
ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರು ( Sonam Wangchuk ) ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೋಮವಾರ, ಜುಲೈ 13 ರಂದು 16ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಬೆಂಬಲಿಗರಲ್ಲಿ ಆತಂಕ ಹೆಚ್ಚಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಭಾನುವಾರ ಹಂಚಿಕೊಂಡ ಹೆಲ್ತ್ ಅಪ್‌ಡೇಟ್ ಪ್ರಕಾರ, ವಾಂಗ್‌ಚುಕ್ ಅವರ ರಕ್ತದೊತ್ತಡ 104/66 mm Hg ಗೆ ಇಳಿದಿದೆ. ಉಪವಾಸ ಆರಂಭವಾದಾಗಿನಿಂದ ಅವರು ಒಟ್ಟು 7.8 ಕೆ.ಜಿ ತೂಕ ಕಳೆದುಕೊಂಡಿದ್ದಾರೆ.
ಅಭಿಜೀತ್ ದೀಪ್ಕೆ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಸೋನಮ್ ಉಪವಾಸ ಸತ್ಯಾಗ್ರಹದ 16ನೇ ದಿನ. ದಯವಿಟ್ಟು ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬೇಡಿ, ಇಲ್ಲಿ ಮನುಷ್ಯನ ಜೀವದ ಪ್ರಶ್ನೆ ಇದೆ. ತಪ್ಪನ್ನು ಒಪ್ಪಿಕೊಳ್ಳುವುದು ದೌರ್ಬಲ್ಯದ ಸಂಕೇತವಲ್ಲ. ಅದು ಪ್ರಬುದ್ಧತೆ, ಜವಾಬ್ದಾರಿ ಮತ್ತು ತಿದ್ದಿಕೊಳ್ಳುವ ಇಚ್ಛೆಯ ಸಂಕೇತ. ನಾವು ಕೇಳುತ್ತಿರುವುದು ಕೇವಲ ಉತ್ತರದಾಯಿತ್ವ ಅಷ್ಟೇ" ಎಂದು ಅವರು ಬರೆದುಕೊಂಡಿದ್ದಾರೆ.
ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ದೋಷಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ವಾಂಗ್‌ಚುಕ್ ಕೈಜೋಡಿಸಿದ್ದಾರೆ. ಈ ರಾಜಕೀಯ ಗುಂಪು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದೆ. ವರದಿಗಳ ಪ್ರಕಾರ, ಲಡಾಖ್‌ಗೆ ರಾಜ್ಯದ ಸ್ಥಾನಮಾನ, ಆರನೇ ಶೆಡ್ಯೂಲ್‌ನಡಿ ಸಂರಕ್ಷಣೆ ಹಾಗೂ ಅಲ್ಲಿನ ಪರಿಸರ ಮತ್ತು ಸಂಸ್ಕೃತಿಗೆ ಹೆಚ್ಚಿನ ರಕ್ಷಣೆ ನೀಡಬೇಕೆಂಬ ಬೇಡಿಕೆಗಳೂ ಈ ಹೋರಾಟದ ಭಾಗವಾಗಿವೆ. ಹೀಗಾಗಿ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಹೊಣೆಗಾರಿಕೆ ಮತ್ತು ಲಡಾಖ್‌ನ ಬಹುಕಾಲದ ರಾಜಕೀಯ ಬೇಡಿಕೆಗಳು, ಹೀಗೆ ಎರಡು ಪ್ರತ್ಯೇಕ ವಿಷಯಗಳು ಒಂದೇ ವೇದಿಕೆಯಲ್ಲಿ ಸೇರಿಕೊಂಡಿವೆ.
ವಾಂಗ್ಚುಕ್ ಅವರು 2026ರ ಜೂನ್ 28, ಭಾನುವಾರದಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಅವರಿಗೆ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಯುವಜನರ ವಿಡಂಬನಾತ್ಮಕ ಗುಂಪು ಬೆಂಬಲ ನೀಡಿದೆ. ಔಟ್‌ಲುಕ್ ವರದಿ ಪ್ರಕಾರ, ಈ ಅಭಿಯಾನವು ಸಚಿವ ಪ್ರಧಾನ್ ಅವರ ವಿರುದ್ಧವಾಗಿದೆ. CJP ಸಂಘಟನೆಯು ಜೂನ್ 20 ರಿಂದಲೇ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಡೆಕ್ಕನ್ ಕ್ರಾನಿಕಲ್ಸ್ ಪ್ರಕಾರ, ಈ ಪ್ರತಿಭಟನೆಯಲ್ಲಿ ನೂರಾರು ಯುವಕರು, ಸಮಾಜ ಸೇವಕರು ಮತ್ತು ಕೆಲವು ರೈತ ಮುಖಂಡರು ಭಾಗವಹಿಸಿದ್ದರು. ಪ್ರತಿಭಟನೆ ಆರಂಭಿಸುವ ಮೊದಲು, CJP ಸಂಸ್ಥಾಪಕ ದೀಪ್ಕೆ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದ್ದರು.
