ಒಂದು ಕಾಲದಲ್ಲಿ ಬಾಲಿವುಡ್ ಆಳಿದ ಶಶಿ ಕಪೂರ್ ಹಾಗೂ ಬ್ರಿಟನ್ ನಟಿ ಜೆನ್ನೀಫರ್ ಅವರ ದಾಂಪತ್ಯ, ಪ್ರೇಮ ಕಥೆ ಯಾವ ಸಿನಿಮಾಗೂ ಕಡಿಮೆ ಇಲ್ಲ. ಆದರೆ ಇಲ್ಲಿರುವುದು ಬರೀ ನೋವಿನ ಕಥೆ...
60ರ ದಶಕದಿಂದಲೇ ಬಾಲಿವುಡ್ ಆಳಿದ ಖ್ಯಾತನಾಮ ನಟರಲ್ಲಿ ಒಬ್ಬರು ಶಶಿ ಕಪೂರ್. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು 1998ರಲ್ಲಿ ತೆರೆ ಕಂಡ ಜಿಹ್ನಾ ಆ್ಯಂಡ್ ಸೈಡ್ ಸ್ಟ್ರೀಟ್ಸ್ವರೆಗೆ ಕೊಟ್ಟಿರುವ ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಲೆಕ್ಕವೇ ಇಲ್ಲ. ಆದರೆ ಇವರ ನಿಜ ಜೀವನವೂ ಯಾವುದೇ ಚಿತ್ರಕ್ಕಿಂತ ಭಿನ್ನವಾಗಿಲ್ಲ. ಇದು ದುಃಖಕರ, ನೋವಿನ ಕಥೆ. ಇವರ ದುಃಖಮಯ ಲವ್ ಸ್ಟೋರಿಯ ಕಥೆಯನ್ನು ಒಂದು ಸಿನಿಮಾ ಮಾಡಬಹುದು. ಹಾಗಿದೆ ಇವರ ಬದುಕಿನ ಕಥೆ. ಇನ್ನು ಕೆಲವೇ ದಿನಗಳಲ್ಲಿ ಅಂದರೆ, ಡಿಸೆಂಬರ್ 4ರಂದು ಶಶಿ ಕಪೂರ್ ಅವರ ನಿಧನರಾಗಿ ಆರು ವರ್ಷಗಳು ಪೂರೈಸಲಿವೆ. ಈ ಸಂದರ್ಭದಲ್ಲಿ ಅವರ ಬದುಕಿನ ನೋವಿನ ಕಥೆಯೀಗ ಮುನ್ನೆಲೆಗೆ ಬಂದಿದೆ. ನಾವು ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳಲ್ಲಿ ಬೇರೆ ಬೇರೆ ರೀತಿಯ ಪ್ರೇಮಕಥೆಗಳನ್ನು ನೋಡಿದ್ದೇವೆ. ಮತ್ತು ಅವುಗಳಲ್ಲಿ ಕೆಲವು ನಿಜ ಜೀವನದ್ದೂ ಆಗಿವೆ. ನಿಜ ಜೀವನದ ಬಾಲಿವುಡ್ ಜೋಡಿಗಳ ಬಗ್ಗೆ ಮಾತನಾಡುವ ಹೊತ್ತಿನಲ್ಲಿ ಎಲ್ಲರ ಗಮನವನ್ನು ಸೆಳೆದು ಹೃದಯದಲ್ಲಿ ಅಚ್ಚೊತ್ತುವ ಕಥೆಯೇ ಶಶಿ ಕಪೂರ್ ಅವರದ್ದು. ಶಶಿ ಕಪೂರ್ ಅವರು 2017ರ ಡಿಸೆಂಬರ್ 18ರಂದು ಎಲ್ಲರನ್ನೂ ಅಗಲಿದರೆ, ಅವರ ಪತ್ನಿ, ಬ್ರಿಟನ್ ನಟಿ ಜೆನ್ನಿಫರ್ ಕೆಂಡಾಲ್ 1984ರಲ್ಲಿಯೇ ಸಾವನ್ನಪ್ಪಿದ್ದರು. ಅವರ ಸಾವಿನ ಬಳಿಕ ಶಶಿ ಕಪೂರ್ ಅವರು ಖಿನ್ನತೆಗೆ ಜಾರಿ ಕಳೆದ ನೋವಿನ ದಿನಗಳು ಲೆಕ್ಕವಿಲ್ಲದಷ್ಟು. ಇದೀಗ ಈ ಜೋಡಿಗಳು ನಮ್ಮೊಂದಿಗೆ ಇಲ್ಲದಿದ್ದರೂ, ಎಲ್ಲರೂ ಅವರ ಪ್ರೇಮಕಥೆಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅದರ ಬಗ್ಗೆ ಮಾತನಾಡುತ್ತಾರೆ. ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದಕ್ಕೆ ಇದು ಪರಿಪೂರ್ಣ ಉದಾಹರಣೆಯಾಗಿದೆ.
