
ಬೆಂಗಳೂರು (ಮೇ.29): ‘ನಾನು ಕಮಲ್ ಹಾಸನ್ ಅವರನ್ನು ಮೊದಲ ಸಲ ಭೇಟಿಯಾದಾಗ ಅವರು ಶೇಕ್ ಹ್ಯಾಂಡ್ ಕೊಟ್ಟರು. ನಾನು ಹಗ್ ಸಿಗಬಹುದಾ ಅಂತ ಕೇಳಿದೆ. ಕಮಲ್ ಅಪ್ಪುಗೆ ನೀಡಿದರು. ಇದಾದ ಮೇಲೆ ನಾನು 3 ದಿನ ಸ್ನಾನ ಮಾಡಿರಲಿಲ್ಲ’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮಾತನಾಡಿದರು.
‘ನನ್ನ ಬಾಲ್ಯದ ದಿನಗಳಲ್ಲಿ ನಾನು ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅದೊಂದು ಬಾರಿ ಅವರು ನಮ್ಮ ಮನೆಗೆ ಬರುವ ಸಂದರ್ಭ ಬಂತು. ತಂದೆ ಡಾ.ರಾಜ್ ಕುಮಾರ್ ಅವರೊಂದಿಗೆ ಕಮಲ್ ಅವರು ಒಂದಿಷ್ಟು ಹೊತ್ತು ಮಾತನಾಡಿದರು. ನಾನಾಗ ಎವೆ ಮುಚ್ಚದಂತೆ ಕಮಲ್ ಅವರನ್ನೇ ನೋಡುತ್ತಿದ್ದೆ. ತಂದೆ ಕಮಲ್ ಅವರಿಗೆ ನನ್ನನ್ನು ಪರಿಚಯಿಸಿದರು. ಆ ಹೊತ್ತಿಗೆ ಅವರು ತಬ್ಬಿಕೊಂಡಾಗ ನಾನು ಅವರ ದೇಹದ ಪರಿಮಳವನ್ನು ಎಂಜಾಯ್ ಮಾಡಿದ್ದೆ. ಅವರ ದೇಹದ ಪರಿಮಳ ಹೋಗಬಾರದು ಅನ್ನುವ ಕಾರಣಕ್ಕೆ ಮೂರು ದಿನ ಸ್ನಾನ ಮಾಡಿರಲಿಲ್ಲ.
ನಾನು ಅವರ ಅಷ್ಟು ದೊಡ್ಡ ಅಭಿಮಾನಿ. ಕಮಲ್ ಅವರ ಸಿನಿಮಾಗಳನ್ನು ಮೊದಲ ದಿನ ಮೊದಲ ಶೋ ಅನ್ನೇ ನೋಡುತ್ತಿದ್ದೆ’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಸರ್ಜರಿಗಾಗಿ ಮಿಯಾಮಿಯಲ್ಲಿದ್ದೆ. ಕಮಲ್ ಸರ್ ನನಗೆ ಕರೆ ಮಾಡಿ ಕುಶಲ ವಿಚಾರಿಸಿದರು. ಆ ಸಮಯ ಅವರು ಶಿಕಾಗೋದಲ್ಲಿದ್ದರು. ಅವರ ಆ ಕರೆ ನನಗೆ ಬಹಳ ಖುಷಿ ಕೊಟ್ಟಿತು’ ಎಂದೂ ಹೇಳಿದರು.
ಕನ್ನಡ ಹುಟ್ಟಿದ್ದೇ ತಮಿಳಿನಿಂದ: ಜೂ.5ರಂದು ಬಿಡುಗಡೆಯಾಗುತ್ತಿರುವ ತಮ್ಮ ‘ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಮಲ್, ‘ಕನ್ನಡ ಹುಟ್ಟಿರುವುದು ತಮಿಳು ಭಾಷೆಯಿಂದ’ ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಿದಾಗ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಕೂಡ ಉಪಸ್ಥಿತರಿದ್ದರು. ನಟನ ಹೇಳಿಕೆಗೆ ತಮಿಳಿಗರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಇದರಿಂದ ಕ್ರೋಧಿತರಾಗಿರುವ ಕನ್ನಡಿಗರು, ‘ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆ’ ಎಂದು ಹಾಸನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.