ವಾಂಗ್ಚುಕ್ ಅವರು ಲಡಾಖ್ ಮೂಲದ ಪ್ರಖ್ಯಾತ ಭಾರತೀಯ ಎಂಜಿನಿಯರ್, ಶಿಕ್ಷಣ ಸುಧಾರಕ, ಸಂಶೋಧಕ ಮತ್ತು ಪರಿಸರ ಹೋರಾಟಗಾರ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಬ್ಲಾಕ್‌ಬಸ್ಟರ್ ಬಾಲಿವುಡ್ ಸಿನಿಮಾ '3 ಈಡಿಯಟ್ಸ್'ನಲ್ಲಿ ಬರುವ 'ಫುನ್ಸುಖ್ ವಾಂಗ್ಡು' ಪಾತ್ರಕ್ಕೆ ಇವರೇ ನಿಜ ಜೀವನದ ಸ್ಫೂರ್ತಿ ಎಂದು ವ್ಯಾಪಕವಾಗಿ ಗುರುತಿಸಲಾಗಿದೆ. ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
SECMOL ಪರ್ಯಾಯ ಶಾಲೆಯ ಸ್ಥಾಪನೆ, ನೀರು ಉಳಿಸುವ 'ಐಸ್ ಸ್ತೂಪ' ಎಂಬ ಕೃತಕ ಹಿಮನದಿ ತಂತ್ರಜ್ಞಾನದ ಆವಿಷ್ಕಾರ ಮತ್ತು 2018ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಇವರ ಪ್ರಮುಖ ಸಾಧನೆಗಳಲ್ಲಿ ಸೇರಿವೆ.
ಇವರ ಶಿಕ್ಷಣ ಸುಧಾರಣೆಗಳಲ್ಲಿ 'ಆಪರೇಷನ್ ನ್ಯೂ ಹೋಪ್', 'SECMOL ಕ್ಯಾಂಪಸ್' ಮತ್ತು 'ಪರ್ಯಾಯ ಕಲಿಕೆ' ಸೇರಿವೆ.
ಅವರು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (2018), ರೋಲೆಕ್ಸ್ ಎಂಟರ್‌ಪ್ರೈಸ್ ಪ್ರಶಸ್ತಿ (2016), ಮತ್ತು ಟೆರ್ರಾ ಪ್ರಶಸ್ತಿ (2016) ಪುರಸ್ಕೃತರಾಗಿದ್ದಾರೆ.
ಹಲವಾರು ವರದಿಗಳ ಪ್ರಕಾರ, ವಾಂಗ್‌ಚುಕ್ ಅವರ ವೈಯಕ್ತಿಕ ನಿವ್ವಳ ಆಸ್ತಿ ಸುಮಾರು 75 ಲಕ್ಷ ರೂಪಾಯಿ (INR 7.5 ಮಿಲಿಯನ್) ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರ ಟೈಮ್ಸ್ ಪ್ರಕಾರ, ಅವರು ಲಡಾಖ್‌ನಲ್ಲಿ ಸರಳ, ಪರಿಸರ ಸ್ನೇಹಿ ಜೀವನಶೈಲಿಯನ್ನು ನಡೆಸುತ್ತಾರೆ. ಅವರ ಹೆಚ್ಚಿನ ಗಳಿಕೆಯು ನೇರವಾಗಿ ಅವರ ಶೈಕ್ಷಣಿಕ ಮತ್ತು ಪರಿಸರ ಯೋಜನೆಗಳಿಗೆ ಬಳಕೆಯಾಗುತ್ತದೆ.
ಸೋನಂ ಅವರ ಈ ಹೋರಾಟಕ್ಕೆ ಭಾರತೀಯ ಚಿತ್ರರಂಗದ ಯಾರೊಬ್ಬರೂ ಬೆಂಬಲ ಸೂಚಿಸಿಲ್ಲ. ಇದೇ ವಿಚಾರವಾಗಿ ರೆಡ್ಡಿಟ್‌ನಲ್ಲಿ ಶುರುವಾದ ಚರ್ಚೆಯೊಂದು ಈಗ ವೈರಲ್ ಆಗಿದ್ದು, ನೆಟ್ಟಿಗರು ಸೆಲೆಬ್ರಿಟಿಗಳ ಮೌನವನ್ನು ಪ್ರಶ್ನಿಸುತ್ತಿದ್ದಾರೆ.
