ಜೂನ್ ತಿಂಗಳಲ್ಲಿ ಮದುವೆಯಾದ ಕಾಲಿವುಡ್ ಸ್ಟಾರ್ ನಯನತಾರ ಹಾಗೂ ಚಿತ್ರ ನಿರ್ದೇಶಕ ವಿಘ್ನೇಶ್ ಅವಳಿ ಗಂಡು ಮಕ್ಕಳ ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಚೆನ್ನೈ(ಅ.09): ಸೌತ್ ಸ್ಟಾರ್ ನಯನತಾರಾ ಜೂನ್ ತಿಂಗಳಲ್ಲಿ ಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿದ್ದರು. ಇದೀಗ ನಾಲ್ಕು ತಿಂಗಳಿಗೆ ಮುದ್ದಾದ ಅವಳಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಇತ್ತೀಚೆಗೆ ಪತಿ ವಿಘ್ನೇಶ್ ಶಿವನ್ ಈ ಕುರಿತು ಸೂಚನೆ ನೀಡಿದ್ದರು. ನಯನತಾರಾ ತಾಯಿಯಾಗುತ್ತಿರುವ ಸೂಚನೆಯನ್ನು ಪರೋಕ್ಷವಾಗಿ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು. ಇದೀಗ ಅವಳಿ ಗಂಡು ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಅವಳಿ ಗಂಡು ಮಕ್ಕಳ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ನಯನಾ ಹಾಗೂ ನಾನು ಅಮ್ಮ ಅಪ್ಪ ಆಗಿದ್ದೇವೆ. ಅವಳಿ ಗಂಡು ಮಕ್ಕಳನ್ನು ಪಡೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ನಮ್ಮೆಲ್ಲರ ಪಾರ್ಥನೆ, ಪೂರ್ವಜರ ಆಶೀರ್ವಾದ, ಎಲ್ಲ ಶುಭಕೋರಿಕೆ ಅವಳಿ ಮಕ್ಕಳ ರೂಪದಲ್ಲಿ ನಮಗೆ ಸಿಕ್ಕಿದೆ. ನಮ್ಮ ಉಸಿರ ಹಾಗೂ ವಿಶ್ವಕ್ಕೆ ನಿಮ್ಮೆಲ್ಲ ಆಶೀರ್ವಾದ ಬೇಕು. ನಿಮ್ಮ ಆಶೀರ್ವಾದದಿಂದ ನಮ್ಮ ಜೀವನ ಪ್ರಕಾಶಮಾನವಾಗಿ ಹಾಗೂ ಸುಂದರವಾಗಲಿದೆ ಎಂದು ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ನಯನತಾರಾ ಕಡೆಯಿಂದ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿ; ನಟನೆಗೆ ಗುಡ್ ಬೈ ಹೇಳ್ತಾರಾ ಲೇಡಿ ಸೂಪರ್ ಸ್ಟಾರ್?
ನಯನ್ ತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಇದೀಗ ನಯನ್ ತಾರಾ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದಿತ್ತು ಅದ್ಧೂರಿ ಮದುವೆ
ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9 ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾಗಿದ್ದರು. ಕಳೆದ 7 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ವಿಘ್ನೇಶ್ ಹಾಗೂ ನಯನತಾರಾ ವಿವಾಹ ಸಮಾರಂಭದ ಫೋಟೋವನ್ನು ಟ್ವೀಟ್ ಮಾಡಿದ್ದರು. ಪಂಚತಾರಾ ಹೊಟೆಲ್‌ನಲ್ಲಿ ಇವರ ಮದುವೆ ನಡೆದಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಿರ್ದೇಶಕ ಮಣಿರತ್ನಂ, ಆಟ್ಲಿ, ರಜನೀಕಾಂತ್, ಶಾರುಖ್‌ಖಾನ್, ಚಿರಂಜೀವಿ, ಕಮಲ್ ಹಾಸನ್, ಸಮಂತಾ ರುಥ್ ಪ್ರಭು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮದುವೆ ಬಳಿಕ ಸುತ್ತಿಕೊಂಡಿತ್ತು ಕೆಲ ವಿವಾದ
ನವ ದಂಪತಿಯಾದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ವಿವಾಹ ಸಮಾರಂಭದ ನಂತರ ದೇವರ ಆಶೀರ್ವಾದ ಪಡೆಯಲು ತಿರುಪತಿಗೆ ತೆರಳಿ, ದೇಗುಲದ ನಿಯಮವೊಂದನ್ನು ಉಲ್ಲಂಘಿಸಿದ್ದರು. ತಿರುಮಲ ತಿರುಪತಿ ದೇವಾಲಯದ ಆವರಣದ ‘ಮಾಡಾ ಬೀದಿ’ಯಲ್ಲಿ ಚಪ್ಪಲಿ ಧರಿಸುವುದು ನಿಷಿದ್ಧವಾದರೂ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಯನತಾರಾ ಹಾಗೂ ವಿಘ್ನೇಶ್ ಮದುವೆ ಪ್ರಸಾರ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿತ್ತು. ಬಳಿಕ ನೆಟ್‌ಫ್ಲಿಕ್ಸ್ ಹಿಂದೆ ಸರಿಯುವ ಮೂಲಕ ಹೊಸ ವಿವಾದ ಸೃಷ್ಟಿಸಿತ್ತು. ಕೊನೆಗೆ ವಿವಾದ ಬಗೆಹರಿದು ಒಟಿಟಿಯಲ್ಲಿ ನಯನತಾರಾ ಮದುವೆ ಸಮಾರಂಭ ಪ್ರಸಾರವಾಗಿತ್ತು.