
ನವದೆಹಲಿ (ಸೆ.1): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪ್ರಸಿದ್ಧ 'ಪದ್ಮಾವತ್' ಸಿನಿಮಾ ಮತ್ತು ಅದರಲ್ಲಿ ಚಿತ್ರಿಸಲಾದ 'ಜೋಹಾರ್' (ರಾಜಪೂತ ಮಹಿಳೆಯರ ಸತಿಪದ್ದತಿ) ಪದ್ಧತಿಯ ಕುರಿತು ನಟಿ ಸ್ವರಾ ಭಾಸ್ಕರ್ ನೀಡಿರುವ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. 2017ರಲ್ಲಿ ನಿರ್ದೇಶಕ ಬನ್ಸಾಲಿ ಅವರಿಗೆ ತಾವು ಬರೆದಿದ್ದ ಬಹಿರಂಗ ಪತ್ರವನ್ನು (Open Letter) ಸ್ವರಾ ಭಾಸ್ಕರ್ ಮತ್ತೊಮ್ಮೆ ಮಾತನಾಡಿದ್ದು, ಇದಕ್ಕೆ ಸೋಶಿಯಲ್ ಮೀಡಿಯಾ ಯೂಸರ್‌ಗಳು ಕಟು ಟೀಕೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವರಾ, 'ಪದ್ಮಾವತ್' ಚಿತ್ರದ ಜೋಹಾರ್ ದೃಶ್ಯಗಳ ಬಗ್ಗೆ ಟೀಕೆ ಮಾಡಿದರು. "ದೇವರಿಲ್ಲದಿದ್ದರೆ ನಾನೊಬ್ಬ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯಾಗಿದ್ದರೆ (Rape Survivor), ಈ ಚಿತ್ರ ನನಗೆ ಏನು ಸಂದೇಶ ನೀಡುತ್ತಿದೆ? ನನ್ನ ಮಾನ ಉಳಿಸಿಕೊಳ್ಳಲು ನಾನು ಜೋಹರ್ ಮಾಡಿಕೊಳ್ಳದಿದ್ದರೆ ನನ್ನನ್ನು ನಾನು ಹೇಡಿ ಎಂದು ಭಾವಿಸಬೇಕೇ?" ಎಂದು ಪ್ರಶ್ನಿಸಿದ್ದರು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗೆ ಇಂತಹ ನಿರೂಪಣೆಗಳು 'ಅವರು ಜೀವಿಸಲು ಅರ್ಹರಲ್ಲ' ಎಂಬ ತಪ್ಪು ಸಂದೇಶ ರವಾನಿಸುವುದಿಲ್ಲವೇ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.
ಅಲ್ಲದೆ, ಚಿತ್ರದಲ್ಲಿ ಗರ್ಭಿಣಿಯೊಬ್ಬಳ ಹೊಟ್ಟೆಯ ಕ್ಲೋಸ್‌ಅಪ್ ಶಾಟ್ ನೆನಪಿಸಿಕೊಂಡ ಸ್ವರಾ, "ಲೈಂಗಿಕ ದೌರ್ಜನ್ಯದ ಬೆದರಿಕೆಗೆ ಹೆದರಿ ಹೆಣ್ಣು ಭ್ರೂಣಕ್ಕೇ ಜೀವಿಸುವ ಹಕ್ಕನ್ನು ನಿರಾಕರಿಸಬೇಕೇ?" ಎಂಬ ಗಂಭೀರ ಪ್ರಶ್ನೆ ಮೂಡಿಸಿತು ಎಂದಿದ್ದಾರೆ. ತಾವು ತಕ್ಷಣವೇ ಕೋಪದಿಂದ ಪತ್ರ ಬರೆಯಲಿಲ್ಲ, ಬದಲಿಗೆ 5 ದಿನಗಳ ಕಾಲ ಆಲೋಚಿಸಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾಗಿ ತಿಳಿಸಿದ ಅವರು, ತಮ್ಮ ಪತ್ರದಲ್ಲಿದ್ದ "ಐ ಫೆಲ್ಟ್ ಲೈಕ್ ಎ ವಜೈನ" (I felt like a vagina) ಎಂಬ ಸಾಲು ಭಾರಿ ಸದ್ದು ಮಾಡಿ, ಮಹಿಳೆಯರು ಕೇವಲ ದೇಹಕ್ಕಿಂತ ಮಿಗಿಲಾದವರು ಎಂಬ ತಮ್ಮ ಮೂಲ ಉದ್ದೇಶವನ್ನು ಮರೆಮಾಚಿತು ಎಂದು ವಿಷಾದಿಸಿದರು.
