ನ್ಯಾಚುರಲ್ ಸ್ಟಾರ್ ನಾನಿ 'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಲಿರಿಕಲ್ 'ತಿಳಿ ಗಾಳಿಯ ಪಿಸು ಮಾತಿನ' ಸಾಂಗ್ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್‌ನ ಹೆಸರಾಂತ ಗೀತ ರಚನೆಕಾರ ಕವಿರಾಜ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ (Nani) 'ಶ್ಯಾಮ್ ಸಿಂಗಾ ರಾಯ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಟೀಸರ್ (Teaser) ಈಗಾಗಲೇ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ನಾನಿ ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು ಸಿನಿರಸಿಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇದೀಗ ಚಿತ್ರದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. 'ತಿಳಿ ಗಾಳಿಯ ಪಿಸು ಮಾತಿನ' (Thili Gaaliya) ಎಂಬ ಲವ್ ಸಾಂಗ್ ಸರಿಗಮ ಕನ್ನಡ ಯೂಟ್ಯೂಬ್ (Youtube) ಚಾನೆಲ್‌ನಲ್ಲಿ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಹೆಸರಾಂತ ಗೀತ ರಚನೆಕಾರ ಕವಿರಾಜ್ (Kaviraj) ಅವರು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
'ತಿಳಿ ಗಾಳಿಯ' ಹಾಡಿಗೆ ಮಿಕ್ಕಿ ಜೆ ಮೆಯರ್ (Mickey J Meyer) ಸಂಗೀತ ಸಂಯೋಜಿಸಿದ್ದು, ಗಾಯಕ ನಕುಲ್ ಅಭಯಂಕರ್ (Nakul Abhyankar) ದನಿಯಾಗಿದ್ದಾರೆ. ಈ ಲಿರಿಕಲ್ ವಿಡಿಯೋದಲ್ಲಿ ನಾನಿ ಹಾಗೂ ಸಾಯಿ ಪಲ್ಲವಿ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಹಾಗೂ ಸಿನಿಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಮುಖ್ಯವಾಗಿ ಇತ್ತೀಚೆಗೆ ನಿಧನರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳು (Sirivennela Seetharama Sastry) ಕೊನೆಯದಾಗಿ ಈ ಹಾಡಿಗೆ ತೆಲುಗಿನಲ್ಲಿ ಸಾಹಿತ್ಯ ರಚಿಸಿದ್ದಾರೆ. ಈ ಬಗ್ಗೆ ಕವಿರಾಜ್ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
Shyam Singha Roy ಟೀಸರ್ ರಿಲೀಸ್: ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಾನಿ
ಇದೊಂದು ಚಂದದ ಹಾಡಿಗೆ ಕಿವಿಯಾಗಿ ಮುಂಜಾನೆ ಮತ್ತಷ್ಟು ಮಧುರವಾಗಲಿ. 'ಶ್ಯಾಂ ಸಿಂಗಾ ರಾಯ್'' ಚತುರ್ಭಾಷಾ ಸಿನಿಮಾದ ಹಾಡಿದು. ಮೊನ್ನೆಯಷ್ಟೇ ನಿಧನರಾದ 'ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ' ಅವರು ಇದರ ತೆಲುಗು ಸಾಹಿತ್ಯ ಬರೆಯುತ್ತಿರುವಾಗ ನಾನು ಇದರ ಕನ್ನಡ ಸಾಹಿತ್ಯ ಬರೆಯುತ್ತಿದ್ದೆ . ಹಾಡು ಕೊನೆ ಹಂತದಲ್ಲಿ ಇರುವಾಗಲೇ ಇದೇ ಅವರ ಕೊನೆಯ ಹಾಡಾಯಿತು, ಅವರು ಇನ್ನಿಲ್ಲ ಎಂಬ ವಿಷಾದನೀಯ ಸುದ್ದಿ ತಲುಪಿತು. ಸುಮಾರು 35 ವರ್ಷಗಳ ಕಾಲ ತೆಲುಗು ಸಿನಿಮಾ ಸಾಹಿತ್ಯ ಲೋಕದ ಅನಭಿಷಿಕ್ತ ದೊರೆಯಂತೆ ಬರೆದು ಬದುಕಿದ 'ಪದ್ಮಶ್ರೀ' ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳ ಕೊನೆಯ ಹಾಡಿನಲ್ಲಿ ಹೇಗೋ ಪರೋಕ್ಷವಾಗಿ ಒಂದು ಸಣ್ಣ ತಂತುವಿನಲ್ಲಿ ಕನೆಕ್ಟ್ ಆಗಿದ್ದಷ್ಟೇ ನನ್ನ ಪಾಲಿಗೆ ಬಂದಿದ್ದು. ಈ ಹಾಡು ಆ ಮಹನೀಯರಿಗೆ ಅರ್ಪಣೆ ಎಂದು ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳ ಬಗ್ಗೆ ಕವಿರಾಜ್ ಬರೆದುಕೊಂಡಿದ್ದಾರೆ.
ಈ ಹಿಂದೆ 'ದಿ ಎಂಡ್' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಟ್ಯಾಕ್ಸಿವಾಲಾ' ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕ್ರಿತ್ಯಾನ್ (Rahul Sankrithyan) 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ಬೋಯನಪಲ್ಲಿ (Venkat Boyanapalli) ಚಿತ್ರವನ್ನು ನಿರ್ಮಿಸಿದ್ದು, 2017ರಲ್ಲಿ ತೆರೆಕಂಡ 'ಮಿಡಲ್ ಕ್ಲಾಸ್ ಅಬ್ಬಾಯ್' ಚಿತ್ರದ ನಂತರ ಈ ಚಿತ್ರದಲ್ಲಿ ನಾನಿ ಜೊತೆಗೆ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಅವರೊಂದಿಗೆ ಕೃತಿ ಶೆಟ್ಟಿ (Krithi Shetty), ಮಡೋನ್ನಾ ಸೆಬಾಸ್ಟಿಯನ್ (Madonna Sebastian), ಮುರಳಿ ಶರ್ಮಾ, ಅಭಿನವ್ ಗೋಮತಮ್, ರಾಹುಲ್ ರವೀಂದ್ರನ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
OTTಯಲ್ಲಿ ಬಿಡುಗಡೆ; ನಟ ನಾನಿ ಚಿತ್ರಗಳು ಚಿತ್ರಮಂದಿರಗಳಲ್ಲಿ ಬ್ಯಾನ್!
ಸಸ್ಪೆನ್ಸ್ ಥ್ರಿಲ್ಲರ್‌ನ ಈ ಚಿತ್ರಕ್ಕೆ ಸತ್ಯದೇವ್ ಜಂಗ (Satyadev Janga) ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟೈನ್‌ಮೆಂಟ್ (Niharika Entertainment) ಬ್ಯಾನರ್‌ನಡಿಯಲ್ಲಿ ಸಿನಿಮಾ ತಯಾರಾಗಿದೆ. ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.