'ಸೋನಮ್‌, ಇಟ್ಸ್‌ ಡನ್‌ ಬ್ರೋ' ವಾಂಗ್ಚುಕ್‌ಗೆ ಸಲ್ಲು ಮನವಿ; ವಿದ್ಯಾರ್ಥಿಗಳಿಗೆ ಪ್ರತಿಭಟನೆ ಅಂತ್ಯಗೊಳಿಸಲು ಹೇಳಿದ ಸಲ್ಮಾನ್‌ ಖಾನ್‌

Published : Jul 23, 2026, 10:05 PM IST
Salman Khan

ಸಾರಾಂಶ

ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಪ್ರಧಾನಿಯವರೇ ಭರವಸೆ ನೀಡಿರುವುದರಿಂದ ಹೋರಾಟವನ್ನು ಅಂತ್ಯಗೊಳಿಸುವಂತೆ ವಾಂಗ್ಚುಕ್ ಅವರಿಗೆ ಮನವಿ ಮಾಡಿದ್ದಾರೆ.

ಮುಂಬೈ (ಜು.23): ದೇಶಾದ್ಯಂತ ಸದ್ದು ಮಾಡುತ್ತಿರುವ 'ನೀಟ್' ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ತಮ್ಮ ಸುದೀರ್ಘ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ ಅಂತ್ಯಗೊಳಿಸುವಂತೆ ವಾಂಗ್ಚುಕ್ ಅವರಿಗೆ ಮನವಿ ಮಾಡಿರುವ ಸಲ್ಮಾನ್, ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ಮರಳುವಂತೆ ವಿನಂತಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಹಾಗೂ ಅಪರಾಧಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪ್ರಧಾನಿಯವರೇ ಭರವಸೆ ನೀಡಿರುವಾಗ ಹೋರಾಟವನ್ನು ಮತ್ತಷ್ಟು ಸುದೀರ್ಘಗೊಳಿಸುವುದು ಬೇಡ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ.

"ಸೋನಮ್, ನಿಮಗಾಗಿ ಮನೆಯಿಂದಲೇ ಊಟ ಕಳುಹಿಸಿಕೊಡುವೆ!"

"ಸೋನಮ್, ಹೋರಾಟ ಸಾಕು ಬ್ರೋ (It's done, bro). ಇದನ್ನು ಇನ್ನಷ್ಟು ಮುಂದುವರಿಸಬೇಡಿ. ಮುಂದೆ ಎಂದಾದರೂ ಅಗತ್ಯಬಿದ್ದರೆ ಈ ಹೋರಾಟದ ಕಿಚ್ಚನ್ನು ಕಾಯ್ದುಕೊಳ್ಳಿ, ಸದ್ಯಕ್ಕೆ ಏನನ್ನಾದರೂ ಸೇವಿಸಿ ಉಪವಾಸ ಅಂತ್ಯಗೊಳಿಸಿ. ನಿಮಗೇನಾದರೂ ಬೇಕಿದ್ದರೆ, ನನ್ನ ಮನೆಯಿಂದಲೇ ಊಟವನ್ನು ಕಳುಹಿಸಿಕೊಡುತ್ತೇನೆ," ಎಂದು ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಲಡಾಖ್‌ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸಬೇಕು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಆಗ್ರಹಿಸಿ ಜೂನ್ 28 ರಿಂದ ನಿರಂತರ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳೇ ದೇಶದ ಮೊದಲ ಆದ್ಯತೆ

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಭದ್ರತೆಯ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಸಲ್ಮಾನ್ ಖಾನ್, ವಿದ್ಯಾರ್ಥಿಗಳು ಈ ದೇಶದ ಪ್ರಮುಖ ಆದ್ಯತೆಯಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಾಗಲಿ ಅಥವಾ ಅವರ ಪೋಷಕರಾಗಲಿ ಆತಂಕಪಡುವ ಅಗತ್ಯವಿಲ್ಲ. ಗೌರವಾನ್ವಿತ ಪ್ರಧಾನಿಯವರೇ ಸ್ವತಃ ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಅವರು ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ನನಗಿದೆ. ಆದ್ದರಿಂದ ವಿದ್ಯಾರ್ಥಿಗಳು ದಯವಿಟ್ಟು ತಮ್ಮ ಮನೆಗಳಿಗೆ ಹಾಗೂ ಪೋಷಕರ ಬಳಿಗೆ ಹಿಂತಿರುಗಿ ಎಂದು ಕೋರಿದ್ದಾರೆ.

ಈ ಹೋರಾಟ ರಾಜಕೀಯಕ್ಕೆ ಬಳಕೆಯಾಗಬಾರದು

ಇದಕ್ಕೂ ಮುನ್ನ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಸಲ್ಮಾನ್ ಖಾನ್, "ವಿದ್ಯಾರ್ಥಿಗಳು ನಡೆಸುತ್ತಿರುವ ಶಾಂತಿಯುತ ಹೋರಾಟ ಶ್ಲಾಘನೀಯ. ಅವರ ಧೈರ್ಯ ಮೆಚ್ಚುವಂತದ್ದು. ಆದರೆ ಈ ವಿದ್ಯಾರ್ಥಿ ಹೋರಾಟವನ್ನು ಯಾವುದೇ ಕಾರಣಕ್ಕೂ ರಾಜಕೀಯವಾಗಿ ಹೈಜಾಕ್ ಮಾಡಲು ಬಿಡಬಾರದು. ಇದರ ಸಂಪೂರ್ಣ ಶ್ರೇಯಸ್ಸು ದೇಶದ ವಿದ್ಯಾರ್ಥಿಗಳಿಗೇ ಸಲ್ಲಬೇಕು. ಸರ್ಕಾರ ಕೂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಮುಟ್ಟಾಗಿಸಲಿದೆ ಎಂಬ ಭರವಸೆಯಿದೆ. ಸರ್ವರಿಗೂ ಒಳಿತಾಗಲಿ ಎಂದು ಬರೆದುಕೊಂಡಿದ್ದರು.