ಶಶಿ ಕಪೂರ್ ಅವರ ಕಾಲದ ಆಕರ್ಷಕ, ಅಷ್ಟೇ ಮೃದು ಸ್ವಭಾವದ ನಟನಾಗಿದ್ದರು. ಚಿತ್ರರಂಗದ ಉತ್ತುಂಗದಲ್ಲಿದ್ದ ಕಾಲವದು. ಇವರ ಒಂದೇ ಮಾತಿಗೆ ಹುಡುಗಿಯರ ಲೈನ್ ನಿಂತಿರುವಷ್ಟು ಫೇಮಸ್ ಆಗಿದ್ದರು ಶಶಿ ಕಪೂರ್. ಲಕ್ಷಾಂತರ ಹುಡುಗಿಯರು ಇವರನ್ನು ಮೋಹಿಸುತ್ತಿದ್ದರು, ಅನೇಕರು ಅವರನ್ನು ಮದುವೆಯಾಗಲು ಬಯಸಿದ್ದರು, ತಮ್ಮ ಇಂಗಿತವನ್ನೂ ವ್ಯಕ್ತಪಡಿಸುತ್ತಿದ್ದರು. ಆದರೆ ಈ ನಟನ ಹೃದಯ ಕದ್ದ ಹುಡುಗಿಯೇ ಜೆನ್ನಿಫರ್ ಕೆಂಡಾಲ್. ಇವರಿಬ್ಬರ ಪ್ರೇಮಕಥೆಯು ರೊಮ್ಯಾಂಟಿಕ್ ಚಿತ್ರಕ್ಕಿಂತ ಕಡಿಮೆಯಿಲ್ಲ. ಶಶಿ ಸಾಯುವವರೆಗೂ ತಮ್ಮ ಪ್ರೀತಿಯ ಹೆಂಡತಿಗೆ ನಿಷ್ಠರಾಗಿದ್ದರು. ಇವರ ಮೊದಲ ಭೇಟಿಯಾದದ್ದು ಮುಂಬೈನ ರಾಯಲ್ ಒಪೇರಾ ಹೌಸ್‌ನಲ್ಲಿ. ಜೆನ್ನಿಫರ್ ಅವರ ಸಹೋದರಿ ಫೆಲಿಸಿಟಿ ಕೆಂಡಾಲ್ ಅವರ ಆತ್ಮಚರಿತ್ರೆ ವೈಟ್ ಕಾರ್ಗೋ ಪ್ರಕಾರ, ಅವರ ಪ್ರೇಮಕಥೆ ಇಲ್ಲಿಂದ ಪ್ರಾರಂಭವಾಯಿತು. ಶಶಿ ಕಪೂರ್ ಮತ್ತು ಜೆನ್ನಿಫರ್ ಪರಸ್ಪರ ಪ್ರೀತಿಸಲಾರಂಭಿಸಿದ್ದರು.
ಸುಖ ಸಂಸಾರಕ್ಕೆ ಬಿಗ್ಬಾಸ್ ಖ್ಯಾತಿ ಅರುಣ್ ಸಾಗರ್ ಗಾಳಿಪಟದ ಸೂತ್ರ ಹೀಗಿದೆ ನೋಡಿ!
ಅನೇಕ ಪ್ರೇಮಕಥೆಗಳಂತೆ, ಅವರ ಪ್ರೇಮಕಥೆಯು ಹಲವಾರು ಏರಿಳಿತಗಳನ್ನು ಎದುರಿಸಿತು. ಆರಂಭದಲ್ಲಿ, ಜೆನ್ನಿಫರ್ ಅವರ ತಂದೆ ಅವರ ಸಂಬಂಧವನ್ನು ವಿರೋಧಿಸಿದರು. ವರದಿಯ ಪ್ರಕಾರ, ಶಶಿ ಕಪೂರ್ ಅವರನ್ನು ಜೆನ್ನಿಫರ್ ತಂದೆ ಒಪ್ಪಿರಲಿಲ್ಲ. ಜೆನ್ನೀಫರ್ ಅವರು ಶಶಿ ಕಪೂರ್ ಅವರಿಗಿಂತ ಐದು ವರ್ಷ ದೊಡ್ಡವರಾಗಿದ್ದರು. ಇದರ ಹೊರತಾಗಿಯೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಪ್ರತಿ ಅಡಚಣೆ ಹೊರತಾಗಿಯೂ ಅವರ ಪ್ರೀತಿಯು ಬಲವಾಯಿತು. ಅಸೀಮ್ ಛಾಬ್ರಾ ಬರೆದಿರುವ ಶಶಿ ಕಪೂರ್ ಅವರ ಜೀವನಚರಿತ್ರೆಯ ಪ್ರಕಾರ, ಜೆನ್ನಿಫರ್ ಮನೆಯವರ ವಿರೋಧ ಕಟ್ಟಿಕೊಂಡು ಮನೆ ಬಿಡಬೇಕಾಯಿತು. ಇದೇ ಕಾರಣಕ್ಕೆ ಇಬ್ಬರಿಗೂ ತಿನ್ನಲು ಆಹಾರವಿಲ್ಲದೇ ಹಲವು ದಿನ ಬದುಕಬೇಕಾಗಿಯೂ ಬಂದಿತ್ತು. ಇಷ್ಟಾದರೂ ಜೆನ್ನಿಫರ್ ತಂದೆ ಅವರಿಗೆ ಒಪ್ಪಿಗೆ ನೀಡಲಿಲ್ಲ.
