
ಅಹಮದಾಬದ್(ಮೇ.30): ಕೋವಿಡ್ ಭೀತಿಯ ನಡುವೆಯೂ ಭಾರತದಲ್ಲೇ 15ನೇ ಆವೃತ್ತಿ ಐಪಿಎಲ್ (Indian Premier League 2022) ಆಯೋಜಿಸಲು ನಿರ್ಧರಿಸಿದ್ದ ಬಿಸಿಸಿಐ (BCCI) ಅದರಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಪ್ರತೀ ಬಾರಿ ವಿವಿಧ ನಗರಗಳಲ್ಲಿ ಆಯೋಜನೆಗೊಳ್ಳುವ ಐಪಿಎಲ್ ಟೂರ್ನಿ ಲೀಗ್ ಹಂತವನ್ನು ಈ ಬಾರಿ ಕೇವಲ ಎರಡು ನಗರಗಳಲ್ಲಿ ಆಯೋಜಿಸಿ ಮಂಡಳಿಯು ಸೈ ಎನಿಸಿಕೊಂಡಿದೆ. ಲೀಗ್ ಹಂತದ ಪಂದ್ಯಗಳು ಸೀಮಿತ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಮುಂಬೈನ 3 ಮತ್ತು ಪುಣೆಯ ಒಂದು ಕ್ರೀಡಾಂಗಣದಲ್ಲಿ ನಡೆದವು. ಆರಂಭದಲ್ಲಿ ಶೇ.25ರಷ್ಟು ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಕೋವಿಡ್ ಪ್ರಕರಣಗಳು (Covid 19 Threat) ಕಡಿಮೆಯಾದ ಬಳಿಕ ಶೇ.50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಾಯಿತು.
ಪ್ಲೇ-ಆಫ್ ಪಂದ್ಯಗಳಿಗೆ ಕೋಲ್ಕತಾ ಹಾಗೂ ಅಹಮದಾಬಾದ್ ಆತಿಥ್ಯ ವಹಿಸಿದವು. ಎರಡೂ ಕಡೆಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಕ್ಕಿತ್ತು. ಫೈನಲ್ ಸೇರಿ ನಾಲ್ಕೂ ಪಂದ್ಯಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆಯಿತು. ಟೂರ್ನಿಯ ಮಧ್ಯದಲ್ಲಿ ಆಟಗಾರರು, ಸಿಬ್ಬಂದಿಗೆ ಕೋವಿಡ್ ಕಾಣಿಸಿಕೊಂಡರೂ ಯಾವುದೇ ಪಂದ್ಯಕ್ಕೆ ಅಡ್ಡಿಯಾಗಲಿಲ್ಲ. ಎಲಿಮಿನೇಟರ್ ಪಂದ್ಯವನು ಹೊರತುಪಡಿಸಿ ಉಳಿದ್ಯಾವ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿಲ್ಲ. ಬಿಸಿಸಿಐ ಪರಿಷ್ಕೃತ ನಿಯಮ ಪ್ರಕಟಿಸಿದ ಕಾರಣ, ಎಲಿಮಿನೇಟರ್ ಪಂದ್ಯದಲ್ಲೂ ಓವರ್ ಕಡಿತಗೊಳ್ಳಲಿಲ್ಲ.
ಪಂದ್ಯ ವೀಕ್ಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಗುಜರಾತ್ ಹಾಗೂ ರಾಜಸ್ಥಾನ (Gujarat Titans vs Rajasthan Royals) ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ (Amit Shah) ಅವರು ಸಾಕ್ಷಿಯಾದರು. ಗುಜರಾತ್‌ನವರೇ ಆಗಿರುವ ಶಾ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಫೋಟೋಗಳು ವೈರಲ್ ಆಗಿವೆ. ಈ ವೇಳೆ ಅವರ ಪತ್ನಿಯೂ ಜೊತೆಗಿದ್ದರು.
