'ಖುಷಿ' ಸಿನಿಮಾ ಪ್ರೊಮೋಶನ್‌ಗೆ ಸಮಂತಾ ಬಂದಿಲ್ಲ ಅಂತ ವಿಜಯ ದೇವರಕೊಂಡ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿದ್ದಾರೆ. ಸಮಂತಾ ಹೆಸರಲ್ಲಿ ಇಡ್ಲಿ ಹೊಟೇಲ್ ತೆರೆಯೋದಾಗಿ ಹೇಳಿದ್ದಾರೆ. ಇದರ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ.
ವಿಜಯ ದೇವರಕೊಂಡ ಮತ್ತು ಸಮಂತಾ ನಟನೆಯ 'ಖುಷಿ' ಸಿನಿಮಾ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗಲಿದೆ. ಇದೀಗ ಎಲ್ಲ ಕಡೆ ಈ ಸಿನಿಮಾದ ಟ್ರೇಲರ್‌ನದೇ ಸುದ್ದಿ. ಆದರೆ ಟ್ರೇಲರ್ ಬಿಡುಗಡೆಯ ದಿನ ವಿಜಯ ದೇವರಕೊಂಡ ಸಮಂತಾನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. 'ಇದೊಂದು ಲವ್‌ಸ್ಟೋರಿ. ಸಮಂತಾ ಇಲ್ದೇ ನಮ್ಮಿಬ್ಬರ ಲವ್‌ಸ್ಟೋರಿ ಹೇಗೆ ಹೇಳಲಿ' ಅಂತ ಒದ್ದಾಡಿದ್ದಾರೆ. 'ಇಂಥಾ ಪ್ರೇಮ ಕತೆಯನ್ನು ಒಬ್ಬಬ್ಬನೇ ಹೇಳಬೇಕು ಅಂದರೆ ಒಂಥರಾ ಬೇಜಾರು' ಅಂತ ಹೇಳಿ ಸಮಂತಾನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಿರೋ ಬಿಲ್ಡಪ್ಪು ಕೊಟ್ಟಿದ್ದಾರೆ. ಇವ್ರಿಬ್ರೂ ಸಿನಿಮಾ ಶೂಟಿಂಗ್‌ನಲ್ಲೂ ಸಖತ್ ಕ್ಲೋಸ್ ಆಗಿಯೇ ಇದ್ದರು. ಹೇಳಿಕೇಳಿ ಲವ್‌ಸ್ಟೋರಿ. ಆನ್ ಸ್ಕ್ರೀನ್ ರೊಮ್ಯಾಂಟಿಕ್ ಆಗಿ ಇರಲೇಬೇಕು. ಆದರೆ ವಿಜಯ ದೇವರಕೊಂಡ ಆಫ್‌ಸ್ಕ್ರೀನ್ ನಲ್ಲಿ ಕೂಡ ಕೆಲವೊಮ್ಮೆ ತಮ್ಮ ನಾಯಕಿಯರ ಜೊತೆ ರೊಮ್ಯಾಂಟಿಕ್ ಆಗಿಯೇ ಇರುತ್ತಾರೆ.
ಆದರೆ ವಿಜಯ ದೇವರಕೊಂಡಗೆ ಹೋಲಿಸಿದರೆ ಸಮಂತಾ ಸ್ವಲ್ಪ ಸೀನಿಯರ್. ಹಾಗಂತ ವಯಸ್ಸಲ್ಲೇನೋ ಅಂಥಾ ಡಿಫರೆನ್ಸ್ ಇಲ್ಲ. ಸಮಂತಾ ವಿಜಯ ದೇವರಕೊಂಡಗಿಂತ ಎರಡು ವರ್ಷ ದೊಡ್ಡವರಷ್ಟೇ. ನಮ್ ಯಶ್ ರಾಧಿಕಾಗೆ, ಕೊಹ್ಲಿ, ಅನುಷ್ಕಾ ನಡುವೆಯೂ ಈ ಏಜ್ ಡಿಫರೆನ್ಸ್ ಇದೆ. ಆದರೆ ಸಮಂತಾ ಬೇಗ ಇಂಡಸ್ಟ್ರಿಗೆ ಬಂದಿದ್ದು, ಮದುವೆ, ಡಿವೋರ್ಸ್ ಅಂತೆಲ್ಲ ಆಗಿದ್ದು ಅವರಿಗೊಂದು ಸೀನಿಯಾರಿಟಿನ ತಂದುಕೊಟ್ಟಿದೆ. ಹಾಗಂತ ವಿಜಯ್ ಈ ಸೀನಿಯಾರಿಟಿ ಬಗ್ಗೆ ತಲೆ ಕೆಡಿಸಿಕೊಂಡ ಹಾಗಿಲ್ಲ. ಆಫ್‌ಸ್ಕ್ರೀನ್‌ನಲ್ಲೂ ಸಮಂತಾ ಜೊತೆಗೆ ಸಖತ್ ಕ್ಲೋಸ್ ಆಗಿಯೇ ಮೂವ್ ಮಾಡ್ತಿದ್ರು. ಅವರಿಬ್ಬರ ಕ್ಲೋಸಾಗಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದವು.
