ನಟ ಸೂರ್ಯ ಮತ್ತು ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಲು ಕಾರಣ ಮಕ್ಕಳ ಶಿಕ್ಷಣ ಎಂದು ವರದಿಯಾಗಿತ್ತು. ಆದರೆ ಇದರ ಹಿಂದಿನ ನಿಜವಾದ ಕಾರಣವನ್ನು ಸೂರ್ಯ ಬಹಿರಂಗಪಡಿಸಿದ್ದಾರೆ.
ಸೌತ್ ಇಂಡಿಯನ್ ಸ್ಟಾರ್ ತಮಿಳು ನಟ ಸೂರ್ಯ ಅವರಿಗೆ ಲೇಡಿ ಫ್ಯಾನ್ ಫಾಲೋವರ್ಸ್ ಸಿಕ್ಕಾಪಟ್ಟೆ ಇದ್ದಾರೆ. ಅದಕ್ಕೆ ಅವರ ಗುಣನಡತೆಯೂ ಕಾರಣ. ಇತ್ತೀಚೆಗೆ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆಗಿದ್ದಾರೆ ಎಂದು ವರದಿಯಾಗಿತ್ತು. ಈ ವರದಿಯ ಹಿಂದೆ ಇಬ್ಬರ ಮಧ್ಯೆ ಡಿವೋರ್ಸ್ ಆಗುತ್ತಿದೆ ಎನ್ನುವವರೆಗೆ ಹಲವು ಊಹಾಪೋಹಾಗಳು ಹಬ್ಬಿದ್ದವು. ಆದರೆ ಇದಕ್ಕೆ ಆಗ ಸ್ಪಷ್ಟನೆ ನೀಡಿ ದಂಪತಿ ಮಕ್ಕಳ ಶಿಕ್ಷಣಕ್ಕಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಆದರೆ ಇದೇ ವಿಚಾರದ ಬಗ್ಗೆ ಸಂದರ್ಶಕರೊಬ್ಬರು ನಟ ಸೂರ್ಯ ಅವರನ್ನು ಪ್ರಶ್ನೆ ಮಾಡಿದ್ದು, ಈ ಪ್ರಶ್ನೆಗೆ ಬಹಳ ತೂಕದ ಉತ್ತರ ನೀಡಿದ್ದಾರೆ ಕಂಗುವಾ ನಟ ಸೂರ್ಯ. ಆ ಸಂದರ್ಶನದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ನಟ ಸೂರ್ಯ ಅವರ ಈ ಉದಾತ ಚಿಂತನೆಗೆ ಭೇಷ್ ಎಂದಿದ್ದಾರೆ.
ಹಾಗಿದ್ರೆ ಆ ಸಂದರ್ಶನದಲ್ಲಿ ಏನಿದೆ.
ಅನುಪಮಾ ಚೋಪ್ರಾ ಎಂಬುವವರು ಈ ಸಂದರ್ಶನ ನಡೆಸಿದ್ದು, ಹಾಲಿವುಡ್ ರಿಪೋರ್ಟರ್ ಇನ್ ಇಂಡಿಯಾ ಪೇಜ್ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದ ಆರಂಭದಲ್ಲಿ ನಟ ಸೂರ್ಯ, 'ನಾನು ಜ್ಯೋತಿಕಾಳಂತೆ ಬೆಸ್ಟ್ ಆಗಿರುವುದಕ್ಕೆ ಪ್ರಯತ್ನಿಸುತ್ತೇನೆ, ನನಗೆ ಗೊತ್ತಿಲ್ಲ, ನಾನು ಆಕೆಗೆ ಸರಿಸಮಾನ ಆಗಲು ಸಾಧ್ಯವಾಗುತ್ತಿಲ್ಲ, ಆದರೆ ನಾನು ಖಂಡಿತವಾಗಿಯೂ ಬಹಳಷ್ಟು ವಿಚಾರಗಳನ್ನು ಆಕೆಯಿಂದ ಕಲಿಯುತ್ತಿದ್ದೇನೆ.' ಎಂದು ಹೇಳುತ್ತಾರೆ. ಮುಂದುವರಿದ ಸಂದರ್ಶಕಿ ಅನುಪಮಾ ಚೋಪ್ರಾ ಅವರು ನಟ ಸೂರ್ಯಗೆ , 'ಪತ್ನಿ ಜ್ಯೋತಿಕಾ ಅವರು ಸಾಕಷ್ಟು ವೆಬ್ ಸಿರೀಸ್‌ನಲ್ಲಿ ನಟಿಸುತ್ತಿರುವ ಕಾರಣಕ್ಕೆ ನೀವು ಮುಂಬೈಗೆ ಶಿಫ್ಟ್ ಆಗಿದ್ದೀರಿ ಎಂದು ಕೇಳಲ್ಪಟ್ಟೆ ಇದು ನಿಜವೇ ಎಂದು ಪ್ರಶ್ನೆ ಮಾಡುತ್ತಾರೆ.