IPL 2022 ರಾಜಸ್ಥಾನ ಮಣಿಸಿದ ಗುಜರಾತ್ ಟೈಟಾನ್ಸ್‌ಗೆ ಚಾಂಪಿಯನ್ ಕಿರೀಟ!
ಎಲ್ಲರ ಕಣ್ಮನ ಸೆಳೆದ ರಾಜ್ಯದ ಪೂಜಾ ಕುಣಿತ, ಡೊಳ್ಳು ಕುಣಿತ!
ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಕಲಾ ತಂಡಗಳು ವಿಶೇಷ ಮೆರುಗು ನೀಡಿ ಗಮನ ಸೆಳೆದವು. ರಾಜ್ಯದಿಂದ ಎರಡು ಕಲಾ ತಂಡಗಳು ಅಹಮದಾಬಾದ್‌ಗೆ ತೆರಳಿದ್ದವು. ಮಂಡ್ಯದ ಕಲಾವಿದರಾದ ಚಿಕ್ಕರಸಿನಕೆರೆ ಚಿಕ್ಕ ಬೋರಯ್ಯ, ಸಂತೆ ಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡ ಪೂಜಾ ಕುಣಿತ ಪ್ರದರ್ಶನ ನೀಡಿದರು. ಇನ್ನು ಶಿವಮೊಗ್ಗದ ರವಿ ಅವರ ನೇತೃತ್ವದ ಡೊಳ್ಳುಕುಣಿತ ಕಲಾವಿದರ ತಂಡ ಆಕರ್ಷಕ ಪ್ರದರ್ಶನದ ಮೂಲಕ ನೋಡುಗರ ಕಣ್ಮನ ಸೆಳೆಯಿತು.
ಅತಿದೊಡ್ಡ ಕ್ರಿಕೆಟ್ ಜೆರ್ಸಿ ಪ್ರದರ್ಶಿಸಿ ಗಿನ್ನಿಸ್ ದಾಖಲೆ!
ಸಮಾರೋಪ ಸಮಾರಂಭದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣದ (Narendra Modi Stadium) ಮೈದಾನದಲ್ಲಿ 66 ಮೀಟರ್(216.5 ಅಡಿ) ಉದ್ದ ಮತ್ತು 42 ಮೀ.(137.7 ಅಡಿ) ಅಗಳದ ಕ್ರಿಕೆಟ್ ಜೆರ್ಸಿಯನ್ನು ಪ್ರದರ್ಶಿಸಲಾಯಿತು. ಇದು ಅತಿದೊಡ್ಡ ಕ್ರಿಕೆಟ್ ಜೆರ್ಸಿ ಎನ್ನುವ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಯಿತು. ಗಿನ್ನಿಸ್ ದಾಖಲೆ ಪ್ರಮಾಣ ಪತ್ರವನ್ನು ಸೌರವ್ ಗಂಗೂಲಿ (Sourav Ganguly), ಜಯ್ ಶಾ (Jay Shah) ಮತ್ತು ಬ್ರಿಜೇಶ್ ಪಟೇಲ್ ಪಡೆದರು.
ಕ್ರೀಡಾಂಗಣದಲ್ಲಿ 1.25 ಲಕ್ಷ ಪ್ರೇಕ್ಷಕರು: ಹೊಸ ದಾಖಲೆ!
ಫೈನಲ್ ಪಂದ್ಯದ ವೀಕ್ಷಣೆಗೆ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1.25 ಲಕ್ಷ ಮಂದಿ ನೆರೆದಿದ್ದರು. ಅತಿಹೆಚ್ಚು ಜನರಿಂದ ಕ್ರೀಡಾಂಗಣದಲ್ಲಿ ವೀಕ್ಷಣೆಗೊಂಡ ಕ್ರಿಕೆಟ್ ಪಂದ್ಯ ಎನ್ನುವ ದಾಖಲೆಗೆ 15ನೇ ಆವೃತ್ತಿಯ ಐಪಿಎಲ್ ಫೈನಲ್ ಪಾತ್ರವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.