
'ನನ್ನಮ್ಮ ಸೂಪರ್ ಸ್ಟಾರ್'(Nannamma Superstar) ಖ್ಯಾತಿಯ ಇಬ್ಬನಿ(Ibbani) ತಾನು ಪ್ರೀತಿಯಿಂದ ಬೆಳೆಸಿದ ಕೂದಲನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಏಳು ವರ್ಷದ ಈ ಪುಟ್ಟ ಪೋರಿಯ ಒಳ್ಳೆಯ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಬ್ಬನಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪ್ರಮೋದ್ ಶೆಟ್ಟಿ ಮತ್ತು ಸುಪ್ರಿತಾ ಶೆಟ್ಟಿ(Pramod Shetty and Supritha Shetty) ಅವರ ಮಗಳು. ಇಬ್ಬನಿ ಪ್ರೀತಿಯಿಂದ ಉದ್ದವಾದ ಕೂದಲು ಬೆಳೆಸಿದ್ದರು. ಅದೆ ಪ್ರೀತಿಯ ಕೂದಲನ್ನು ಈಗ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗಾಗಿ ದಾನ ಮಾಡಿದ್ದಾರೆ.
ಅಂದಹಾಗೆ ಇಬ್ಬನಿ ಕೂದಲು ದಾನಕ್ಕೆ ಸ್ಫೂರ್ತಿಯಾಗಿದ್ದು ನಿರೂಪಕಿ ಅನುಪಮಾ ಗೌಡ. ಹೌದು, ಈ ಮೊದಲು ಅನುಪಮಾ ಗೌಡ ಕೂಡ ಪ್ರೀತಿಯಿಂದ ಬೆಳೆಸಿದ್ದ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದರು. ಇದೀಗ ಇಬ್ಬನಿ ಕೂಡ ಅದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ತನ್ನ ಕೂದಲು ದಾನಕ್ಕೆ ಅನುಪಮ ಗೌಡ ಅವರೇ ಪ್ರೇರಣೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇಬ್ಬನಿ ತಾಯಿ, ನಟಿ ಸುಪ್ರಿತಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತನ್ನ ಕೂದಲನ್ನು ಇಬ್ಬನಿ ದಾನ ಮಾಡಿದ್ದಾಳೆ. ಇಬ್ಬನಿಗೆ ಅನುಪಮಾ ಗೌಡ ಸ್ಫೂರ್ತಿ' ಎಂದು ಹೇಳಿದ್ದಾರೆ.
ಒಂದೊಳ್ಳೆ ಕಾರಣಕ್ಕೆ ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿದ ಅನುಪಮಾ ಗೌಡ
ಈ ಬಗ್ಗೆ ಸುಪ್ರಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಇನ್ನು ದೀರ್ಘವಾಗಿ ಬರೆದುಕೊಂಡಿದ್ದಾರೆ. 'ಅನುಪಮಾ ಗೌಡ profile ನೋಡ್ತಾ ಇಬ್ಬನಿ ಕೇಳಿದ್ಲು, ಅಮ್ಮ ಅನುಪಮಾ ಆಂಟಿ ಯಾಕೆ ಕೂದಲು ಕಟ್ ಮಾಡಿಸಿಕೊಂಡಿದ್ದಾರೆ ಅಂತ. ಕ್ಯಾನ್ಸರ್ ಪೇಶೆಂಟ್‌ಗೆ ಡೊನೇಟ್ ಮಾಡೋಕೆ ಅಂತ ನಾನು, ಅವಳಿಗೆ ಅರ್ಥ ಆಗೋ ಹಾಗೆ ಹೇಳಿ ಸುಮ್ಮನಾದೆ. ನನ್ನ ಮಾತು ಕೇಳಿ ಆಕೆ, ಅಮ್ಮ, ಈ ಹುಟ್ಟು ಹಬ್ಬಕ್ಕೆ ನಾನು, ನನ್ನ ತಲೆ ಕೂದಲನ್ನು ಕ್ಯಾನ್ಸರ್ ಪೇಶೆಂಟ್‌ಗೆ ಡೊನೇಟ್ ಮಾಡ್ತೀನಿ ಅಂತ ವಿಶ್ವಾಸದಿಂದ ಹೇಳಿದ್ಲು. ಇಬ್ಬನಿಯ ಈ ಮಾತು ಕೇಳಿ ಒಂದ್ ಕ್ಷಣ ನಾನು ಅವಕ್ಕಾದೆ. ಆಕೆಯ ಇಚ್ಛೆಯಂತೆ ಈ ಸದುದ್ದೇಶಕ್ಕಾಗಿ ಆಕೆಯ ಕೂದಲನ್ನು donate ಮಾಡಿದ್ವಿ' ಎಂದು ಬರೆದುಕೊಂಡಿದ್ದಾರೆ.
'ಚಿಕ್ಕ ಮಕ್ಕಳು ಅಂತ ನಾವು ಅನ್ಕೊಂಡರೆ ಆಲೋಚನೆಯಲ್ಲಿ ಅವರು ನಮಗಿಂತ ಎಷ್ಟು ದೊಡ್ಡವರು ಆಗಿರುತ್ತಾರೆ. ಇವತ್ತು ಇಬ್ಬನಿನಾ ನೋಡಿದ್ರೆ ಆಕೆಯಿಂದ ನಾನು ಕಲಿಯೋದು ಬಹಳಷ್ಟಿದೆ ಅನ್ನಿಸ್ತು, ಆಕೆಯ ಮೇಲಿನ ಪ್ರೀತಿ, ಗೌರವ ನೂರ್ಮಡಿಸಿತು. ಸದ್ದಿಲ್ಲದೆ ಪ್ರೇರಣೆ ನೀಡಿದ ಅನುಪಮಾ ಗೌಡಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲೇಬೇಕು' ಎಂದು ಕನ್ನಡದಲ್ಲಿ ಪೋಸ್ಟ್ ಮಾಡಿದ್ದಾರೆ.
ಹತ್ತು ವರ್ಷಗಳಿಂದ ಪ್ಲ್ಯಾನ್ ಮಾಡುತ್ತಿದ್ದ ಗೋವಾ ಟ್ರಿಪ್‌ಗೆ ಹೋದಾ ಕಿರುತೆರೆ ನಟಿಯರು!
ಇದಕ್ಕೆ ಅನುಪಮಾ ಗೌಡ ಪ್ರತಿಕ್ರಿಯೆ ನೀಡಿ, 'ನಾನು ಏನು ಹೇಳಲಿ? ಇದನ್ನು ಪ್ರಬುದ್ಧತೆ ಮತ್ತು ದಯೆ ಎಂದು ಕರೆಯುತ್ತೇನೆ. ಅವಳು ಅದನ್ನ ಪಡೆದುಕೊಂಡಿದ್ದಾಳೆ. ಇನ್ನು ಅನೇಕರು ಮುಂದೆ ಬಂದು ದೇಣಿಗೆ ನೀಡಲು ಪ್ರೇರೇಪಿಸಿದ್ದಾಳೆ. ಲವ್ ಯು ಪುಟಾಣಿ' ಎಂದು ಹೇಳಿದ್ದಾರೆ.
ಕೂದಲು ದಾನ ಮಾಡಿದ್ದ ಅನುಪಮಾ ಗೌಡ
ಕಳೆದ ಕೆಲವು ದಿನಗಳ ಹಿಂದೆ ನಟಿ, ನಿರೂಪಕಿ ಅನುಪಮ ಗೌಡ ತನ್ನ ಕೂದಲಿಗೆ ಕತ್ತರಿ ಹಾಕಿದ್ದರು. ಒಂದೊಳ್ಳೆ ಕಾರಣಕ್ಕೆ ಕೂದಲು ದಾನ ಮಾಡಿದ ಬಗ್ಗೆ ಬಹಿರಂಗ ಪಡಿಸಿದ್ದರು. 'ನನ್ನ ಕೂದಲು ಸಹ ನನ್ನ ಪಯಣದ ಒಂದು ಭಾಗವಾಗಿದೆ. ಇವತ್ತು ಇದನ್ನ ನನ್ನ ಆತ್ಮವಿಶ್ವಾಸದ ಸಂತಸವನ್ನು ಅಗತ್ಯವಿರೋರಿಗೆ ದಾನ ಮಾಡಲು ಸಂತೋಷವಾಗುತ್ತಿದೆ. ನಾನು ದೀರ್ಘ ಸಮಯದಿಂದ ಕುದಲಿಗೆ ಕತ್ತರಿ ಹಾಕಿರಲಿಲ್ಲ ಮತ್ತು ತುಂಬಾ ಪ್ರೀತಿಯಿಂದ ಬೆಳೆಸಿದ್ದೆ. ಅಲ್ಲಿರುವ ನನ್ನ ಅದ್ಭುತ ಹೋರಾಟಗಾರರಿಗೆ ನನ್ನ ಕೈಲಾದಷ್ಟು ಮಾಡುವ ಸಮಯ ಇದು. ಇದು ಅವರ ಜೀವನದಲ್ಲಿ ಒಂದು ಸಣ್ಣ ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿದ್ದೇನೆ. ಈ ಪೋಸ್ಟ್ ಅನ್ನು ನಾನು ಹಾಕುತ್ತಿರುವ ಉದ್ದೇಶ ಇನ್ನಷ್ಟು ಜನರಿಗೆ ಪ್ರೇರಣೆ ಆಗಲಿ' ಎಂದು ಬರೆದುಕೊಂಡಿದ್ದರು. ಇದೀಗ ಇಬ್ಬನಿ ಕೂಡ ಅದೇ ಒಳ್ಳೆಯ ಕೆಲಸ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.