
ಶೂನ್ಯದಿಂದ ಶಿಖರಕ್ಕೆ: 'ಕೊಲವೆರಿ' ಸ್ಟಾರ್ ಧನುಷ್ ಸಾಹಸಗಾಥೆ!
ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಧನುಷ್' (Dhanush) ಎನ್ನುವ ಹೆಸರು ಇಂದು ಬರಿ ಹೆಸರಲ್ಲ, ಅದೊಂದು ಬ್ರ್ಯಾಂಡ್! ಆದರೆ, ಇಂದು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ 'ಅಸುರ'ನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಸದ್ಯ ತಮ್ಮ ಮುಂಬರುವ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಕರ' (Kara) ಪ್ರಚಾರದಲ್ಲಿ ಬ್ಯುಸಿಯಾಗಿರುವ ಧನುಷ್, ಇತ್ತೀಚೆಗೆ ನಡೆದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ತಮ್ಮ ಜೀವನದ ಕಹಿ ಘಟನೆಗಳನ್ನು ಮೆಲುಕು ಹಾಕುತ್ತಾ ಫ್ಯಾನ್ಸ್‌ಗೆ ಸಖತ್ ಇನ್ಸ್ಪಿರೇಷನ್ ನೀಡಿದ್ದಾರೆ.
ಅಂದು 'ಕಡ್ಡಿಯಂತಿದ್ದೀಯ' ಎಂದವರಿಗೆ ಇಂದು ಇವರೇ 'ಮಾಸ್' ಹೀರೊ!
ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಧನುಷ್ ಅನುಭವಿಸಿದ ಅವಮಾನ ಅಷ್ಟಿಷ್ಟಲ್ಲ. "ನೀನು ನೋಡಲು ಹೀಗಿದ್ದೀಯಾ, ಇಷ್ಟು ಸಣ್ಣಗಿದ್ದೀಯಾ, ನಿನಗೆ ಹೀರೋ ಪಟ್ಟ ಬೇಕಾ?" ಎಂದು ನೆರೆದವರು ಆಡಿಕೊಂಡಿದ್ದರಂತೆ. ಬಾಡಿ ಶೇಮಿಂಗ್ ಎನ್ನುವುದು ಅವರ ವೃತ್ತಿಜೀವನದ ಆರಂಭದ ದೊಡ್ಡ ವಿಘ್ನವಾಗಿತ್ತು. ಆದರೆ ಧನುಷ್ ಎದೆಗುಂದಲಿಲ್ಲ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನನ್ನ ಮೇಲೆ ನನಗೆ ನಂಬಿಕೆಯಿತ್ತು. ಜನರು ನನ್ನನ್ನು ನೋಡಿ ನಗುತ್ತಿದ್ದಾಗ, ನಾನು ನನ್ನ ಕೆಲಸದ ಮೇಲೆ ಗಮನ ಕೊಟ್ಟೆ" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಧನುಷ್ ಕೆರಿಯರ್ ಬದಲಿಸಿದ್ದೇ 'ಪೊಲ್ಲಾಧವನ್' ಸಿನಿಮಾ. ಈ ಇವೆಂಟ್‌ನಲ್ಲಿ ಧನುಷ್‌ಗೆ ಆ ಚಿತ್ರದ ನೆನಪಿನ ಸ್ಮರಣಿಕೆಯಾಗಿ ಬೈಕ್ ನಂಬರ್ ಪ್ಲೇಟ್ ನೀಡಲಾಯಿತು. ಅದನ್ನು ಕೈಲಿಡಿದು ಮುಗುಳ್ನಕ್ಕ ಧನುಷ್, "ಪೊಲ್ಲಾಧವನ್‌ಗಿಂತ ಮುಂಚೆ ಎಲ್ಲರೂ ನನ್ನ ದೇಹವನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು. ಆದರೆ ಯಾವಾಗ ನಾನು ಅದೇ ಸ್ಕ್ರೀನ್ ಮೇಲೆ 'ಸಿಕ್ಸ್ ಪ್ಯಾಕ್' ನೊಂದಿಗೆ ಎಂಟ್ರಿ ಕೊಟ್ಟೆನೋ, ಅಲ್ಲಿಯವರೆಗೆ ಕೆಟ್ಟದಾಗಿ ಮಾತನಾಡಿದ ಜನರೇ ಮೊದಲ ಬಾರಿಗೆ ಎದ್ದು ನಿಂತು ಶಿಳ್ಳೆ ಹೊಡೆದರು. ಆ ಕ್ಷಣ ನನ್ನ ಬದುಕಿನ ಮರೆಯಲಾಗದ ತಿರುವು" ಎಂದರು.
ರಾಷ್ಟ್ರ ಪ್ರಶಸ್ತಿ ಎಂಬ 'ಮ್ಯಾನಿಫೆಸ್ಟೇಶನ್' ಮ್ಯಾಜಿಕ್!
ಧನುಷ್ ಕೇವಲ ನಟನಲ್ಲ, ಒಬ್ಬ ಫಿಲಾಸಫರ್ ಕೂಡ ಹೌದು. ಅವರು ಹೇಳುವ ಒಂದು ಮಾತು ಎಲ್ಲರಿಗೂ ಮಾದರಿ: "ನೀವು ಏನನ್ನು ಯೋಚಿಸುತ್ತೀರೋ, ಅದೇ ನೀವು ಆಗುತ್ತೀರಿ." 2002-2003ರಲ್ಲಿ ಧನುಷ್ ತಮಗೆ ರಾಷ್ಟ್ರ ಪ್ರಶಸ್ತಿ ಬರುತ್ತದೆ ಎಂದು ಹೇಳಿಕೊಂಡಾಗ ಜನ ಹುಚ್ಚರೆಂದು ನಕ್ಕಿದ್ದರಂತೆ. ಆದರೆ ಇಂದು ಧನುಷ್ ಕಪಾಟಿನಲ್ಲಿ 'ಆಡುಕಲಂ' ಮತ್ತು 'ಅಸುರನ್' ಚಿತ್ರಕ್ಕಾಗಿ ಬಂದ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಗರ್ವದಿಂದ ನಗುತ್ತಿವೆ!
ವಿಘ್ನೇಶ್ ರಾಜ ನಿರ್ದೇಶನದ 'ಕರ' ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಧನುಷ್ ಜೊತೆ 'ಪ್ರೇಮಲು' ಬೆಡಗಿ ಮಮಿತಾ ಬೈಜು ಮತ್ತು ಸೂರಜ್ ವೆಂಜರಮೂಡು ಪ್ರಮುಖ ಪಾತ್ರದಲ್ಲಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಅದ್ಭುತ ಸಂಗೀತ ಚಿತ್ರಕ್ಕಿದ್ದು, ಟ್ರೈಲರ್ ಈಗಾಗಲೇ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ, ಅವಮಾನ ಮಾಡಿದವರ ಮುಂದೆ ಸನ್ಮಾನಿಸಿಕೊಳ್ಳುವ ಹಂತಕ್ಕೆ ಬೆಳೆದಿರುವ ಧನುಷ್ ಅವರ ಪಯಣ, ಶ್ರಮ ಪಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆ. ಏಪ್ರಿಲ್ 30ಕ್ಕೆ ಧನುಷ್ ಮತ್ತೆ ಬೆಳ್ಳಿಪರದೆ ಮೇಲೆ ಘರ್ಜಿಸುವುದು ಪಕ್ಕಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.