IPL 2022: ರಸೆಲ್ ಹೋರಾಟ ವ್ಯರ್ಥ, ಗುಜರಾತ್‌ಗೆ ರೋಚಕ ಜಯ

By Naveen Kodase  |  First Published Apr 23, 2022, 7:36 PM IST

* ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ರೋಚಕ ಗೆಲುವು ದಾಖಲಿಸಿದ ಗುಜರಾತ್ ಟೈಟಾನ್ಸ್‌

* ಆಂಡ್ರೆ ರಸೆಲ್ ಆಲ್ರೌಂಡ್ ಹೋರಾಟ ವ್ಯರ್ಥ

* ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡ ಗುಜರಾತ್ ಟೈಟಾನ್ಸ್


ಮುಂಬೈ(ಏ.23): ಸ್ಟಾರ್ ಕ್ರಿಕೆಟಿಗ ಆಂಡ್ರೆ ರಸೆಲ್ ಅವರ ಅಮೋಘ ಆಲ್ರೌಂಡ್ ಪ್ರದರ್ಶನ ವ್ಯರ್ಥವಾಗಿದೆ. ಗುಜರಾತ್ ಟೈಟಾನ್ಸ್ ನೀಡಿದ್ದ 157 ರನ್‌ಗಳ ಗುರಿ ತಲುಪುವಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ವಿಫಲವಾಗುವ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಕಂಡಿದೆ. ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದ ರಸೆಲ್ ಬ್ಯಾಟಿಂಗ್‌ನಲ್ಲಿ ಸ್ಪೋಟಕ 48 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಗುಜರಾತ್ ಟೈಟಾನ್ಸ್ ನೀಡಿದ್ದ 157 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನಲ್ಲೇ ಸ್ಯಾಮ್ ಬಿಲ್ಲಿಂಗ್ಸ್‌ ಕೇವಲ 4 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಸುನಿಲ್ ನರೈನ್ 5 ರನ್ ಬಾರಿಸಿ ಶಮಿಗೆ ಎರಡನೇ ಬಲಿಯಾದರು. ಎಡಗೈ ಬ್ಯಾಟರ್‌ ನಿತೀಶ್ ರಾಣಾ ಕೇವಲ 2 ರನ್‌ ಬಾರಿಸಿ ಲಾಕಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದ್ದ ನಾಯಕ ಶ್ರೇಯಸ್ ಅಯ್ಯರ್ ಕೇವಲ 12 ರನ್‌ ಬಾರಿಸಿ ವಿಕೆಟ್ ಕೈಚೆಲ್ಲಿದರು.

Tap to resize

Latest Videos

ಆಸರೆಯಾದ ರಿಂಕು ಸಿಂಗ್: ಒಂದು ಹಂತದಲ್ಲಿ ಕೇವಲ 34 ರನ್‌ಗಳಿಗೆ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ 5ನೇ ವಿಕೆಟ್‌ಗೆ ರಿಂಕು ಸಿಂಗ್ ಹಾಗೂ ವೆಂಕಟೇಶ್ ಅಯ್ಯರ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. 5 ನೇ ವಿಕೆಟ್‌ಗೆ ಈ ಜೋಡಿ 45 ರನ್‌ಗಳ ಜತೆಯಾಟ ನಿಭಾಯಿಸಿತು. ರಿಂಕು ಸಿಂಗ್ 28 ಎಸೆತಗಳನ್ನು ಎದುರಿಸಿ 35 ರನ್ ಬಾರಿಸಿದರೆ, ವೆಂಕಟೇಶ್ ಅಯ್ಯರ್ 17 ಎಸೆತಗಳಲ್ಲಿ 17 ರನ್ ಬಾರಿಸಿ ಅಭಿನವ್ ಮನೋಹರ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. 

ರಸೆಲ್ ಬಿರುಗಾಳಿ: ವೆಂಕಟೇಶ್ ಅಯ್ಯರ್ ವಿಕೆಟ್ ಪತನದ ಬಳಿಕ ಆಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಯಶ್ ದಯಾಳ್ ಬೌಲಿಂಗ್‌ನಲ್ಲಿ ಆರಂಭದಲ್ಲೇ ಸಿಕ್ಕ ಜೀವದಾನವನ್ನು ಭರಪೂರವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಸೆಲ್, ಚೆಂಡನ್ನು ಮೈದಾನದ ಮೂಲೆ ಮೂಲೆ ಮೂಲೆಗೆ ಅಟ್ಟುವಲ್ಲಿ ಯಶಸ್ವಿಯಾದರು. ರಸೆಲ್ ಕೇವಲ 25 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ 48 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ 15 ರನ್ ಬಾರಿಸಿ ಅಜೇಯರಾಗುಳಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.

IPL 2022: ಹಾರ್ದಿಕ್‌ ಪಾಂಡ್ಯ ಫಿಫ್ಟಿ, ಕೆಕೆಆರ್‌ಗೆ ಸ್ಪರ್ಧಾತ್ಮಕ ಗುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್‌ ತಂಡದ ಆರಂಭ ಕೂಡಾ ಅಷ್ಟೇನು ಉತ್ತಮವಾಗಿರಲಿಲ್ಲ. ಶುಭ್‌ಮನ್ ಗಿಲ್ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ವೃದ್ದಿಮಾನ್ ಸಾಹ ಹಾಗೂ ಹಾರ್ದಿಕ್ ಪಾಂಡ್ಯ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಾಹ 25 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 67 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್ ಮಿಲ್ಲರ್(27) ಹಾಗೂ ರಾಹುಲ್ ತೆವಾಟಿಯಾ(17) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

click me!