ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ!

By Suvarna NewsFirst Published Feb 4, 2023, 3:07 PM IST
Highlights

ದಕ್ಷಿಣ ಭಾರತದ ಖ್ಯಾತ ಗಾಯಕಿ, 19ಕ್ಕೂ ಹೆಚ್ಚು ಭಾಷೆಗಳಲ್ಲಿ 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದಿರುವ ವಾಣಿ ಜಯರಾಂ ನಿಧನರಾಗಿದ್ದಾರೆ. ತಮ್ಮ ನಿವಾಸದಲ್ಲೇ ನಿಗೂಢವಾಗಿ ನಿಧನರಾಗಿದ್ದಾರೆ.

ಚೆನ್ನೈ(ಫೆ.04): ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ನಿಧನರಾಗಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ವಾಣಿ ಜಯರಾಂ ಮೃತಪಟ್ಟಿದ್ದಾರೆ. ವಾಣಿ ಜಯರಾಂ ಅವರಿಗೆ ಮೊನ್ನೆಯಷ್ಟೇ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಜನರನ್ನು ರಂಜಿಸಿದ ಗಾಯಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಮಿಳು, ತೆಲಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಟಿ, ಬೆಂಗಾಲಿ, ಬೋಜ್‌ಪುರಿ, ತುಳು ಮತ್ತು ಓಡಿಯಾ ಭಾಷೆಗಳಲ್ಲಿ ಹಾಡಿರುವ ವಾಣಿ ಜಯರಾಂ ನಿಧನಕ್ಕೆ ಚಿತ್ರರಂಗ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ 

ಚೆನ್ನೈ ಹಡ್ಡೊಸ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ವಾಣಿ ಜಯರಾಂ ಮೃತಪಟ್ಟಿದ್ದಾರೆ. ವಾಣಿ ಜಯರಾಂ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಗಾಯವಾಗಿದೆ. ಇದೇ ಗಾಯದಿಂದ ವಾಣಿ ಜಯರಾಂ ಮೃತಪಟ್ಟಿರುವ ಸಾಧ್ಯತೆ ಇದೆ. ಇನ್ನು ತಲೆಗೆ ತೀವ್ರ ಗಾಯವಾಗಿರುವುದು ಹೇಗೆ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಈ ಕುರಿತು ವಾಣಿ ಜಯರಾಂ ಮನೆ ಕೆಲಸದವರ ಹೇಳಿಕೆಯನ್ನು ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. 2018ರಲ್ಲಿ ಪತಿ  ಹಾಗೂ ಉದ್ಯಮಿ ಜಯರಾಂ ನಿಧನರಾಗಿದ್ದರು. 

Singer KK Death ಖ್ಯಾತ ಪ್ಲೇ ಬ್ಯಾಕ್ ಸಿಂಗರ್ ಕೆಕೆ ನಿಧನ, ಪ್ರಧಾನಿ ಮೋದಿ ಸಂತಾಪ!

ತಮಿಳು, ತೆಲಗು, ಕನ್ನಡ, ಮಲಯಾಳಂ, ಹಿಂದ, ಉರ್ದು, ಮರಾಟಿ, ಬೆಂಗಾಲಿ, ಬೋಜ್‌ಪುರಿ, ತುಳು ಮತ್ತು ಓಡಿಯಾ ಭಾಷೆಗಳಲ್ಲಿ ಹಾಡಿದ್ದಾರೆ. ತಮಿಳಿನಲ್ಲಿ ‘ಅಪೂರ್ವ ರಾಗಂಗಳ್’, ‘ತೆಲುಗಿನಲ್ಲಿ ಶಂಕರಾಭರಣಂ’, ‘ಸ್ವಾತಿ ಕಿರಣಂ’ ಚಿತ್ರಗಳಲ್ಲಿನ ಹಿನ್ನಲೆ ಗಾಯನಕ್ಕೆ ಈ ಗಾಯಕಿಗೆ ರಾಷ್ಟ್ರಪ್ರಶಸ್ತಿ, ಹಲವು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಮ್ಮಾನ್,  ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿ, ಪದ್ಮಭೂಷಣ ಹೀಗೆ ಹಲವು ಪುರಸ್ಕಾರಗಳು ವಾಣಿ ಜಯರಾಂ ಸಂದಿವೆ. ಈ ಪ್ರಶಸ್ತಿಗಳಲ್ಲಿ ಗುಜರಾಥ್, ಒರಿಸ್ಸಾ ರಾಜ್ಯಗಳ ಪ್ರಶಸ್ತಿಗಳೂ ಸೇರಿವೆ ಎಂದರೆ ವಾಣಿ ಜಯರಾಂ ಅವರಿಗಿರುವ ವ್ಯಾಪ್ತಿಯ ಅರಿವಾಗುತ್ತದೆ. 

ಓ ಪ್ರಿಯತಮ ,  ಮುತ್ತೇ ಪ್ರಥಮ, ಇವ ಯಾವ ಸೀಮೆ ಗಂಡು, ಓ ನನ್ನ ಕರುಳ, ಚಿನ್ನ ಚಿನ್ನ ಬೇಡ ಚಿನ್ನ ಮುಂತಾದ ಜನಪ್ರಿಯ ಕನ್ನಡ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. 

