
ಇದೇ 15ರಂದು ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಸಿಟಿವಿ ಫುಟೇಜ್ನಲ್ಲಿ ಆರೋಪಿಯ ಮುಖ ಅಷ್ಟು ಚೆನ್ನಾಗಿ ಕಾಣಿಸುತ್ತಿದ್ದರೂ, ಘಟನೆ ನಡೆದಿರುವುದು ಸೆಲೆಬ್ರಿಟಿಯ ಮನೆಯಲ್ಲಿ ಆಗಿದ್ದರೂ, ಪೊಲೀಸರು ನಿಜವಾದ ಆರೋಪಿಯನ್ನು ಹಿಡಿಯುವ ಬದಲು ಅಮಾಯಕರ ಜೀವ ಹಿಂಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಇದಾಗಲೇ 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕನನ್ನು ಅರೆಸ್ಟ್ ಮಾಡಿ ಆತನ ಜೀವನವನ್ನೇ ನರಕದಲ್ಲಿ ತಳ್ಳಿದ್ದಾರೆ ಪೊಲೀಸರು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲಿಸರು ಅರೆಸ್ಟ್ ಮಾಡಿದ್ದರು. ಛತ್ತೀಸ್ಗಢದ ಈ ಯುವಕ ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಅಲ್ಲಿಗೆ ಹೋದಾಗ, ಪೊಲೀಸರು ಅರೆಸ್ಟ್ ಮಾಡಿದ್ದರು. ಆಮೇಲೆ ಆತನಲ್ಲ ಎಂದು ತಿಳಿದು ಬಿಟ್ಟಿರುವ ಕಾರಣ, ಈಗ ಯುವಕನ ಮದುವೆಯೂ ಕ್ಯಾನ್ಸಲ್ ಆಗಿದೆ, ಇದ್ದ ಉದ್ಯೋಗವೂ ಹೋಗಿದೆ. ಇನ್ನೊಬ್ಬನನ್ನು ಹಿಡಿದಿದ್ದು, ಆತ ಅಪರಾಧಿ ಹೌದೋ, ಅಲ್ಲವೋ ಸಾಬೀತಾಗಿಲ್ಲ, ಫಿಂಗರ್ಪ್ರಿಂಟ್ಗಳು ಮ್ಯಾಚ್ ಆಗ್ತಿಲ್ಲ. ಒಟ್ಟಿನಲ್ಲಿ ಎಲ್ಲವೂ ಸೋಜಿಗ ಎನ್ನುವ ನಡುವೆಯೇ, ಅಂದು ನಡೆದ ಘಟನೆಯ ಬಗ್ಗೆ ಇದೇ ಮೊದಲ ಬಾರಿಗೆ ಸೈಫ್ ಅಲಿ ಎಳೆ ಎಳೆಯಾಗಿ ಮಾಹಿತಿ ಹೇಳಿದ್ದಾರೆ. ಇಲ್ಲಿಯವರೆಗೆ ಅಂತೆ-ಕಂತೆಗಳಿಗೆ ಇದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.
