
ಬೆಂಗಳೂರಿಗೆ ಬಂದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್! ಕನ್ನಡಿಗರ ಜೊತೆ ಮಸ್ತ್ ಪಾರ್ಟಿ, ಸ್ಯಾಂಡಲ್ ವುಡ್ ತಾರೆಯರ ಭೇಟಿ!
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ಅವರಿಗೆ ಪ್ರಪಂಚದಾದ್ಯಂತ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದೀಗ ಅವರ ಪುತ್ರ ಆರ್ಯನ್ ಖಾನ್ (Aryan Khan) ಸರದಿ. ಸಾಮಾನ್ಯವಾಗಿ ಕ್ಯಾಮೆರಾ ಕಣ್ಣುಗಳಿಂದ ದೂರವಿರುವ ಮತ್ತು ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಆರ್ಯನ್ ಖಾನ್, ಕಳೆದ ವಾರಾಂತ್ಯದಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿನ ಸಿನಿ ಪ್ರಿಯರಲ್ಲಿ ಮತ್ತು ಪಾರ್ಟಿ ಪ್ರಿಯರಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಂಬೈನಿಂದ ನೇರವಾಗಿ ವಿಮಾನ ಏರಿ ಬೆಂಗಳೂರಿಗೆ ಬಂದಿಳಿದ ಆರ್ಯನ್ ಖಾನ್‌ಗೆ ಸಿಕ್ಕ ಸ್ವಾಗತವೇನು ಸಾಮಾನ್ಯವಾದದ್ದಲ್ಲ. ಸಾಕ್ಷಾತ್ ಶಾರುಖ್ ಖಾನ್ ಅವರಿಗೆ ಸಿಗುವಂತೆಯೇ ಅದ್ದೂರಿಯಾದ ಮತ್ತು ಅಭಿಮಾನದ ಸ್ವಾಗತ ಆರ್ಯನ್ ಅವರಿಗೂ ದೊರೆಯಿತು. ನಗರದ ಪ್ರಮುಖ ಮತ್ತು ಜನಪ್ರಿಯ ನೈಟ್ ಸ್ಪಾಟ್ (Night Spot) ಒಂದಕ್ಕೆ ವಿಶೇಷ ಅತಿಥಿಯಾಗಿ ಆರ್ಯನ್ ಆಗಮಿಸಿದ್ದರು. ಮೂಲಗಳ ಪ್ರಕಾರ, ಆರ್ಯನ್ ಖಾನ್ ರಾತ್ರಿ ಸರಿಯಾಗಿ 11 ಗಂಟೆಗೆ ಎಂಟ್ರಿ ಕೊಟ್ಟರು. ಸುಮಾರು 12:45 ರವರೆಗೂ ಅಂದರೆ ನಡುರಾತ್ರಿಯವರೆಗೂ ಅಲ್ಲೇ ಇದ್ದು, ಬೆಂಗಳೂರಿನ ನೈಟ್ ಲೈಫ್ ಅನ್ನು ಸವಿದಿದ್ದಾರೆ.
ಇನ್ನು ಆರ್ಯನ್ ಖಾನ್ ಬಂದ ಮೇಲೆ ಅಲ್ಲಿನ ವಾತಾವರಣ ಸುಮ್ಮನಿರುತ್ತದೆಯೇ? ಆ ರಾತ್ರಿ ಕನ್ಸೋಲ್ ನಿರ್ವಹಿಸುತ್ತಿದ್ದ ಪ್ರಖ್ಯಾತ ಡಿಜೆ ಕಿಂಗ್ (DJ King), ಆರ್ಯನ್ ಖಾನ್ ಗೌರವಾರ್ಥವಾಗಿ ಶಾರುಖ್ ಖಾನ್ ಅವರ ಸೂಪರ್ ಹಿಟ್ ಹಾಡುಗಳ ರೀಮಿಕ್ಸ್ ಸೆಟ್ ಅನ್ನು ಪ್ಲೇ ಮಾಡಿದರು. ಎಸ್.ಆರ್.ಕೆ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಅಭಿಮಾನಿಗಳು ಮತ್ತು ಅತಿಥಿಗಳು ಆರ್ಯನ್ ಆಗಮನವನ್ನು ಸಂಭ್ರಮಿಸಿದರು.