ಸಾಕಷ್ಟು ಹೋರಾಟ ಮತ್ತು ವೈಫಲ್ಯದ ನಂತರ, ಶಶಿ ಅಂತಿಮವಾಗಿ ತಮ್ಮ ಸಹೋದರ ರಾಜ್ ಕಪೂರ್ ಸಹಾಯವನ್ನು ಕೇಳಿದರು. ರಾಜ್ ಕಪೂರ್ ಇವರ ಪ್ರೀತಿಗೆ ಸಹಕರಿಸಿದರು. ಅವರನ್ನು ಮುಂಬೈಗೆ ಕರೆತರಲು ಟಿಕೆಟ್ ಕೂಡ ಬುಕ್ ಮಾಡಿದರು. ನಂತರ ರಾಜ್ ಕಪೂರ್ ಅವರ ಪತ್ನಿ ಗೀತಾ ಬಾಲಿ ಜೆನ್ನಿಫರ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ ದುಪಟ್ಟಾವನ್ನು ಉಡುಗೊರೆಯಾಗಿ ನೀಡಿದರು. ಏಕೆಂದರೆ, ಆ ಸಮಯದಲ್ಲಿ ಇವರ ಬಳಿ ಬಟ್ಟೆ ಕೂಡ ಇರಲಿಲ್ಲ ಎನ್ನಲಾಗಿದೆ. ಜುಲೈ 1958 ರಲ್ಲಿ, 20 ವರ್ಷದ ಶಶಿ ಕಪೂರ್ ಮತ್ತು 25 ವರ್ಷದ ಜೆನ್ನಿಫರ್ ಕೆಂಡಾಲ್ ವಿವಾಹವಾದರು. ಅವರಿಗೆ ಮೂವರು ಮಕ್ಕಳು ಜನಿಸಿದರು. ಕರಣ್, ಕುನಾಲ್ ಮತ್ತು ಮಗಳು ಸಂಜನಾ. ಇಬ್ಬರೂ ಸೇರಿ 1978ರಲ್ಲಿ ಬಾಂಬೆಯಲ್ಲಿ ಪೃಥ್ವಿ ಥಿಯೇಟರ್ ಆರಂಭಿಸಿದರು. ಆದರೆ ದೇವರ ಯೋಜನೆ ಬೇರೆಯದ್ದೇ ಆಗಿತ್ತು.
ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್ ಕಪೂರ್ ಈ ಪರಿ ರೊಮ್ಯಾನ್ಸ್! ಉಫ್ ಎಂದ ಫ್ಯಾನ್ಸ್...
ಇನ್ನೇನು ಜೀವನದಲ್ಲಿ ಒಂದು ಹಂತಕ್ಕೆ ಬರುತ್ತದೆ ಎಂದಾಗ, 1983 ರಲ್ಲಿ, ಜೆನ್ನಿಫರ್ ಕರುಳಿನ ಕ್ಯಾನ್ಸರ್ನಿಂದ ಬಳಲತೊಡಗಿದರು. ಬ್ರಿಟನ್ನಲ್ಲಿರುವ ತಮ್ಮ ಮನೆಯಲ್ಲಿ ಜೀವನದ ಕೊನೆಯ ತಿಂಗಳುಗಳನ್ನು ಕಳೆದರು. ಅವರು 1984 ರಲ್ಲಿ ಮರಣಹೊಂದಿದರು. ಇದರಿಂದ ಶಶಿ ಕಪೂರ್ ಅವರಿಗೆ ದಿಕ್ಕೇ ತೋಚದಾಯಿತು. ಖಿನ್ನತೆಗೆ ಜಾರಿದರು. ಎಲ್ಲವನ್ನೂ ಕಳೆದುಕೊಂಡ ಅನುಭದಲ್ಲಿ ಬಳಲಿದರು. ಪತ್ನಿಯ ಮರಣದ ನಂತರ ಖಿನ್ನತೆಯಿಂದ ಹೊರಕ್ಕೆ ಬರುವಂತೆ ಮಾಡಿದ ಎಲ್ಲರ ಪ್ರಯತ್ನಗಳೂ ನಿಷ್ಪ್ರಯೋಜಕವಾದವು. ಕೆಲವೊಂದು ಚಿತ್ರಗಳಲ್ಲಿ ಇವರಿಗೆ ಅವಕಾಶ ದೊರೆತರೂ ಚಿತ್ರರಂಗದಿಂದಲೇ ದೂರವಾದರು. ಪತ್ನಿಯ ನಿಧನದ ಬಳಿಕ ಅವರ ಕೊರಗಿನಲ್ಲಿಯೇ ಉಳಿದ ಶಶಿ ಕಪೂರ್ ಕೊನೆಗೆ ಪತ್ನಿಯನ್ನು ಸೇರಿದರು.