
ಆಲಿಯಾ ಅವರಿಂತಲೂ ಮೊದಲು ಬಾಲಿವುಡ್ನ ಗುಳಿಕೆನ್ನೆಯ ಚೆಲುವೆ ಎನಿಸಿಕೊಂಡಿರುವಾಕೆ ಪ್ರೀತಿ ಜಿಂಟಾ. 80-90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಈಕೆ ಕೂಡ ಒಬ್ಬರು. ನಂತರ ನಿರ್ಮಾಪಕಿಯಾಗಿ ಹಾಗೂ ಪಂಜಾಬ್ ಕಿಂಗ್ಸ್ ಇಲೆವೆನ್ನ ಒಡತಿಯಾಗಿ ಪ್ರೀತಿ ಜಿಂಟಾ (Preity Zinta) ಗುರುತಿಸಿಕೊಂಡರು. 2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೆನೆ ಗುಡ್ ಇನಫ್ ಅವರು ಪ್ರೀತಿಸಿ ವಿವಾಹವಾದ ನಂತರ ಪ್ರೀತಿ ಚಿತ್ರರಂಗದಿಂದ ತುಸು ದೂರವೇ ಉಳಿದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟೀವ್ ಆಗಿರುತ್ತಾರೆ. 2018ರಲ್ಲಿ ನೀರಜ್ ಪಾಠಕ್ ನಿರ್ದೇಶನದ ಭಯ್ಯಾಜಿ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಹ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು ಬಾಲಿವುಡ್ ಜೊತೆಗೆ ತುಂಬಾ ಆತ್ಮೀಯವಾದ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ.
ಐದು ವರ್ಷಗಳ ಕಾಲ ಡೇಟಿಂಗ್ ಬಳಿಕ ಪ್ರೀತಿ ಮತ್ತು ಜೆನೆ ಮದುವೆಯಾಗಿದ್ದರು. ಮದುವೆಯ ನಂತರ ಪತಿಯ ಜೊತೆ ವಿದೇಶದಲ್ಲಿ ನೆಲೆಸಿದ್ದ ಪ್ರೀತಿ ಜಿಂಟಾ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಮದುವೆಯಾದ ಐದು ವರ್ಷಗಳ ಬಳಿಕ ದಂಪತಿ ತಾವು ಅವಳಿ ಮಕ್ಕಳ ತಾಯಿಯಾಗಿರುವ ಕುರಿತು ಮಾಹಿತಿ ಶೇರ್ ಮಾಡಿಕೊಂಡಿದ್ದರು. ನಾನು ಹಾಗೂ ನನ್ನ ಪತಿ ಅಪ್ಪ-ಅಮ್ಮ ಆಗಿದ್ದೇವೆ. ಮನೆಯಲ್ಲಿ ಮುದ್ದಾದ ಅವಳಿ ಮಕ್ಕಳ ಸದ್ದು ಕೇಳಿಸುತ್ತಿದೆ. ಮಕ್ಕಳಿಗೆ ಜಿಯಾ ಜಿಂಟಾ ಹಾಗೂ ಜೈ ಜಿಂಟಾ (Gia and Jai) ಎಂದು ನಾಮಕರಣ ಮಾಡಲಾಗಿದೆ. ಈ ಖುಷಿಯ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ಪ್ರೀತಿ ಜಿಂಟಾ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಯುವರಾಜ್ ಸಿಂಗ್ ಜೊತೆ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದಿದ್ದ ಪ್ರೀತಿ ಜಿಂಟಾ: ಹೇಳಿದ್ದೇನು?