ಅಭಿಜಿತ್ ದಿಪ್ಕೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು, "ಸೋನಂ ಸರ್ ಅವರ ಉಪವಾಸ ಸತ್ಯಾಗ್ರಹದ 17ನೇ ದಿನ. ಅವರ ದೇಹದ ಸ್ನಾಯುಗಳು ಕರಗಲು ಆರಂಭಿಸಿದ್ದು, ತೀವ್ರ ನೋವಿನಲ್ಲಿದ್ದಾರೆ. ಎಲ್ಲರಂತೆ ನಾನೂ ಅವರಲ್ಲಿ ಉಪವಾಸ ಕೈಬಿಡುವಂತೆ ಬೇಡಿಕೊಂಡೆ. ಅದಕ್ಕೆ ಅವರು ಶಾಂತವಾಗಿ, 'ನನ್ನ ಉಪವಾಸ ನಿಲ್ಲಿಸಲು ಕೇಳಬೇಡಿ. ಸರ್ಕಾರ ಯಾಕೆ ಒಂದು ಮಾತುಕತೆಗೂ ಸಿದ್ಧವಿಲ್ಲ ಎಂದು ಕೇಳಿ' ಎಂದು ಉತ್ತರಿಸಿದರು," ಎಂದು ಬರೆದುಕೊಂಡಿದ್ದಾರೆ.
ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಸೆಲೆಬ್ರಿಟಿಗಳ ನಿಲುವೇನು?
ರಾಜಕೀಯ ಗೂಂಡಾಗಳು ತಮ್ಮ ಆಸ್ತಿ, ಖ್ಯಾತಿ ಮತ್ತು ಶಾಂತಿಯನ್ನು ಹಾಳು ಮಾಡುತ್ತಾರೆ ಎಂದು ಅವರು ಹೆದರುತ್ತಾರೆ
ತಮಗೆ ಸಂಬಂಧವೇ ಇಲ್ಲದ ವಿಷಯಕ್ಕೆ ಸೆಲೆಬ್ರಿಟಿಗಳು ಯಾಕೆ ದನಿ ಎತ್ತಬೇಕು? ಅವರಲ್ಲಿ ಹೆಚ್ಚಿನವರಿಗೆ ನೀಟ್, ಜೆಇಇ ಅಂದರೇನು ಅಂತಲೇ ಗೊತ್ತಿಲ್ಲ. ಅವರ ಮಕ್ಕಳು ಯಾರೂ ಈ ಪರೀಕ್ಷೆಗಳಿಗೆ ತಯಾರಿ ನಡೆಸುವಷ್ಟು ಸಮರ್ಥರಿಲ್ಲ
ಅವರು ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡು, ನಕಲಿ ಫ್ಯಾಮಿಲಿ ಫೋಟೋಗಳನ್ನು ಪೋಸ್ಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ
ಕೆಲವು ರಾಜಕೀಯ ಮುಖಂಡರು ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಉಪವಾಸ ಕೈಬಿಟ್ಟು ಹೋರಾಟ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. "ಸೋನಂ ಸರ್, ನಿಮ್ಮ ಉಪವಾಸವು ನ್ಯಾಯಕ್ಕಾಗಿ ಹೋರಾಡುತ್ತಿರುವ ದೇಶದ ಯುವಕರನ್ನು ಒಂದುಗೂಡಿಸಿದೆ. ನಿಮ್ಮ ಗುರಿ ತಲುಪಿದೆ. ಸರ್ಕಾರಕ್ಕೆ ನಿಮ್ಮ ಅಥವಾ ಕೋಟ್ಯಂತರ ಯುವಕರ ಜೀವದ ಬಗ್ಗೆ ಕಾಳಜಿಯಿಲ್ಲ. ಆದರೆ ನಿಮ್ಮ ಜೀವ ನಮಗೆ ಮುಖ್ಯ. ದಯವಿಟ್ಟು ಉಪವಾಸ ಕೈಬಿಟ್ಟು ಹೋರಾಟ ಮುಂದುವರಿಸಿ" ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ತಮ್ಮ ಬೆಂಬಲ ಘೋಷಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, "ಶಿವಸೇನೆಯ ಪರವಾಗಿ ನಾವು ಸೋನಂ ವಾಂಗ್ಚುಕ್ ಮತ್ತು ಅಭಿಜಿತ್ ದಿಪ್ಕೆ ಅವರ ಚಳವಳಿಗೆ ನಮ್ಮ ಬೆಂಬಲವನ್ನು ಘೋಷಿಸುತ್ತೇವೆ" ಎಂದು ತಿಳಿಸಿದ್ದಾರೆ.
ಆಮಿರ್ ಖಾನ್ ಅವರು ಇವರ ಜೀವನವನ್ನು ಇಟ್ಟುಕೊಂಡು '3 Idiots' ಸಿನಿಮಾ ಮಾಡಿದರು. 2009ರಲ್ಲಿ ಈ ಸಿನಿಮಾ ರಿಲೀಸ್ ಆಯ್ತು. ಆಮಿರ್ ಖಾನ್, ಆರ್ ಮಾಧವನ್, ಶರ್ಮನ್ ಜೋಶಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 55 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ಬಂದಿತ್ತು, ಆಮೇಲೆ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಹಣ ಮಾಡಿದವರಾರೂ ಈಗ ಇವರ ಬಗ್ಗೆ ಏನೂ ಮಾತನಾಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.