ವಾಣಿಜಯರಾಂ 1945ರ ನವೆಂಬರ್ 30ರಂದು  ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು.  ವಾಣಿಯವರ ತಾಯಿ ಸುಪ್ರಸಿದ್ಧ ಸಂಗೀತ ವಿದ್ವಾಂಸ ರಂಗ ರಾಮಾನುಜ ಅಯ್ಯಂಗಾರ್ ಅವರ ಶಿಷ್ಯೆ.  ಹೀಗಾಗಿ ಸಂಗೀತದ ಹಿನ್ನಲೆ ಸ್ವಾಭಾವಿಕವಾಗಿ ವಾಣಿ ಜಯರಾಂ ಅವರಿಗೆ ದೊರಕಿತ್ತು.  ತಮ್ಮ ಐದನೆಯ ವಯಸ್ಸಿನಲ್ಲೇ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಮಾಡಿದರು.  ಏಳನೇ ವಯಸ್ಸಿಗೆ ಬರುವ ವೇಳೆಗೆ ದೇಶಿಕರ್ ಕೃತಿಗಳನ್ನು ಸ್ಪುಟವಾಗಿ ಸರಾಗವಾಗಿ ಹಾಡುತ್ತಿದ್ದರು.  ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸುದೀರ್ಘ ಸಂಗೀತ ಕಚೇರಿ ನೀಡಿದಾಗ ವಾಣಿ ಅವರಿಗೆ ವಯಸ್ಸು ಕೇವಲ ಹತ್ತು ವರ್ಷ.  ಮುಂದೆ ಅವರು ಆರ್. ಬಾಲಸುಬ್ರಮಣ್ಯಂ ಮತ್ತು ಆರ್. ಎಸ್. ಮಣಿ ಅಂತಹ ಹಿರಿಯರಲ್ಲಿ ಕೂಡ ಹೆಚ್ಚಿನ ಸಂಗೀತಾಭ್ಯಾಸ ನಡೆಸಿದರು. ಕೇವಲ ಗಾಯನದಲ್ಲಷ್ಟೇ ಅಲ್ಲದೆ ಚಿತ್ರರಚನೆಯಲ್ಲೂ ಅವರದು ಗಣನೀಯ ಪ್ರತಿಭೆ.  ಓದಿನಲ್ಲೂ ಪ್ರಚಂಡರಾದ ಆಕೆ   ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

ನಿನಗೆ ಎಂದಿಗೂ ವಯಸ್ಸಾಗಲ್ಲ: ಸ್ವರ್ಗದಲ್ಲಿರೋ ಮಗಳ ನೆನೆದು ಖ್ಯಾತ ಗಾಯಕಿ ಚಿತ್ರಾ ಭಾವುಕ ಪೋಸ್ಟ್

ಕನ್ನಡ ಚಲನಚಿತ್ರರಂಗದಲ್ಲಿ  1973ರಿಂದ ಹಾಡಲು ಆರಂಭಿಸಿದ ವಾಣಿ ಜಯರಾಂ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.  ಒಟ್ಟು ಹನ್ನೆರಡು ಭಾಷೆಗಳಲ್ಲಿ ಅವರು ಹಾಡಿರುವ ಚಿತ್ರಗೀತೆಗಳ ಸಂಖ್ಯೆಯೇ ಹತ್ತು ಸಾವಿರವನ್ನೂ ಮೀರುತ್ತವೆ.  ಅವರ ಇನ್ನಿತರ  ಕೆಲವು ಹಾಡುಗಳನ್ನು ಮೆಲುಕು ಹಾಕುತ್ತಾ ಹೋದರೆ, ‘ನಗು ನೀ ನಗು, ಕಿರು ನಗೆ ನಗು’, ‘ಮೋಹನಾಂಗ ನಿನ್ನ ಕಂಡು ಓಡಿ ನಾ ಬಂದೆನೋ’, ‘ಈ ಶತಮಾನದ ಮಾದರಿ ಹೆಣ್ಣು’, ‘ದಾರಿ ಕಾಣದಾಗಿದೆ ರಾಘವೇಂದ್ರನೆ’, ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’, ‘ಓ ತಂಗಾಳಿಯೇ ನೀನಿಲ್ಲಿಗೆ ಓಡೋಡಿ ನಲಿದು ಒಲಿದು ಬಾ’, ‘ಲೈಫ್ ಈಸ್ ಎ ಮೆರ್ರಿ ಮೆಲೋಡಿ’, ‘ದಿವ್ಯ ಗಗನ ವನವಾಸಿನಿ’, ‘ಆ ದೇವರೆ ನುಡಿದ ಮೊದಲ ನುಡಿ ಸೇರಿದಂತೆ ಕನ್ನಡದಲ್ಲಿ ಸೂಪರ್ ಹಿಟ್ ಹಾಡು ನೀಡಿದ ಹೆಗ್ಗಳಿಕೆ ವಾಣಿ ಜಯರಾಂಗಿದೆ.

ತೆರೆದಿದೆ ಮನೆ ಓ ಬಾ ಅತಿಥಿ’, ‘ಮಧು ಮಾಸ ಚಂದ್ರಮ ನೈದಿಲೆಗೆ ಸಂಭ್ರಮ’, ‘ವಸಂತ ಬರೆದನು ಒಲವಿನ ಓಲೆ’, ‘ಗಾಡಾಂಧಕಾರದ ಇರುಳಲ್ಲಿ, ಕಾರ್ಮೋಡ ನೀರಾದ ವೇಳೆಯಲಿ’, ‘ಗೌರಿ ಮನೋಹರಿಯ ಕಂಡೆ’, ‘ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ’,  ‘ಈ ಜೀವ ನಿನದೇ, ಈ ಭಾವ ನಿನದೇ’, ‘ಅಧರಂ ಮಧುರಂ, ವದನಂ ಮಧುರಂ’ , ‘ನನ್ನೆದೆ ವೀಣೆಯು ಮಿಡಿಯುವುದು’, ‘ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ’ ಅನ್ನೋ ಕನ್ನಡ ಹಾಡುಗಳು ಈಗಲೂ ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. 

click me!