ಸೈಫ್ ಅಲಿ ಖಾನ್ ಹೇಳಿದ್ದು ಏನೆಂದರೆ: 'ಘಟನೆ ನಡೆದ ರಾತ್ರಿ ಕರೀನಾ ಹೊರಗೆ ಊಟಕ್ಕೆ ಹೋಗಿ ವಾಪಸಾಗಿದ್ದಳು. ನನಗೆ ಕೆಲಸ ಇದ್ದುದರಿಂದ ಹೋಗಿರಲಿಲ್ಲ. ಅವಳು ವಾಪಸ್ ಬಂದ ಮೇಲೆ ಹೀಗೆ ಮಾತನಾಡುತ್ತಾ ಕುಳಿತಿದ್ದೆವು. ಆ ಬಳಿಕ ಮಲಗಲು ಹೋದೆವು. ಸ್ವಲ್ಪ ಸಮಯದ ನಂತರ, ಮನೆಯ ಸಹಾಯಕರು ಒಳಗೆ ಬಂದು ಒಬ್ಬ ಮನೆಯೊಳಗೆ ನುಗ್ಗಿದ್ದು, ಜೆಹ್‌ನ ಕೋಣೆಯಲ್ಲಿ ಚಾಕು ಹಿಡಿದು ಕುಳಿತಿದ್ದಾನೆ, ಹಣ ಕೇಳುತ್ತಿದ್ದಾನೆ ಎಂದು ಹೇಳಿದರು. ನಮಗೆ ಗಾಬರಿಯಾಯಿತು. ಲಗುಬಗೆಯಿಂದ ಜೆಹ್ ಕೋಣೆಗೆ ಹೋದೆ. ಆ ವ್ಯಕ್ತಿ ಜೆಹ್‌ನ ಹಾಸಿಗೆಯ ಮೇಲೆ ಎರಡು ಕೋಲುಗಳನ್ನು ಇಟ್ಟಿರುವುದನ್ನು ನೋಡಿದೆ. ಇದು ಚೂಪಾದ ಚಾಕುವಿನಂತೆ ಇತ್ತು. ಅವನ ಕೈಯಲ್ಲಿ ಕೂಡ ಚಾಕು ಇತ್ತು. ಮಾಸ್ಕ್ ಹಾಕಿಕೊಂಡಿದ್ದ. ಅದೊಂದು ರೀತಿಯಲ್ಲಿ ದಿಗ್ಭ್ರಮೆ ತರುವ ಸನ್ನಿವೇಶವಾಗಿತ್ತು. ನಾನು ಮುನ್ನುಗ್ಗಿ ಆತನನ್ನು ಎಳೆದೆ. ಇಬ್ಬರ ನಡುವೆ ಫೈಟಿಂಗ್ ನಡೆಯಿತು' ಎಂದು ಸೈಫ್ ಹೇಳಿದರು.
ಸೈಫ್ ಅಲಿ ಇರಿತದ ಕೇಸ್ಗೆ ರೋಚಕ ಟ್ವಿಸ್ಟ್! 'ಅಕ್ರಮ' ಮಹಿಳೆ ಅರೆಸ್ಟ್- ಯಾರೀಕೆ? ಹಿನ್ನೆಲೆ ಏನು?
'ಆತ ನನ್ನನ್ನು ಇರಿದ. ಆದರೆ ಆ ಆಘಾತದಲ್ಲಿ ನನಗೆ ನೋವಾಗಿದ್ದು ತಿಳಿದಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಕುತ್ತಿಗೆಗೆ ಚಾಕುವಿನಿಂದ ಇರಿದ. ನಾನು ಆತನನ್ನು ತಡೆಯುತ್ತಿದ್ದೆ. ಸಹಾಯಕ್ಕೆ ಯಾರಾದರೂ ಬನ್ನಿ ಎಂದು ಕೂಗುತ್ತಿದ್ದೆ. ನಮ್ಮ ಮನೆಯ ಅತ್ಯಂತ ನಂಬಿಕೆಯ ಮನೆಕೆಲಸಗಾರ್ತಿ ಗೀತಾ ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಆಗ ನಾವಿಬ್ಬರೂ ಸ್ವಲ್ಪ ದೂರ ಉರುಳಿ ಬಿದ್ದೆವು. ಆ ಸಮಯದಲ್ಲಿ ನಾನು ರಕ್ತದಲ್ಲಿ ಮುಳುಗಿದ್ದೆ. ಅಷ್ಟಾಗುತ್ತಿದ್ದಂತೆಯೇ ಆತ ತಪ್ಪಿಸಿಕೊಂಡ. ಎಲ್ಲಿ ಹೋದನೋ ತಿಳಿಯಲಿಲ್ಲ. ಮಕ್ಕಳ ಸ್ನಾನಗೃಹಕ್ಕೆ ಹೋಗುವ ಡ್ರೈನ್ ಪೈಪ್ ಮೂಲಕ ಹೋಗಿರುವುದು ತಿಳಿಯಿತು. ಆತ ಅಲ್ಲಿಂದಲೇ ಬಂದಿದ್ದ. ಆದರೆ ಆ ಸಮಯದಲ್ಲಿ ಅವನು ಹೋದನೋ, ಮನೆಯಲ್ಲಿಯೇ ಇದ್ದಾನೋ ತಿಳಿದಿರಲಿಲ್ಲ.
