
ಗೂಢಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ (Sarabjit Singh) ಅವರ ಸಹೋದರಿ ದಲ್ಬೀರ್ ಸಿಂಗ್ Dalbir Kaur) ಶನಿವಾರ ರಾತ್ರಿ ಸಾವನ್ನಪ್ಪಿದ್ದರು. ಪಂಜಾಬಿನ ಭಿಖಿವಿಂದ್ ಗ್ರಾಮದಲ್ಲಿ ಭಾನುವಾರ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅಮೃತಸರ ಬಳಿಯ ಭಿಖಿವಿಂದ್ ಗ್ರಾಮದ ತನ್ನ ನಿವಾಸದಲ್ಲಿ ದಲ್ಬೀರ್ ಕೌರ್ ಹೃದಯಾಘಾತದಿಂದ ನಿಧನರಾದರು. ಬಾಲಿವುಡ್ ನಟ ರಣದೀಪ್ ಹೂಡಾ (Randeep Hooda), ದಲ್ಬೀರ್ ಕೌರ್ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
2016ರಲ್ಲಿ ರಿಲೀಸ್ ಆಗಿದ್ದ ಸರಬ್ಜಿತ್ (Sarabjit) ಸಿನಿಮಾದಲ್ಲಿ ರಣದೀಪ್ ಹೂಡಾ ಸರಬ್ಜಿತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದರು. ಐಶ್ವರ್ಯಾ ರೈ ದಲ್ಬೀರ್ ಕೌರ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಸರಬ್ಜಿತ್ ಸಿಂಗ್ ಬಂಧನ, ಸಹೋದರನಿಗಾಗಿ ಬರೋಬ್ಬರಿ 22 ವರ್ಷಗಳಿಂದ ಹೋರಾಟ ನಡೆಸಿದ ಸಹೋದರಿ ದಲ್ಬೀರ್ ಕೌರ್ ಬಗ್ಗೆ ತೋರಿಸಲಾಗಿತ್ತು.
ರಣದೀಪ್ ಹೂಡಾ ಈ ಸಿನಿಮಾದಲ್ಲಿ ನಟಿಸಿದ ಬಳಿಕ ದಲ್ಬೀರ್ ಕೌರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ರಣದೀಪ್ ಹೂಡಾರಲ್ಲಿ ತನ್ನ ಸಹೋದರ ಜರಬ್ಜಿತ್‌ನನ್ನು ಕಾಣುತ್ತಿರುವುದಾಗಿ ಹೇಳಿದ್ದರು. ಅಷ್ಟೆಯಲ್ಲ ತಾನು ಸತ್ತಾಗ ತನ್ನ ದೇಹಕ್ಕೆ ಭುಜ ಕೊಡುವಂತೆ ಕೇಳಿಕೊಂಡಿದ್ದರು. ಮಾತಿನಂತೆ ನಟ ರಣದೀಪ್ ಹೂಡಾ ದಲ್ಬೀರ್ ಮೃತದೇಹಕ್ಕೆ ಭುಜಕೊಡುವ ಮೂಲಕ ಆಸೆ ನೆರವೇರಿಸಿದ್ದಾರೆ.
ದಲ್ಬೀರ್ ಕೌರ್ ಸಾವಿನ ಸುದ್ದಿ ತಿಳಿದ ತಕ್ಷಣ ಮುಂಬೈನಿಂದ ಹೊರಟ ರಣದೀಪ್ ಹೂಡಾ, ಪಂಜಾಬ್‌ನ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ರಣದೀಪ್ ಹೂಡಾ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರಬ್ಜಿತ್ ಸಿಂಗ್ ಬಿಡುಗಡೆಗೆ ಹೋರಾಡಿದ್ದ ಸಹೋದರಿ ದಲ್ಬಿರ್ ಕೌರ್ ನಿಧನ
ಸರಬ್ಜಿತ್ ಸಿನಿಮಾದಲ್ಲಿ ರಿಚಾ ಚಡ್ಡಾ ಮತ್ತು ದರ್ಶನ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದರು. ಓಮಂಗ್ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸರಬ್ಜಿತ್ ಸಿಂಗ್ ಭಾರತ- ಪಾಕಿಸ್ತಾನ ಗಡಿ ಬಳಿಯ ಭಿಖಿವಿಂಡ್ ಗ್ರಾಮದ ರೈತರಾಗಿದ್ದರು. ತಿಳಿಯದೆ ಪಾಕ್ ಗಡಿ ಪ್ರವೇಶಿಸಿದ್ದರು. ಕೂಡಲೇ ಅವರನ್ನು ಭದ್ರತಾ ಸಿಬ್ಬಂದಿ ಬಂದಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ಕೋರ್ಟ್ ಅವರಿಗೆ 1991ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.
ವೀರ್ ಸಾವರ್ಕರ್ ಬಯೋಪಿಕ್; ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ
22 ವರ್ಷಗಳ ಸುದೀರ್ಘ ಕಾಲ ಲಾಹೋರ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಮೇಲೆ 2013ರಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಸರಬ್ಜಿತ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲು ದಲ್ಬೀರ್ ಕೌರ್ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.
ಸರಬ್ಜಿತ್ ಬಿಡಿಸಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೌರ್ ಅಸಮಧಾನಾ ಹೊರಹಾಕಿದ್ದರು. ಸಹೋದರನ ಬಿಡುಗಡೆಗೆ ಹಲವಿಬಾರಿ ಪತ್ರ ಬರೆದಿದ್ದರೂ ಸಹ ವಿದೇಶಾಂಗ ವ್ಯವಹಾರ ಸಚಿವಾಲಯವಾಗಲಿ ಅಥವಾ ಗೃಹ ಸಚಿವಾಲಯವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೌರ್ ಹೇಳಿದ್ದರು. ಸರಬ್ಜಿತ್ ಬಿಡುಗಡೆಗೆ ಮಾಜಿ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಪ್ರಾಮಾಣಿಕ ಕೆಲಸ ಮಾಡಿಲ್ಲ ಎಂದು ದಲ್ಬೀರ್ ಕೌರ್ ಆರೋಪಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.