
ಮುದ್ದು ಮುಖದ, ಕ್ಯೂಟ್ ಆಗಿ ನಗೋ ಚಿಕ್ಕ ಹುಡುಗಿ ಅನಿಕಾ ಸುರೇಂದ್ರನ್. ಈಕೆಯನ್ನು ಒಂದಲ್ಲ ಒಂದು ಸಲ ನೋಡೇ ನೋಡಿರ್ತೀರಿ. ತಲಾ ಅಜಿತ್ ಜೊತೆ 'ಎನ್ನೈ ಅರಿಂದಾಲ್' ಸಿನಿಮಾದಲ್ಲಿ ಪುಟಾಣಿ ಬಾಲ ನಟಿಯಾಗಿ ಕಾಣಿಸಿಕೊಂಡು ತಲಾ ಅಜಿತ್ ಫ್ಯಾನ್ ಗಳಿಗೂ ಅಚ್ಚುಮೆಚ್ಚಾಗಿದ್ದಳು. ಅಜಿತ್ ಅದ್ರಲ್ಲಿ ಖಡಕ್ ಪೊಲೀಸ್ ಆಫೀಸರ್. ಈ ಪುಟಾಣಿ ಅಜಿತ್ ಗೆಳತಿ ಹೇಮಾನಿಕಾ ಮಗಳು. ಈ ಹೇಮಾನಿಕಾ ಪಾತ್ರ ಮಾಡಿದ್ದು ತ್ರಿಶಾ. ಒಬ್ಬ ಮಗಳ ತಾಯಿಯಾದ ಹೇಮಾನಿಕಾಳನ್ನು ಮದ್ವೆಯಾಗಿ ಈ ಪುಟ್ಟ ಹುಡುಗಿಗೆ ತಂದೆಯಾಗಬೇಕು ಅನ್ನುವಷ್ಟರಲ್ಲಿ ಹೇಮಾನಿಕಾ ಕೊಲೆಯಾಗುತ್ತೆ. ತಬ್ಬಲಿ ಮಗುವಿಗೆ ಅಜಿತ್ ತಂದೆಯಾಗ್ತಾರೆ. ತನ್ನದಲ್ಲದ ಕೂಸಿಗೆ ರಿಯಲ್ ಅಪ್ಪನಿಗಿಂತ ಹೆಚ್ಚು ಪ್ರೀತಿ ಕೊಡುವ ಅಜಿತ್, ಆತನನ್ನೇ ತಂದೆಗಿಂತ ಹೆಚ್ಚು ಇಷ್ಟಪಡುವ ಮಗಳು ಇಶಾ ಪಾತ್ರ ಎಲ್ಲರ ಮನಗೆದ್ದಿತ್ತು.
ಕಳೆದ ವರ್ಷ ಬಂದ ವಿಶ್ವಾಸಮ್ ನಲ್ಲೂ ಈಕೆ ತಲಾ ಅಜಿತ್ ಮಗಳು. ಶ್ವೇತಾ ಅಂತ ಆ ಪಾತ್ರದ ಹೆಸರು. ಅಜಿತ್ ಮತ್ತು ಈಕೆಯ ಕಾಂಬಿನೇಶನ್ ಭಲೇ ಹಿಟ್ ಆಯ್ತು. ನಯನತಾರಾ ಇದರಲ್ಲಿ ಅಜಿತ್ ಪತ್ನಿ ಪಾತ್ರ ಮಾಡಿದ್ದರು. ಆದರೂ ಗಮನ ಸೆಳೆದದ್ದು ಅಪ್ಪ ಮಗಳ ನಟನೆ. ಹೈಸ್ಕೂಲ್ ಓದೋ ಮಗಳಿಗೆ ಬಾಡಿ ಗಾರ್ಡ್ ಆಗಿ ಬರೋ ಅಜಿತ್, ಹೇಗೆ ಆಕೆಗೆ ಅಪ್ಪನ ಅಕ್ಕರೆ, ಪ್ರೀತಿ, ಗೆಳೆತನ, ಸುರಕ್ಷತಾ ಭಾವವನ್ನು ಧಾರೆ ಎರೆಯುತ್ತಾರೆ ಅನ್ನೋದು ಇದರ ಕತೆ.