ಮಹಡಿಯಿಂದ ಎಲ್ಲರೂ ಕೆಳಗೆ ಓಡಿದೆವು. ಕರೀನಾ ಬಂದು ಆಸ್ಪತ್ರೆಗೆ ಹೋಗಲು ಏನಾದರೂ ವಾಹನ ಸಿಗುತ್ತದೆಯೋ ಹುಡುಕುತ್ತಿದ್ದಳು. ಆದರೆ ಮನೆಯಲ್ಲಿ ಆ ಕಳ್ಳ ಇದ್ದಿರುವ ಶಂಕೆ ಇದ್ದುದರಿಂದ ಮಕ್ಕಳು ಬಿಟ್ಟು ಹೋಗಲು ಆಗಲಿಲ್ಲ. ಆಗ ಆಟೋ ಸಿಕ್ಕಿತು. ನನ್ನನ್ನು ಆಸ್ಪತ್ರೆಗೆ ಹೋಗುವಂತೆ ಹೇಳಿದ ಅವಳು, ಜೆಹ್ ಜೊತೆ ಸಹೋದರಿ ಮನೆಗೆ ಹೋದಳು. ರಕ್ತದ ಮಡುವಿನಲ್ಲಿ ನಾನಿದ್ದೆ. ಆದರೆ ಅವಳು ಮಗನನ್ನು ಕರೆದಕೊಂಡು ಅಕ್ಕ ಕರಿಷ್ಮಾ ಕಪೂರ್ ಮನೆಗೆ ಹೋಗುವುದಾಗಿ ಹೇಳಿದಾಗ ಅದು ಒಳ್ಳೆಯದು ಎನ್ನಿಸಿತು. ರಿಕ್ಷಾದವ ಸಿಕ್ಕ. ರಕ್ತದಲ್ಲಿದ್ದ ನನ್ನನ್ನು ಕರೆದುಕೊಂಡು ಎಂಟು ವರ್ಷದ ಮಗ ತೈಮೂರ್ ಹೋದ' ಎಂದು ಸೈಫ್ ಹೇಳಿದ್ದಾರೆ.
ಇಷ್ಟು ಹೇಳುತ್ತಿದ್ದಂತೆಯೇ ಜಾಲತಾಣದಲ್ಲಿ ವಿವಿಧ ರೀತಿಯ ಚರ್ಚೆಗಳು ಶುರುವಾಗಿದೆ. ಕೆಲಸದಾಕೆ ತಪ್ಪಿಸಲು ಬಂದಾಗ, ಕರೀನಾ ಯಾಕೆ ಬರಲಿಲ್ಲ? ರಕ್ತದ ಮಡುವಿನಲ್ಲಿ ಇರುವಾಗ ಯಾವುದೇ ಹೆಣ್ಣು ಪತಿಯ ಜೊತೆ ಇರುತ್ತಾಳೋ ಅಥವಾ ಆ ಸಮಯದಲ್ಲಿ ಅಕ್ಕನ ಮನೆನೇ ಒಳ್ಳೆಯದು ಎನ್ನಿಸುತ್ತದೆಯೋ ಎಂದು ಪ್ರಶ್ನಿಸುತ್ತಿದ್ದಾರೆ. ಮಗುವಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಅವನನ್ನು ಕರೆದುಕೊಂಡು ಅಕ್ಕನ ಮನೆಗೆ ಹೋಗಿರುವ ಕಾರಣ ಯಾಕೋ ಅಂಥ ಸನ್ನಿವೇಶದಲ್ಲಿ ಅಷ್ಟೊಂದು ಸರಿ ಎನ್ನಿಸುತ್ತಿಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಅದರಲ್ಲಿಯೂ ಪತಿಯ ಮೇಲೆ ಅಂಥ ದಾಳಿ ನಡೆಯುತ್ತಿದ್ದರೂ, ಸೈಫ್ ಹೇಳಿದಂತೆ ಸಹಾಯಕ್ಕೆ ಯಾರಾದರೂ ಬನ್ನಿ ಎಂದಾಗಲೂ ಕರೀನಾ ಬರಲಿಲ್ಲ, ಬಂದವಳು ಕೆಲಸದವಳು, ಎಂಥ ವಿಪರ್ಯಾಸ ಎಂದು ಕೇಳುತ್ತಿದ್ದಾರೆ.
ವಿವಾದದಲ್ಲಿ ಸೈಫ್ ಇರಿತ ಪ್ರಕರಣ! ಹೇಳಿಕೆ ಕೊಟ್ಟಿದ್ಯಾರು? FIR ಇಲ್ಲದೇ ವಿಮೆ ಹಣ ಬಂದದ್ಹೇಗೆ? ತನಿಖೆಗೆ ಆದೇಶ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.