ಈಗಾಗಲೇ ಈ ವಿದ್ಯಾರ್ಥಿ ಹೋರಾಟಕ್ಕೆ ಓಮಿ ವೈದ್ಯ, ಝೀನತ್ ಅಮನ್, ನಸೀರುದ್ದೀನ್ ಶಾ, ರತ್ನ ಪಾಠಕ್ ಶಾ, ಅಭಯ್ ಡಿಯೋಲ್, ಸೋನಾಕ್ಷಿ ಸಿನ್ಹಾ ಹಾಗೂ ರಿತೇಶ್ ದೇಶ್‌ಮುಖ್ ಅವರಂತಹ ಘಟಾನುಘಟಿ ನಟ-ನಟಿಯರು ಬೆಂಬಲ ಸೂಚಿಸಿದ್ದಾರೆ.

ಕರೇನಾ ಕಪೂರ್, ಮಮ್ಮುಟ್ಟಿ ಹೇಳಿದ್ದೇನು?

ಸಲ್ಮಾನ್ ಖಾನ್ ಬೆನ್ನಲ್ಲೇ ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಮಮ್ಮುಟ್ಟಿ ಕೂಡ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ನಟಿ ಕರೀನಾ ಕಪೂರ್, ನಾನು ಕಳೆದ ಕೆಲವು ದಿನಗಳಿಂದ ಇದನ್ನು ಗಮನಿಸುತ್ತಿದ್ದೇನೆ. ಆದರೆ ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತುತ್ತಿರುವ ಇಷ್ಟೊಂದು ದೊಡ್ಡ ಸಂಖ್ಯೆಯ ಯುವಜನತೆಯ ಕೂಗನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ನಿರ್ಲಕ್ಷಿಸಬಾರದು ಕೂಡ. ಶಿಕ್ಷಣ ಎನ್ನುವುದು ಮಕ್ಕಳಿಗೆ ಭವಿಷ್ಯದ ಭರವಸೆ ನೀಡುತ್ತದೆ. ಆದರೆ ಪ್ರಾಮಾಣಿಕತೆ, ಶ್ರಮ ಮತ್ತು ಅರ್ಹತೆಗೆ ಬೆಲೆಯಿಲ್ಲ ಎಂದು ಅನಿಸಿದ ಕ್ಷಣ ಮಕ್ಕಳು ಈ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಮಕ್ಕಳಿಗೆ ತಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಬೇಕು. ಪ್ರತಿಯೊಬ್ಬ ಮಗುವಿಗೂ ಸಮಾನ ಅವಕಾಶ ಸಿಗುವಂತಹ ಹಾಗೂ ಅವರು ನಂಬಬಹುದಾದ ಪಾರದರ್ಶಕ ವ್ಯವಸ್ಥೆ ನಮಗೆ ಬೇಕಿದೆ. ಇದು ದೊಡ್ಡ ಬೇಡಿಕೆಯೇನಲ್ಲ, ಕನಿಷ್ಠ ಹಕ್ಕು ಎಂದು ಹೇಳಿದ್ದಾರೆ.

ಇನ್ನು ದಕ್ಷಿಣ ಭಾರತದ ನಟ ಮಮ್ಮುಟ್ಟಿ 'ಎಕ್ಸ್' (ಟ್ವಿಟರ್) ತಾಣದಲ್ಲಿ ಬರೆದುಕೊಂಡಿದ್ದು, ನಮ್ಮ ದೇಶದ ಯುವಜನತೆಯೇ ಈ ರಾಷ್ಟ್ರದ ನಿಜವಾದ ಆಸ್ತಿ. ಅವರ ಧ್ವನಿಯನ್ನು ಆಲಿಸಿ, ಅವರನ್ನು ರಕ್ಷಿಸಿ ಮತ್ತು ಸಶಕ್ತಗೊಳಿಸಿ ಎಂದು ಕರೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50 ವರ್ಷಗಳ ಬಳಿಕ ತಮಿಳು ನಾಡಿನಲ್ಲಿ ಇತಿಹಾಸ ಮರುಕಳಿಸಿತು! CM Thalapathy Vijay ಅಂದ್ರೆ ಸುಮ್ನೇನಾ?
Jana Nayagan Movie Review: ಕೊನೇ ಸಿನಿಮಾದಲ್ಲಿ ಸಖತ್ ಮಸಾಲೆ ಕೊಟ್ಟ ದಳಪತಿ ವಿಜಯ್!‌ ಥಿಯೇಟರ್‌ನಲ್ಲಿ ಕುಣಿತ