ಜಯಲಲಿತಾ ಬದುಕಿನ ಬಗೆಗಿನ ವೆಬ್ ಸೀರೀಸ್ 'ಕ್ವೀನ್' ನಲ್ಲಿ ಸೀರೀಸ್ ನಲ್ಲಿ ಜಯಲಲಿತಾ ಬಾಲ್ಯಕಾಲದ ಪಾತ್ರವನ್ನು ಈಕೆ ಮಾಡಿದ್ರು. ದೊಡ್ಡವರಾದ ಮೇಲಿನ ಜಯಲಲಿತಾ ಪಾತ್ರಕ್ಕೆ ರಮ್ಯಾಕೃಷ್ಣ ಬಣ್ಣ ಹಚ್ಚಿದ್ರು. ಇದರ ಜೊತೆಗೆ 'ನಾನುಮ್ ರೌಡಿದಾನ್', 'ಮಿರುಥನ್' ಮೊದಲಾದ ಸೂಪರ್ ಹಿಟ್ ಮೂವೀಸ್ ಗಳಲ್ಲೂ ಈಕೆ ಅಭಿನಯಿಸಿದ್ರು.
ಹೀಗೆಲ್ಲ ಮಗಳ ಪಾತ್ರದ ಮೂಲಕ ಜನಮನ ಗೆದ್ದಿದ್ದ ಹುಡುಗಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಏಕ್ ದಮ್ ಹೊಸ ಆಸೆ ಹಂಚಿಕೊಂಡಿದ್ದಾಳೆ. ಮಗಳ ಪಾತ್ರ ಮಾಡಿದ್ದು ಸಾಕು, ತಾನಿನ್ನು ಹೀರೋಯಿನ್ ಆಗ್ತೀನಿ ಅನ್ನೋ ಆಸೆಯದು. ಅರೆ, ಕಳೆದ ವರ್ಷ ಅಷ್ಟು ಚಿಕ್ಕ ಹುಡುಗಿ ಆಗಿದ್ದವಳು ಇಷ್ಟು ಬೇಗ ಹೀರೋಯಿನ್ನಾ ಅಂತ ದಂಗಾಗೋ ಸರದಿ ಪ್ರೇಕ್ಷಕರದ್ದು.
ಮಲೆಯಾಳಂ ಸಿನಿಮಾದ ಮೂಲಕ ಹೀರೋಯಿನ್ ಆಗಲು ಹೊರಟಿದ್ದಾಳೆ ಈ ಪೋರಿ. ಇನ್ ಸ್ಟಾಗ್ರಾಮ್ ನಲ್ಲಿ ಸದಾ ಫೋಟೋ ಪೋಸ್ಟ್ ಮಾಡುತ್ತಿದ್ದ ಅನಿಕಾ ಇದೀಗ ತನ್ನ ಡಿಬ್ಯೂ ಮೂವಿಯ ಪಾತ್ರದ ಫೋಟೋವನ್ನೂ ಶೇರ್ ಮಾಡಿದ್ದಾಳೆ. ಅದು ವೈರಲ್ ಆಗಿದೆ. ಪುಟಾಣಿ ಹುಡುಗಿ ಇಷ್ಟ ಬೇಗ ದೊಡ್ಡೋಳಾದ್ಲಾ ಅಂತ ಕಣ್ಣುಜ್ಜಿಕೊಂಡು ಈಕೆಯ ಫೋಟೋ ನೋಡ್ತಿದ್ದಾರೆ ಪ್ರೇಕ್ಷಕರು. ಈಕೆಗೆ ಇನ್ ಸ್ಟಾದಲ್ಲಿ ಲಕ್ಷಾಂತರ ಫ್ಯಾನ್ ಫಾಲೋವಿಂಗ್ ಇದೆ. ಈಕೆಯ ಫೋಟೋಗಳನ್ನು ಜನ ಮುಗಿಬಿದ್ದು ನೋಡ್ತಿದ್ದಾರೆ.
ಅಂದಹಾಗೆ ಮಲೆಯಾಳದ ಈಕೆ ಹೀರೋಯಿನ್ ಆಗಿರುವ ಸಿನಿಮಾದಲ್ಲೂ ಈಕೆಗೆ ಸ್ಕೂಲ್, ಕಾಲೇಜ್ ಹುಡುಗಿ ಪಾತ್ರವಂತೆ. ಹದಿಹರೆಯದ ಪ್ರೀತಿ ಪ್ರಣಯದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಅಲ್ಲಿಗೆ ಅನಿಕಾ ಚೈಲ್ಡ್ ಆರ್ಟಿಸ್ಟ್ ಲೆವೆಲ್ ನಿಂದ ಹೀರೋಯಿನ್ ಲೆವೆಲ್ ಗೆ ಭಡ್ತಿ ಹೊಂದಿದ್ದಾಯ್ತು. ಸಖತ್ ಟ್ಯಾಲೆಂಟೆಡ್ ನಟಿ ಈ ಮೂಲಕ ಇನ್ನಷ್ಟು ಎತ್ತರಕ್ಕೇರಲಿ ಅನ್ನೋ ಹಾರೈಕೆ ಅಭಿಮಾನಿಗಳದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.