ಗರ್ಭಿಣಿಯಾಗಿರುವ ಸುದ್ದಿಯನ್ನೂ ಕೊಡದೆ ಮಗುವಿನ ಸುದ್ದಿ ಕೇಳಿ ಇವರ ಫ್ಯಾನ್ಸ್ ಸ್ವಲ್ಪ ಶಾಕ್ ಆಗಿದ್ದಂತೂ ನಿಜ. ತಮ್ಮ ಪತಿ ಜೆನೆ ಗುಡ್ಇನಫ್ (Gene Goodenough) ಅವರ ಜತೆಗಿನ ಚಿತ್ರ ಹಂಚಿಕೊಂಡಿರುವ ನಟಿ ತಮ್ಮ ಅವಳಿ ಮಕ್ಕಳ ಕುರಿತಾದ ಮಾಹಿತಿಯನ್ನು ಶೇರ್ ಮಾಡಿದ್ದರು. ಆಗ ಅವರಿಗೆ 46 ವರ್ಷವಾಗಿತ್ತು. ಮಕ್ಕಳ ಸುದ್ದಿ ಕೇಳಿ ಸಾಕಷ್ಟು ಮಂದಿ ಆಶ್ಚರ್ಯ ಪಟ್ಟಿದ್ದರು. ಆದರೆ, ಅಸಲಿಗೆ ಪ್ರೀತಿ ಜಿಂಟಾ ಹಾಗೂ ಗುಡ್ ಇನಫ್ ಅವರು ಬಾಡಿಗೆ ತಾಯಿಯ (Surrogacy) ಮೂಲಕ ತಮ್ಮ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಫೋಟೋ ಜೊತೆಗೆ ಪ್ರೀತಿ ಆಗಾಗ್ಗೆ ತಮ್ಮ ಪತಿ ಇರುವ ಫೋಟೋಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಆದರೆ ಅವರು ಈಗ ಶೇರ್ ಮಾಡಿಕೊಂಡಿರುವ ವಿಡಿಯೋ ಬಹಳ ಕ್ಯೂಟ್ (Cute) ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಇವರ ಮಕ್ಕಳಿಗೆ ಈಗ 2 ವರ್ಷ. ಅವರ ಪೈಕಿ ಈ ವೀಡಿಯೊದಲ್ಲಿ ಪ್ರೀತಿ ಜಿಂಟಾ ಅವರ ಮಗ ಜೈ ನೆಲದ ಮೇಲೆ ಮಲಗಿಕೊಂಡು ನೆಲವನ್ನು ಒರೆಸುತ್ತಿರುವುದನ್ನು ಕಾಣಬಹುದು. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರ ಮಗ ಜೈ ಕೈಯಲ್ಲಿ ಬಟ್ಟೆಯಿದ್ದು, ಅದನ್ನು ಎಳೆದುಕೊಂಡು ಕೋಣೆ ಪೂರ್ತಿ ಓಡಾಡುವುದನ್ನು ನೋಡಬಹುದು. ಮನೆ ಕೆಲಸದಾಕೆ ಮನೆ ಒರೆಸುವುದನ್ನು ಗಮನವಿಟ್ಟು ನೋಡಿಕೊಂಡಿರುವ ಮಗ ಈ ರೀತಿ ಮಾಡಿದ್ದಾನೆ ಎನ್ನುವುದು ವಿಡಿಯೋ ನೋಡಿದರೆ ಅರ್ಥವಾಗುತ್ತದೆ.
ಪ್ರೀತಿ ಜಿಂಟಾ ಮಕ್ಕಳ ಮೊದಲ ಹುಟ್ಟುಹಬ್ಬ: ಮುದ್ದಾದ ಫೋಟೋ ಶೇರ್ ಮಾಡಿದ ನಟಿ
ನಮ್ಮ ಪುಟ್ಟ ಮಗುವು ಶುಚಿಗೊಳಿಸುವ ಮತ್ತು ಅಮ್ಮನಿಗೆ ಸಹಾಯ ಮಾಡುವಲ್ಲಿ ಆಸಕ್ತಿ ವಹಿಸುವುದನ್ನು ನೋಡುವುದು ಸಂತೋಷಕರವಾಗಿದೆ. ನಮ್ಮ ಮಗ ಸ್ವಚ್ಛ ಭಾರತ ಅಭಿಯಾನವನ್ನು ಅಭ್ಯಾಸ ಮಾಡುತ್ತಿದ್ದಾನೆ ಎಂದು ಪ್ರೀತಿ ಬರೆದುಕೊಂಡಿದ್ದು, ಈ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. ಹೆಚ್ಚಿನ ಮಂದಿ ಬಾಲ ಕಾರ್ಮಿಕ ಕಾನೂನಿನ ಅಡಿ ನಿಮ್ಮ ಮೇಲೆ ಕೇಸ್ ಹಾಕಲಾಗುತ್ತದೆ ಎಂದು ಹಲವು ನೆಟ್ಟಿಗರು ತಮಾಷೆಯ ಸುರಿಮಳೆಗೈದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.