ಈ ಪಾರ್ಟಿಯ ವಿಶೇಷವೇನೆಂದರೆ, ಇಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ತಾರೆಯರ ಸಮಾಗಮವಾಯಿತು. ಆರ್ಯನ್ ಖಾನ್ ಅವರನ್ನು ಬರಮಾಡಿಕೊಳ್ಳಲು ಮತ್ತು ಅವರೊಂದಿಗೆ ಸಮಯ ಕಳೆಯಲು ಕನ್ನಡ ಚಿತ್ರರಂಗದ ಯುವ ತಾರೆಯರು ಅಲ್ಲಿ ಹಾಜರಿದ್ದರು. ನಟ ಝೈದ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಆರ್ಯನ್ ಖಾನ್ ಜೊತೆಗಿನ ಈ ವಿಶೇಷ ಸಂಜೆಯಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲರೂ ಒಟ್ಟಿಗೆ ಇರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಶಾರುಖ್ ಕುಟುಂಬಕ್ಕೂ ಬೆಂಗಳೂರಿಗೂ ಇದೆ ಹಳೆಯ ನಂಟು!
ಆರ್ಯನ್ ಖಾನ್ ಬೆಂಗಳೂರಿಗೆ ಬರುವುದು ಹೊಸದೇನಲ್ಲ. ಏಕೆಂದರೆ ಶಾರುಖ್ ಖಾನ್ ಕುಟುಂಬಕ್ಕೂ ನಮ್ಮ ಬೆಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಶಾರುಖ್ ಖಾನ್ ಅವರ ತಾಯಿಯ ಕಡೆಯ ಕುಟುಂಬವು ದಶಕಗಳ ಕಾಲ ಬೆಂಗಳೂರಿನ ನಂದಿ ದುರ್ಗಾ ರಸ್ತೆಯಲ್ಲಿ ವಾಸಿಸುತ್ತಿತ್ತು. ಶಾರುಖ್ ಕೂಡ ತಮ್ಮ ಬಾಲ್ಯದ ರಜಾದಿನಗಳನ್ನು ಇಲ್ಲೇ ಕಳೆದಿದ್ದರು. ಇಂದಿಗೂ ಶಾರುಖ್ ಅವರ ಹತ್ತಿರದ ಸಂಬಂಧಿಕರು ನಮ್ಮ ಬೆಂಗಳೂರಿನಲ್ಲಿದ್ದಾರೆ. ಈಗ ತಂದೆಯ ಹಾದಿಯಲ್ಲೇ ಮಗ ಆರ್ಯನ್ ಕೂಡ ಬೆಂಗಳೂರಿನ ನಂಟನ್ನು ಮುಂದುವರಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
ಒಟ್ಟಾರೆಯಾಗಿ, ಆರ್ಯನ್ ಖಾನ್ ಅವರ ಈ ಸಂಕ್ಷಿಪ್ತ ಭೇಟಿ ಬೆಂಗಳೂರಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ನಿರ್ದೇಶಕರಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗುತ್ತಿರುವ ಆರ್ಯನ್, ಮುಂದಿನ ದಿನಗಳಲ್ಲಿ ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿಯೂ ಬೆಂಗಳೂರಿಗೆ ಬಂದರೆ ಅಚ್ಚರಿಯಿಲ್ಲ. ಎಲ್ಲಾ ಓಕೆ, ಆದರೆ.. ತಮ್ಮ ಫ್ಯಾನ್ಸ್‌ಗಳಿಗೆ ಆರ್ಯನ್ ಖಾನ್ ಅವರು ಮಧ್ಯದ ಬೆರಳು ತೋರಿಸಿದ ಘಟನೆ ಮಾತ್ರ ಅವರ ಪಾಲಿಗೆ ಯಾವತ್ತೂ ಕಪ್ಪುಚುಕ್ಕೆ ಆಗಬಹುದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.