಗ್ 18 ರನ್‌ಗೆ ಸೀಮಿತವಾಯಿತು. ಶಿವಂ ದುಬೆ ಒಂದು ಸಿಕ್ಸರ್ ಸಿಡಿಸಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ವಾಪಾಸ್ಸಾದರು.

ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಜೇಮಿ ಓವರ್‌ಟನ್ ಕೇವಲ 36 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 43 ರನ್ ಸಿಡಿಸಿ ಕೊನೆಯವರಾಗಿ ರನೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಓವರ್‌ಟನ್ ಕೂಡಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸದಿದ್ದರೇ ಚೆನ್ನೈ ತಂಡವು ನೂರು ರನ್‌ಗಳೊಳಗೆ ಆಲೌಟ್ ಆಗುವ ಸಾಧ್ಯತೆಯಿತ್ತು.

ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಂದ್ರೆ ಬರ್ಗರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಬ್ರಿಜೇಶ್ ಶರ್ಮಾ, ಸಂದೀಪ್ ಶರ್ಮಾ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