ಜೈಲರ್ ಸಿನಿಮಾ ಬಿಡುಗಡೆಗೂ ಮೊದಲು ಹಿಮಾಲಯಕ್ಕೆ ತೆರಳಿದ ರಜನಿಕಾಂತ್!
ಇಡೀಗ ಸಮಂತಾ ಮಯೋಸೈಟಿಸ್ ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಯ ಕಾರಣ ಈ ಸಿನಿಮಾದ ಪ್ರಮೋಶನ್‌ನಲ್ಲಿ ಭಾಗವಹಿಸೋದಕ್ಕೆ ಸಾಧ್ಯವಾಗ್ತಾ ಇಲ್ಲ. ಈ ಸಿನಿಮಾಕ್ಕೆ ಸಮಂತಾ ಆಯ್ಕೆ ಆದ ಮೇಲೆ ಅವರಿಗೆ ಈ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿರುವುದು ಗೊತ್ತಾಯ್ತು. ಇದರಿಂದ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತುಹೋಯ್ತು. ಸುಮಾರು ತಿಂಗಳು ಇಡೀ ಟೀಮ್ ಸಮಂತಾಗಾಗಿ ಕಾಯೋದೇ ಆಯ್ತು. ಕೊನೆಗೂ ಅವರು ಕೊಂಚ ಸುಧಾರಿಸಿ ಸಿನಿಮಾದಲ್ಲಿ ಭಾಗವಹಿಸಿ ವಾಪಸು ಚಿಕಿತ್ಸೆಗೆಂದು ತೆರಳಿದ್ದಾರೆ. ಈ ನಡುವೆ ಸಿನಿಮಾ ಉಳಿದ ಕೆಲಸಗಳೆಲ್ಲ ಆಗಿ ಇನ್ನೇನು ಸೆಪ್ಟೆಂಬರ್ ತಿಂಗಳ ಮೊದಲ ದಿನ ರಿಲೀಸ್ ಆಗಲಿದೆ. ಟ್ರೇಲರ್ ಬಿಡುಗಡೆಯಲ್ಲಿ ಸಮಂತಾಗಾಗಿ ಇಡೀ ಚಿತ್ರತಂಡದ ಕಾಯುವಿಕೆ ಬಗ್ಗೆ ವಿಜಯ ದೇವರಕೊಂಡ ಹೇಳಿದ ಮಾತೀಗ ವೈರಲ್ ಆಗಿದೆ. 'ಸಮಂತಾಗೆ ಸಮಸ್ಯೆ ಆಗಿ ಇಡೀ ಟೀಮ್ ಅವರಿಗಾಗಿ ಕಾಯಬೇಕಾಗಿ ಬಂತು. ಈ ಕಾಯುವಿಕೆ ಒಂದು ವರ್ಷ ದಾಟಿದಾಗ ನಾನು ಡೈರೆಕ್ಟರ್ ಶಿವ ಹತ್ರ ಒಂದು ಪ್ರಸ್ತಾಪ ಇಟ್ಟೆ. ಸಮಂತಾ ಮಾಡಬೇಕಾದ ಪಾತ್ರಕ್ಕೆ ಬೇರೆ ನಟಿಯನ್ನು ತರಲಾಗೋದಿಲ್ಲ. ಒಂದು ವರ್ಷ ಅಲ್ಲ, ಹತ್ತು ವರ್ಷ ಆದರೂ ಆ ಪಾತ್ರ ಅವಳೇ ಮಾಡಬೇಕು. ಆದರೆ ಹೀಗೆ ಅವಳಿಗಾಗಿ ಕಾಯ್ತಾ ಟೈಮ್ ವೇಸ್ಟ್ ಮಾಡೋ ಬದಲು ನಾವ್ಯಾಕೆ ಒಂದು ಇಡ್ಲಿ ಹೋಟೇಲ್ ಓಪನ್ ಮಾಡಬಾರದು ಅಂತ!'
ವಿಜಯ ದೇವರಕೊಂಡ ಅವರ ಈ ಮಾತಿಗೆ ಎಲ್ಲ ಬಿದ್ದೂ ಬಿದ್ದೂ ನಕ್ಕರು. ದೂರದಲ್ಲಿ ಈ ಕಾರ್ಯಕ್ರಮ ನೋಡ್ತಿರೋ ಸಮಂತಾನೂ ನಕ್ಕಿರಬಹುದು. ಅವರ ನಗು ಮರೆಯಾಗದಿರಲಿ, ಕಾಯಿಲೆ ಬೇಗ ಸರಿ ಹೋಗಲಿ ಅಂತ ಇಂಡಸ್ಟ್ರಿ ಪ್ರಾರ್ಥಿಸುತ್ತಿದೆ.
ಅಬ್ಬಾ! ಉರ್ಫಿ ಜಾವೇದ್ ನಿಜಕ್ಕೂ ಹೀಗಿದ್ರಾ? ಮೊದಲ ಆಡಿಷನ್ ವಿಡಿಯೋ ವೈರಲ್!