
ನಮಿತ್ ಮಲ್ಹೋತ್ರಾ ಅವರ 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ 'ರಾಮಾಯಣ ' (Ramayana) ವಿಶ್ವದಾದ್ಯಂತ ದಾಖಲೆಯನ್ನು ಬರೆಯುತ್ತಿದೆ. 'ಪುಷ್ಪ 2' ಮತ್ತು 'ಬಾಹುಬಲಿ 2' ಅಂತಹ ದೊಡ್ಡ ಸಿನಿಮಾಗಳ ಕಲೆಕ್ಷನ್ ದಾಖಲೆಯನ್ನು ಮುರಿದಿರುವ ರಣಬೀರ್ ಕಪೂರ್ ಅವರ ಸಿನಿಮಾ ಇದೀಗ 2,000 ಕೋಟಿ ರೂಪಾಯಿ ಗಳಿಕೆಯತ್ತ ಹೆಜ್ಜೆ ಇಡುತ್ತಿದೆ. ಈ ಪೌರಾಣಿಕ ಸಿನಿಮಾಗೆ ಸಿಗುತ್ತಿರುವ ಯಶಸ್ಸಿನ ನಡುವೆ ದೆಹಲಿ ಪ್ರವಾಸದಲ್ಲಿದ್ದ ಚಿತ್ರತಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದೆ. ಆದರೆ ಯಶ್ ಮಾತ್ರ ಗೈರಾಗಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಮಾಯಣ ಚಿತ್ರತಂಡವನ್ನು ಭೇಟಿಯಾದ ಕೆಲವು ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಈ ಭೇಟಿಯ ಸಂದರ್ಭದಲ್ಲಿ ಭಾರತೀಯ ಸಿನಿಮಾ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಗೆ ವಿಶ್ವದಾದ್ಯಂತ ವಿಶೇಷ ಗುರುತನ್ನು ತಂದುಕೊಟ್ಟಿದ್ದಕ್ಕಾಗಿ ಹಾಗೂ ಸಿನಿಮಾದ ಅದ್ಭುತ ಯಶಸ್ಸಿಗಾಗಿ ಅವರು ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಇಡೀ ಚಿತ್ರತಂಡದ ಪರಿಶ್ರಮವನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ. ಭಾರತದ ಅತ್ಯಂತ ಪೂಜ್ಯ ಮಹಾಕಾವ್ಯವನ್ನು ಇಷ್ಟು ಅದ್ಧೂರಿ ಮಟ್ಟದಲ್ಲಿ ದೊಡ್ಡ ಪರದೆಯ ಮೇಲೆ ತರುವುದು ದೊಡ್ಡ ಸಾಧನೆ ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಉಪಸ್ಥಿತರಿದ್ದರು. ಇವರ ಜೊತೆಗೆ ಪ್ರೈಮ್ ಫೋಕಸ್‌ನ ಬಿಸಿನೆಸ್ ಹೆಡ್ ನೀರಜ್ ಶಾಂಘೈ ಕೂಡ ಭಾಗವಹಿಸಿದ್ದರು.
ಭೇಟಿಯ ಫೋಟೋಗಳನ್ನು ಹಂಚಿಕೊಂಡ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಈ ಭೇಟಿಯ ಕೆಲವು ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿಡು ಹೀಗೆ ಬರೆದಿದ್ದಾರೆ. "ನವದೆಹಲಿನಲ್ಲಿ ರಾಮಾಯಣ ಚಿತ್ರತಂಡವನ್ನು ಭೇಟಿಯಾದೆ. ಮರ್ಯಾದೆ ಮತ್ತು ಧರ್ಮದ ಸಾಕ್ಷಾತ್ ಸ್ವರೂಪವಾದ ಶ್ರೀರಾಮನು ತನ್ನ ಜೀವನದ ಮೂಲಕ ಕರ್ತವ್ಯ, ತ್ಯಾಗ ಮತ್ತು ಪ್ರಾಮಾಣಿಕತೆಯ ಆದರ್ಶಗಳನ್ನು ಜಗತ್ತಿಗೆ ತೋರಿಸಿದ್ದಾರೆ. ಆ ಆದರ್ಶಗಳನ್ನು ಆಧುನಿಕ ಸಿನಿಮಾ ತಂತ್ರಜ್ಞಾನದ ಮೂಲಕ ಇಂದಿನ ಯುವ ಪೀಳಿಗೆಗೆ ತಲುಪಿಸುವ ಈ ವಿಶಿಷ್ಟ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು." ಎಂದಿದ್ದಾರೆ.
ಈ ಕಾರಣಕ್ಕೆ ವಿಶೇಷ ಭೇಟಿಯಲ್ಲಿ ಭಾಗಿಯಾಗದ ಯಶ್
ಅಮಿತ್ ಶಾ ಅವರೊಂದಿಗಿನ ಈ ವಿಶೇಷ ಭೇಟಿಯ ಸಂದರ್ಭದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಸೇರಿದಂತೆ ರಾಮಾಯಣ ಚಿತ್ರತಂಡದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಆದರೆ ಸಿನಿಮಾದಲ್ಲಿ ಲಂಕಾಧಿಪತಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಯಶ್ ಮಾತ್ರ ಈ ವಿಶೇಷ ಸಂದರ್ಭದಲ್ಲಿ ಗೈರಾಗಿದ್ದರು. ವರದಿಗಳ ಪ್ರಕಾರ, ಯಶ್ ಪ್ರಸ್ತುತ ತಮ್ಮ ಕೆಲಸದ ನಿಮಿತ್ತ ಬ್ಯುಸಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಅವರಿಗೆ ಅಮಿತ್ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.