
ಕಾಂತಾರಾ ಚಿತ್ರ ಪ್ರೀಕ್ವೆಲ್ ಶುರುವಾದಾಗಿನಿಂದಲೂ ಏನೇನೋ ಘಟನೆಗಳು ಸಂಭವಿಸುತ್ತಲೇ ಇವೆ. ಆರಂಭದಲ್ಲಿ ಕಲಾವಿದರಿದ್ದ ಬಸ್ ಅಪಘಾತವಾಗಿ ಕೆಲವರಿಗೆ ಗಾಯವಾಗಿದ್ದವು. ಶೂಟಿಂಗ್ ಸಮಯದಲ್ಲಿಯೂ ಕೆಲವೊಂದು ತೊಂದರೆಗಳು ಎದುರಾಗಿದ್ದವು. ಇದೀಗ ಸಿನಿಮಾದಲ್ಲಿ ನಟಿಸುತ್ತಿದ್ದ ಇಬ್ಬರು ಕಲಾವಿದರು ಸಾವಿಗೀಡಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ನಡೆಯದಿದ್ದರೂ ಇವರಿಬ್ಬರ ಅಕಾಲಿಕ ನಿಧನ ಎಲ್ಲರಿಗೂ ಶಾಕ್ ಉಂಟು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಅವರು, ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ಬಳಿ ಶೂಟಿಂಗ್ ಮುಗಿಸಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅದು ಶೂಟಿಂಗ್ ವೇಳೆ ನಡೆದ ಘಟನೆ ಎಂದೇ ಗಾಳಿಸುದ್ದಿ ಹರಡಿತ್ತು. ಕೊನೆಗೆ ಚಿತ್ರತಂಡವೇ ಅದನ್ನು ಸ್ಪಷ್ಟಪಡಿಸಿ, ಶೂಟಿಂಗ್ಗೂ, ಈ ಸಾವಿಗೂ ಸಂಬಂಧವಿಲ್ಲ ಎಂದಿತ್ತು. ಇದೀಗ ಹಾಸ್ಯಕಲಾವಿದ, ಎಲ್ಲರನ್ನೂ ಸದಾ ನಕ್ಕು ನಗಿಸುವ ರಾಕೇಶ್ ಪೂಜಾರಿ ಅವರು ಈ ಎಳೆಯ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ನಿಧನರಾಗಿ ಆಘಾತವನ್ನೇ ನೀಡಿದ್ದಾರೆ.
ಈ ಸಂದರ್ಭದಲ್ಲಿ ಇದಾಗಲೇ ಹಲವಾರು ಮಂದಿ ರಾಕೇಶ್ ಜೊತೆಗಿನ ಒಡನಾಟ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಕಾಮಿಡಿ ಕಿಲಾಡಿಗಳು ತಂಡ, ರಾಕೇಶ್ ಶೂಟಿಂಗ್ ಸಮಯದಲ್ಲಿ ನಡೆದುಕೊಳ್ಳುತ್ತಿದ್ದ ರೀತಿ, ಅವರ ಹಾಸ್ಯ ಎಲ್ಲವನ್ನೂ ನೆನೆದು ಕಣ್ಣೀರಿಟ್ಟಿದೆ. ರಿಷಬ್ ಶೆಟ್ಟಿ, ಭಾವುಕರಾಗಿ ಟ್ವೀಟ್ ಮಾಡಿದ್ದು, 'ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅದ್ಭುತ ಕಲಾವಿದ. ಕಾಂತಾರದಲ್ಲಿ ನಿನ್ನ ಪಾತ್ರ ಮತ್ತು ಅದನ್ನು ನೀನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದರ ಕುಟುಂಬಕ್ಕೆ ಇದೊಂದು ತುಂಬಲಾರದ ನಷ್ಟ. ಹೋಗಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಕುಟುಂಬದವರಿಗೆ ಆ ದೇವರು ಸಹಿಸಿಕೊಳ್ಳುವ ಶಕ್ತಿ ಕೊಡಲಿ' ಎಂದು ಬರೆದಿದ್ದಾರೆ.
ಇನ್ನು ಕಾಂತಾರ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಕೂಡ ಸಂತಾಪ ಸೂಚಿಸಿದೆ. ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಇದಾಗಲೇ ಕಾಂತಾರ ಚಾಪ್ಟರ್1 ಅಕ್ಟೋಬರ್ 2ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ.
ಇವುಗಳ ನಡುವೆಯೇ, ಚಿತ್ರತಂಡಕ್ಕೆ ಆಗುತ್ತಿರುವ ಆಘಾತಗಳ ಹಿನ್ನೆಲೆಯಲ್ಲಿ ದೈವದ ಮಾತು ಕೂಡ ಮುನ್ನೆಲೆಗೆ ಬರುತ್ತಿದೆ. ಅದೇನೆಂದರೆ, ರಿಷಬ್ ಶೆಟ್ಟಿ ತಮ್ಮ ಕುಟುಂಬದೊಂದಿಗೆ ಹೋದ ತಿಂಗಳು ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಅವರು ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಆಸಮಯದಲ್ಲಿ ದೈವವು ಕೆಲವು ಮಾತುಗಳನ್ನು ಹೇಳಿತ್ತು ಎನ್ನಲಾಗಿದೆ. ನಿನಗೆ ವಿಶ್ವದ ಹಲವು ಕಡೆಗಳಲ್ಲಿ ಶತ್ರುಗಳಿದ್ದಾರೆ. ಸಂಸಾರ ಹಾಳು ಮಾಡಲು ಕೂಡ ಪ್ರಯತ್ನ ಪಡುತ್ತಿದ್ದಾರೆ. ನಿನ್ನ ವಿರುದ್ಧ ಭಾರೀ ಸಂಚು ಕೂಡ ನಡೆದಿದೆ. ಕೇಡು ಬಯಸುವವರು ಇದ್ದಾರೆ. ಸದ್ಯ ಅವರೆಲ್ಲಾ ಯಾರು ಎಂದು ಹೇಳಲ್ಲ, ಆದರೆ ಕೇಡು ಆಗದಂತೆ ನೋಡಿಕೊಳ್ಳುತ್ತೇನೆ. ನೀನು ನಂಬಿದ ದೈವ ಕೈಬಿಡಲ್ಲ ಎಂದಿತ್ತು ಎನ್ನಲಾಗಿದೆ. 5 ತಿಂಗಳಲ್ಲಿ ಒಳ್ಳೇದು ಮಾಡುವುದಾಗಿ ದೈವ ಭರವಸೆ ನೀಡಿತ್ತು ಎಂದು ವರದಿಯಾಗಿತ್ತು. ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.