ಸ್ವರಾ ಅವರ ಈ ಹೇಳಿಕೆಯ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಯ ವಿರುದ್ಧ ಮುಗಿಬಿದ್ದಿದ್ದಾರೆ. ನಟಿ ಜೋಹಾರ್ ಪದ್ಧತಿಯ ಐತಿಹಾಸಿಕ ಹಿನ್ನೆಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. 'ಒಂದು ವೇಳೆ ಖಿಲ್ಜಿಯ ಕಾಲದಲ್ಲಿ ಸ್ವರಾ ಭಾಸ್ಕರ್ ಇದ್ದಿದ್ದರೆ, ಅಲ್ಲಾವುದ್ದೀನ್ ಖಿಲ್ಜಿಯೇ ಸ್ವತಃ ಜೋಹಾರ್ ಮಾಡಿಕೊಳ್ಳುತ್ತಿದ್ದ' ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಬ್ಬ ಯೂಸರ್, 'ಅಪಾರ ಕ್ರೌರ್ಯದ ಎದುರು ಜೋಹಾರ್ ಎಂಬುದು ಅಪ್ರತಿಮ ಶೌರ್ಯದ ಸಂಕೇತ. ಲೈಂಗಿಕ ದೌರ್ಜನ್ಯದ ಸಂತ್ರಸ್ತೆಗೂ, ಅಕ್ರಮಣಕಾರರ ಕೈಗೆ ಸಿಗದೆ ಜೋಹಾರ್ ಆಯ್ಕೆ ಮಾಡಿಕೊಂಡ ಮಹಿಳೆಯರಿಗೂ ಹೋಲಿಕೆ ಮಾಡುವುದು ತಪ್ಪು' ಎಂದು ಬರೆದುಕೊಂಡಿದ್ದಾರೆ.
"ಅಕ್ರಮಣಕಾರರಿಗೆ ಶರಣಾಗುವುದಕ್ಕಿಂತ ಸಾವು ಲೇಸು ಎಂದು ಸ್ವಇಚ್ಛೆಯಿಂದ ಸಾವು ಅಪ್ಪಿದ ಮಹಿಳೆಯರ ಸ್ಥಿತಿಯನ್ನು ಪ್ರಸ್ತುತ ಪರಿಸ್ಥಿತಿಗೆ ಹೋಲಿಸುವುದು ಕೇವಲ 'ವೋಕ್' (Woke) ಮನಸ್ಥಿತಿಯಷ್ಟೇ," ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಪ್ರತಿಕ್ರಿಯೆಗಳು ನಟಿಯ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸಿಕೊಂಡು ನಿಂದಿಸುವ ಹಂತಕ್ಕೂ ತಲುಪಿವೆ.
ಚಿತ್ರದ ಕೊನೆಯ ಹಂತದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯ ಚಿತ್ತೋರ್‌ಗಢವನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿದಾಗ, ನಟಿ ದೀಪಿಕಾ ಪಡುಕೋಣೆ (ರಾಣಿ ಪದ್ಮಿನಿದೇವಿ) ನೇತೃತ್ವದಲ್ಲಿ ನೂರಾರು ರಾಜಪೂತ ಮಹಿಳೆಯರು ಅಗ್ನಿಕುಂಡಕ್ಕೆ ಹಾರಿ ಜೋಹಾರ್ ಮಾಡಿಕೊಳ್ಳುವ ದೃಶ್ಯವನ್ನು ಬನ್ಸಾಲಿ ಭವ್ಯವಾಗಿ ಚಿತ್ರಿಸಿದ್ದರು. ಇದನ್ನು ಗೌರವ ಮತ್ತು ಪ್ರತಿರೋಧದ ಸಂಕೇತವಾಗಿ ಸಿನಿಮಾದಲ್ಲಿ ತೋರಿಸಲಾಗಿತ್ತು. ಆದರೆ ಸ್ವರಾ ಭಾಸ್ಕರ್ ಅವರ ಪುನರಾವರ್ತಿತ ಹೇಳಿಕೆಗಳು ಈಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಪರ-ವಿರೋಧದ ದೊಡ್ಡ ಅಲೆಯನ್ನೇ ಎಬ್ಬಿಸಿವೆ.
Swara Bhaskar speaks about her letter to filmmaker Sanjay Leela Bhansali on the scene of Jauhar in the movie Padmavat pic.twitter.com/6X4Z0SvFtC
— Yeshi Seli (@YeshiSeli) August 31, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.