
ಮುಂಬೈ: ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ತಂದೆ ಸಲೀಂ ಖಾನ್ ಮೇಲೆ ಕೊಲೆ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್ ಅವರಿಗೆ ಭಾನುವಾರ ಕೊಲೆ ಬೆದರಿಕೆ ಪತ್ರ ಬಂದಿತ್ತು. ಅನಾಮಧೇಯ ಪತ್ರವೊಂದು ಬಂದಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ಅಥವಾ ಗುಂಪಿನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ಕೆಲ ಖ್ಯಾತನಾಮರ ವಿರುದ್ಧ ಕೊಲೆ ಬೆದರಿಕೆಗಳು ಬಂದಿದ್ದವು. ಬಾಲಿವುಡ್ ಮತ್ತು ಅಂಡರ್‌ವಲ್ಡ್ ನಡುವೆ ಆಗಾಗ ಇಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಪಂಜಾಬಿ ಗಾಯಕ ಸಿದು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ನೋಯಿ ಕೂಡ ಈ ಹಿಂದೆ ಸಲ್ಮಾನ್ ಖಾನ್ ಕೊಲೆ ಮಾಡಲು ಶೂಟರ್ ಒಬ್ಬನನ್ನು ಕಳಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬೆದರಿಕೆ ಪತ್ರ ಬಂದಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: Threat letter ಸಿಧು ಮೂಸೆವಾಲ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಹಾಗೂ ತಂದೆಗೆ ಬೆದರಿಕೆ ಪತ್ರ!
ವರದಿಗಳ ಪ್ರಕಾರ, ಮಹಾರಾಷ್ಟ್ರ ಗೃಹ ಇಲಾಖೆ ಸಲ್ಮಾನ್ ಖಾನ್ ಭದ್ರತೆಯನ್ನು ದ್ವಿಗುಣಗೊಳಿಸಿದೆ. ಭಾನುವಾರ ಬೆಳಗ್ಗೆ ಜಾಗಿಂಗ್ ಮುಗಿದ ನಂತರ ಸಲ್ಮಾನ್ ಖಾನ್ ಬಾಂದ್ರಾದ ಬ್ಯಾಂಡ್‌ಸ್ಟಾಂಡ್‌ನಲ್ಲಿ ಎಂದಿನಂತೆ ಕುಳಿತಿದ್ದರು. ಈ ವೇಳೆ ಆಗಂತುಕನೊಬ್ಬ ಬಂದು ಅನಾಮಧೇಯ ಪತ್ರವೊಂದನ್ನು ಸಲ್ಮಾನ್ ಖಾನ್‌ಗೆ ಕೊಟ್ಟು ತೆರಳಿದ್ದಾನೆ. ಪತ್ರದಲ್ಲಿ ಸಲ್ಮಾನ್ ಖಾನ್ ಮತ್ತಿ ಸಲೀಂ ಖಾನ್‌ರನ್ನು ಹತ್ಯೆಮಾಡುವ ಬೆದರಿಕೆ ಒಡ್ಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸಲ್ಮಾನ್ ಖಾನ್ ಪ್ರತಿನಿತ್ಯ ಬೆಳಗ್ಗಿನ ಕಸರತ್ತು ಮುಗಿಸಿದ ಮೇಲೆ ಬಾಂದ್ರಾದ ಬ್ಯಾಂಡ್‌ಸ್ಟಾಂಡ್‌ನಲ್ಲಿ ಕೊಂಚ ಹೊತ್ತು ಕುಳಿತಿರುತ್ತಾರೆ. ಇದನ್ನು ಮುಂಚೆಯೇ ಅರಿತಿದ್ದ ವ್ಯಕ್ತಿ ಅಲ್ಲಿಗೆ ಬಂದು ಪತ್ರ ನೀಡಿ ಹೋಗಿದ್ದಾನೆ. ಪತ್ರ ನೀಡಿ ಹೋದವನು ಯಾರು ಎಂಬುದು ಕೂಡ ಪತ್ತೆಯಾಗಿಲ್ಲ.
ಇಂದು ಸಿಬಿಐ ವಿಶೇಷ ತನಿಖಾ ತಂಡವೊಂದು ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಭಾನುವಾರದ ಘಟನೆ ನಂತರ, ಸಲೀಂ ಖಾನ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
ಲಾರೆನ್ಸ್ ಬಿಷ್ನೋಯಿ ಭಯ:
ತಿಹಾರ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ನೋಯಿ ಕೂಡ 2021ರಲ್ಲಿ ಸಲ್ಮಾನ್ ಖಾನ್‌ರನ್ನು ಕೊಲೆ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಸಿಕ್ಕ ನಂತರ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಲಾಗಿತ್ತು. ಗಾಯಕ ಸಿದು ಮೂಸೆಲವಾಲ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಲಾರೆನ್ಸ್ ಬಿಷ್ನೋಯಿ ಈ ಹಿಂದೆ ಸಲ್ಮಾನ್ ಖಾನ್ ಕೊಲೆ ಮಾಡಲು ಶೂಟರ್‌ಗಳನ್ನು ಕಳಿಸಿದ್ದ ಎಂಬ ಸತ್ಯ ಬಿಷ್ನೋಯಿಯೇ ಪೊಲೀಸರಿಗೆ ತಿಳಿಸಿದ್ದಾನೆ.
ಈಗ ಬಂದಿರುವ ಬೆದರಿಕೆಯೂ ಬಿಷ್ನೋಯಿ ಕಡೆಯಿಂದಲೇ ಬಂದಿದೆಯಾ ಅಥವಾ ಬೇರಾವುದಾದರೂ ಭೂಗತಲೋಕದ ಕೈಗಳು ಇದರ ಹಿಂದೆ ಇವೆಯಾ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ. ಒಟ್ಟಿನಲ್ಲಿ ಬಾಲಿವುಡ್‌ನ ಖ್ಯಾತನಾಮರು ಆಗಾಗ ಭೂಗತ ಲೋಕದ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗುತ್ತಿರುವುದು ಸಾಮಾನ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.