
ಬೆಂಗಳೂರು: ಯಶ್ ನಿರ್ಮಾಣದ ರಾಮಾಯಣ ಸಿನಿಮಾ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಭು ರಾಮಚಂದ್ರನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿರೋದಕ್ಕೆ ಸಣ್ಣದೊಂದು ವಿರೋಧ ವ್ಯಕ್ತವಾಗುತ್ತಿದೆ. ಕೆಲ ಅಭಿಮಾನಿಗಳು ತೆಲುಗು ಸ್ಟಾರ್ ನಟ ರಾಮ್ ಚರಣ್ ರಾಮಯಾಣದಲ್ಲಿ ರಘುನಂದನನಾಗಿ ನಟಿಸಬೇಕಿತ್ತು ಎಂಬ ಶೀರ್ಷಿಕೆಯಡಿಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ರಣ್‌ಬೀರ್ ಕಪೂರ್ ಸಂದರ್ಶನದಲ್ಲಿ ನೀಡಿದ ಹೇಳಿಕೆಯೊಂದು ಮತ್ತೆ ಮುನ್ನಲೆಗೆ ಬಂದಿದೆ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಡೀ ಚಿತ್ರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಣ್‌ಬೀರ್ ಕಪೂರ್ ಹೇಳಿಕೆ ಏನು?
ಈ ಹಿಂದೆ ಸಂದರ್ಶನದಲ್ಲಿ ರಣ್‌ಬೀರ್ ಕಪೂರ್ ತಮ್ಮ ನೆಚ್ಚಿನ ಆಹಾರದ ಬಗ್ಗೆ ಮಾತನಾಡುತ್ತಾ, ಬೀಫ್ ಖಾದ್ಯ ತಿಂದಿರೋದಾಗಿ ಹೇಳಿಕೊಂಡಿದ್ದಾರೆ. ನಾನು ಚಿಕನ್ ತಿನ್ನುವ ಹುಡುಗನಲ್ಲ, ಅದು ಸೋಯಾ ರೀತಿಯಲ್ಲಿರುತ್ತದೆ. ನಾನು ರೆಡ್‌ಮೀಟ್ ತಿನ್ನಲು ಹೆಚ್ಚು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದೀಗ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ರಣ್‌ಬೀರ್ ಕಪೂರ್ ವಿರುದ್ಧದ ಅಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಈ ಹಿಂದೆ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ವೇಳೆಯೂ ರಣ್‌ಬೀರ್ ಹೇಳಿಕೆಯನ್ನು ಮುಂದಿಟ್ಟು ಚಿತ್ರಕ್ಕೆ ಬಹಿಷ್ಕಾರದ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದವು. ಬ್ರಹ್ಮಾಸ್ತ್ರ ಚಿತ್ರತಂಡದ ಸುದ್ದಿಗೋಷ್ಠಿ ಸಮಯದಲ್ಲಿ ನೇರವಾಗಿ ರಣ್‌ಬೀರ್ ಕಪೂರ್ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡ, ಇದು ಬ್ರಹ್ಮಾಸ್ತ್ರದ ಸುದ್ದಿಗೋಷ್ಠಿಯಾಗಿದೆ. ಹಾಗಾಗಿ ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳುವಂತೆ ಮನವಿ ಮಾಡಿಕೊಂಡಿತ್ತು. ಕಲಾವಿದರ ವೈಯಕ್ತಿಕ ಹೇಳಿಕೆ ಮತ್ತು ಖಾಸಗಿ ಜೀವನದ ಕುರಿತು ಪ್ರಶ್ನೆ ಮಾಡಲು ಇದು ಸೂಕ್ತ ವೇದಿಕೆಯಲ್ಲ ಎಂದು ಸ್ಪಷ್ಟಪಡಿಸಿತ್ತು.
400 ಕೋಟಿ ಕಲೆಕ್ಷನ್ ಮಾಡಿತ್ತು ಬ್ರಹ್ಮಾಸ್ತ್ರ!
ಚಿತ್ರತಂಡದ ಸ್ಪಷ್ಟನೆ ನಡುವೆಯೂ ಪತ್ರಕರ್ತರು ಮರುಪ್ರಶ್ನೆ ಮಾಡಿದಾಗ ಮಧ್ಯ ಪ್ರವೇಶಿಸಿದ್ದ ರಣ್‌ಬೀರ್ ಕಪೂರ್ ಮಡದಿ, ನಟಿ ಆಲಿಯಾ ಭಟ್, ಚಿತ್ರತಂಡದಿಂದ ನಿಮಗೆ ಸ್ಪಷ್ಟನೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಬೇರೆ ಪ್ರಶ್ನೆ ಕೇಳಬಹುದು ಎಂದು ಹೇಳಿದ್ದರು. ಈ ಮೂಲಕ ಗಂಡ ತಮ್ಮ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡದಂತೆ ತಡೆದಿದ್ದರು. ಈ ವಿವಾದದ ನಡುವೆಯೂ ಬಿಡುಗಡೆಯಾದ ಬ್ರಹ್ಮಾಸ್ತ್ರ, ಬಾಕ್ಸ್ ಆಫಿಸ್‌ನಲ್ಲಿ 400 ರಿಂದ 430 ಕೋಟಿ ರೂ. ಗಳಿಸಿತ್ತು. ಈ ಚಿತ್ರದಲ್ಲಿ ಶಾರೂಖ್ ಖಾನ್, ನಾಗಾರ್ಜುನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್, ಮೌನಿ ರಾಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಮತ್ತೆ ಮುನ್ನಲೆಗೆ ಬಂದಿರುವ ಹೇಳಿಕೆ
ಇದೀಗ ರಣ್‌ಬೀರ್ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ಈ ಹೇಳಿಕೆ ಕುರಿತು ರಣ್‌ಬೀರ್ ಕಪೂರ್ ಅಥವಾ ಚಿತ್ರತಂಡ ಪ್ರತಿಕ್ರಿಯಿಸಿಲ್ಲ. ಉದ್ದೇಶಪೂರ್ವಕವಾಗಿ ಹಳೆ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ರಣ್‌ಬೀರ್ ಕಪೂರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಮ್‌ಚರಣ್ ರಾಮನ ಪಾತ್ರಕ್ಕೆ ಒಳ್ಳೆಯ ಆಯ್ಕೆಯಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಜಾನಕಿಯಾಗಿ ಸಾಯಿ ಪಲ್ಲವಿ
ರಾಮಾಯಣ ಸಿನಿಮಾದ ಟೀಸರ್ ಮತ್ತು ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಟ್ರೆಂಡಿಂಗ್ ನಲ್ಲಿವೆ. ಸಿನಿಮಾದ ಟ್ರೆಂಡ್ ನೋಡಿದ ಅಭಿಮಾನಿಗಳು ಇದು ಬಾಕ್ಸ್ ಆಫಿಸ್‌ನಲ್ಲಿ 2,000 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ. ನಟನೆ ಜೊತೆ ನಿರ್ಮಾಪಕರಾಗಿಯೂ ಯಶ್ ಕೆಲಸ ಮಾಡಿದ್ದಾರೆ. ಇನ್ನು ಜಾನಕಿಯಾಗಿ ಸಹಜ ಸುಂದರಿ, ರೌಡಿ ಬೇಬಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.