ಇದಕ್ಕೆ ಉತ್ತರಿಸಿ ನಟ ಸೂರ್ಯ ಆಕೆ 18-19 ವರ್ಷದವಳಿದ್ದಾಗ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆದರು. ಆಕೆ ಮುಂಬೈನಲ್ಲಿ ಕಳೆದಿದ್ದು ಕೇವಲ 18 ವರ್ಷ ಹಾಗೂ ಬಹುತೇಕ 27 ವರ್ಷಗಳನ್ನು ಚೆನ್ನೈನಲ್ಲಿ ಕಳೆದಿದ್ದಾಳೆ. ಈ ಸಮಯದಲ್ಲಿ ಆಕೆ ನನ್ನ ಜೊತೆ ನನ್ನ ಕುಟುಂಬದ ಜೊತೆ ಇದ್ದಳು ಹಾಗೂ ನನಗಾಗಿ ಅವಳು ಆಕೆಯ ಸಿನಿಮಾ ಕೆರಿಯರನ್ನೇ ನಿಲ್ಲಿಸಿದಳು. ಒಬ್ಬ ಪುರುಷ ಮಹಿಳೆಯಿಂದ ಏನು ನಿರೀಕ್ಷೆ ಮಾಡುತ್ತಾನೋ ಅದನ್ನೂ ಮಹಿಳೆಯೂ ಪುರುಷನಿಂದ ನಿರೀಕ್ಷೆ ಮಾಡುತ್ತಾಳೆ ಎಂದಿದ್ದಾರೆ. ಆಕೆಗೆ(ನಟಿ ಜ್ಯೋತಿಕಾ) ತನ್ನ ಕೆರಿಯರ್‌ನ ಅಗತ್ಯವಿತ್ತು, ಆಕೆಗೆ ಆಕೆಯ ಸ್ನೇಹಿತರ ಅಗತ್ಯವಿತ್ತು. ಆಕೆಗೆ ಆಕೆ ಆರ್ಥಿಕವಾಗಿ ಸ್ವಾತಂತ್ರವಾಗುವುದರ ಅಗತ್ಯವಿತ್ತು. ಆಕೆಗೆ ಆ ಗೌರವದ ಅಗತ್ಯವಿತ್ತು. ಆಕೆಗೆ ಆಕೆ ಜಿಮ್ ಸಮಯದ ಅಗತ್ಯವಿತ್ತು. ಆಕೆಗೆ ಆಕೆಯ ಫಿಟ್‌ನೆಸ್‌ನ ಅಗತ್ಯವಿತ್ತು. ಹಾಗೂ ಯಾಕೆ ಆಕೆ ತನ್ನ ಪೋಷಕರ ಜೊತೆಗೆ ಕಳೆಯುವ ಸಮಯವನ್ನು ತೆಗೆದುಕೊಳ್ಳಬೇಕು? ಹಾಗೂ ಆಕೆಯ ಜೀವನ ಶೈಲಿ ಹಾಗೂ ಆಕೆ ಏನನ್ನು ಮಾಡುವುದಕ್ಕೆ ಇಷ್ಟ ಪಡುತ್ತಾಳೋ ಅದು, ಆ ಬದಲಾವಣೆಯನ್ನು ನಾವು ಮಾಡಲು ಹೋದಾಗ ಯಾಕೆ ಯಾವಾಗಲೂ ನಾನು, ನನ್ನದು, ನಾನೇ... ಎಂಬ ಯೋಚನೆ ಬಂದಿತ್ತು ಎಂದು ನಟ ಸೂರ್ಯ ಹೇಳಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟ ಸೂರ್ಯ ತನ್ನ ಪತ್ನಿಯನ್ನು ಅರ್ಥ ಮಾಡಿಕೊಂಡಿರುವ ರೀತಿಗೆ ಅನೇಕ ಹೆಣ್ಣುಮಕ್ಕಳು ಭೇಷ್ ಎಂದಿದ್ದಾರೆ. ಬಹುತೇಕ ಪ್ರೀತಿಸಿ ಮದುವೆಯಾದ ಸಿನಿಮಾ ನಟನಟಿಯರು ತಮ್ಮ ಪತಿಗಾಗಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ತಮ್ಮ ಸಿನಿಮಾ ಕೆರಿಯರ್‌ಗೆ ಗುಡ್‌ಬಾಯ್ ಹೇಳಿದವರಾಗಿದ್ದಾರೆ. ಆದರೆ ಯಾರು ಪತ್ನಿಗಾಗಿ ಕೆರಿಯರ್ ನಿಲ್ಲಿಸಿದಂತಹ ನಟರು ತೀರಾ ಕಡಿಮೆ ಅಲ್ಲ ಇಲ್ಲವೇ ಇಲ್ಲ, ಇದು ಬರೀ ಸಿನಿಮಾ ನಟನಟಿಯರ ಬದುಕಲ್ಲ, ನಟಿಯರಾದರೂ ಅಷ್ಟೇ ಉನ್ನತ ಆಫೀಸರ್‌ಗಳಾಗಿದ್ದರು ಅಷ್ಟೇ ಸಂಸಾರ ಸುಖವಾಗಿ ಸಾಗಲು ತ್ಯಾಗ ಮಾಡುವುದು ಬಹುತೇಕ ಸ್ತ್ರೀಯೇ ಆಗಿದ್ದಾಳೆ. ಇಂತಹ ತ್ಯಾಗಕ್ಕೆ ಕೆಲವರಿಗೆ ಕನಿಷ್ಠ ಕೃತಜ್ಞತೆಯೂ ಇರುವುದಿಲ್ಲ, ಆಕೆಗೂ ಆಕೆಯದ್ದೇ ಆದ ಸಮಯ ಬೇಕು ಎಂಬುದನ್ನು ಬಹುತೇಕರು ಯೋಚನೆ ಮಾಡುವುದೇ ಇಲ್ಲ, ಇದೇ ಕಾರಣಕ್ಕೆ ನಟ ಸೂರ್ಯ ಅವರ ಈ ಮಾತಿಗೆ ಅನೇಕ ಹೆಂಗೆಳೆಯರು ಭೇಷ್ ಎಂದಿದ್ದಾರೆ.
ಅಂದಹಾಗೆ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ 2006ರಲ್ಲಿ ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದರು. ದಿಯಾ ಹಾಗೂ ದೇವ ಎಂಬ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ನಟ ಸೂರ್ಯ ಅವರನ್ನು ಮದುವೆಯಾದ ನಂತರ ನಟಿ ಜ್ಯೋತಿಕಾ ಸಿನಿಮಾಗೆ ಗುಡ್‌ಬೈ ಹೇಳಿದ್ದರು.
ಇಲ್ಲಿದೆ ನೋಡಿ ಸೂರ್ಯ ಮಾತಿನ ವೀಡಿಯೋ